ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಕ್ಕಾಗಿ ಒಡಿಶಾ ಕಾಂಗ್ರೆಸ್ ಮೂವರು ಶಾಸಕರಾದ ಸೋಫಿಯಾ ಫಿರ್ದೌಸ್, ರಮೇಶ್ ಜೆನಾ ಮತ್ತು ದಾಸರಥಿ ಗೊಮಾಂಗೊ ಅವರನ್ನು ಅಮಾನತುಗೊಳಿಸಿದೆ.
ಒಡಿಶಾ ವಿಧಾನಸಭೆಯಲ್ಲಿ ಕಾಂಗ್ರೆಸ್ 14 ಶಾಸಕರನ್ನು ಹೊಂದಿದ್ದು, ನಾಲ್ಕನೇ ರಾಜ್ಯಸಭಾ ಸ್ಥಾನಕ್ಕೆ ಬಿಜೆಡಿ ಅಭ್ಯರ್ಥಿ ದತ್ತೇಶ್ವರ್ ಹೋಟಾ ಅವರಿಗೆ ಬೆಂಬಲ ನೀಡಿತ್ತು. ಆದರೆ, ಬಿಜೆಡಿ ಮತ್ತು ಕಾಂಗ್ರೆಸ್ ಶಾಸಕರ ಅಡ್ಡ ಮತದಾನದಿಂದಾಗಿ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ಆಯ್ಕೆಯಾಗಿದ್ದಾರೆ.
ಶಾಸಕರು ರೇ ಪರವಾಗಿ ಅಡ್ಡ ಮತದಾನ ಮಾಡಿದ್ದರಿಂದ, ವಿರೋಧ ಪಕ್ಷವು ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಗೆಲ್ಲಿಸಿಕೊಳ್ಳಲು ಸಾಧ್ಯವಾಗಿದೆ. ಆದರೆ, ಬಿಜೆಪಿ ಎರಡು ಸ್ಥಾನಗಳನ್ನು ಆರಾಮವಾಗಿ ಪಡೆದುಕೊಂಡಿದ್ದು, ಒಂದು ಸ್ಥಾನವನ್ನು ಸ್ವತಂತ್ರ ಅಭ್ಯರ್ಥಿ ಮೂಲಕ ಗಳಿಸಿದೆ.
ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ವಿಭಾಗದ ಅಧ್ಯಕ್ಷ ಅರಬಿಂದ ದಾಸ್, “ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಶಾಸಕರನ್ನು ಅಮಾನತುಗೊಳಿಸಲಾಗಿದೆ” ಎಂದಿದ್ದಾರೆ.
“ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮೂವರು ಸದಸ್ಯರು ಪಕ್ಷದ ವಿರುದ್ಧ ನಡೆದುಕೊಂಡು, ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪರವಾಗಿ ಮತ ಚಲಾಯಿಸಿದ್ದಾರೆ. ಈ ಹಿನ್ನೆಲೆ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಅಮಾನತುಗೊಂಡವರಲ್ಲಿ ಗಜಪತಿ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಶರಥಿ ಗೊಮಾಂಗೊ, ನಿಯಾಮ್ ಜಿಲ್ಲೆಯ ಸಾನಖೇಮುಂಡಿ ಕ್ಷೇತ್ರದ ಶಾಸಕ ರಮೇಶ್ ಜೆನಾ ಮತ್ತು ಬಾರಾಬತಿ-ಕಟಕ್ ಕ್ಷೇತ್ರದ ಶಾಸಕಿ ಸೋಫಿಯಾ ಫಿರ್ದೌಸ್ ಸೇರಿದ್ದಾರೆ. ಪಕ್ಷವಿರೋಧಿ ಚಟುವಟಿಕೆಗಳ ಕಾರಣದಿಂದ ಈ ಮೂವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ” ಎಂದು ಅರಬಿಂದ ದಾಸ್ ಮಂಗಳವಾರ (ಮಾ.17) ತಿಳಿಸಿದ್ದಾರೆ.
ಬಿಜೆಪಿ ಅಭ್ಯರ್ಥಿಗಳಾದ ಮನಮೋಹನ್ ಸಮಾಲ್ ಮತ್ತು ಸುಜೀತ್ ಕುಮಾರ್, ಬಿಜೆಡಿಯ ಸಂತ್ರಪ್ ಮಿಶ್ರಾ ಮತ್ತು ಸ್ವತಂತ್ರ ಅಭ್ಯರ್ಥಿ ದಿಲೀಪ್ ರೇ ರಾಜ್ಯಸಭೆ ಈ ಬಾರಿಯ ಚುನಾವಣೆಯಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ.


