ವಿಶ್ವದ ಅತಿದೊಡ್ಡ ಲಿಕ್ವಿಫೈಡ್ ನ್ಯಾಚುರಲ್ ಗ್ಯಾಸ್ (ಎಲ್‌ಎನ್‌ಜಿ) ರಫ್ತು ಕೇಂದ್ರಗಳಲ್ಲಿ ಒಂದಾದ ಖತಾರ್‌ನ ರಾಸ್ ಲಫನ್ ಇಂಡಸ್ಟ್ರಿಯಲ್ ಸಿಟಿ ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.
ಈ ದಾಳಿಯಿಂದಾಗಿ ಅಲ್ಲಿನ ಅನಿಲ ಸೌಲಭ್ಯಗಳಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, ಮೂಲಸೌಕರ್ಯಗಳಿಗೆ ಗಣನೀಯ ಹಾನಿ ಉಂಟಾಗಿದೆ ಎಂದು ಖತಾರ್ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅದೃಷ್ಟವಶಾತ್, ಈ ಘಟನೆಯಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಈ ದಾಳಿಯನ್ನು ಖತಾರ್ ತೀವ್ರವಾಗಿ ಖಂಡಿಸಿದ್ದು, ಇದು ತನ್ನ ಸಾರ್ವಭೌಮತ್ವದ ಮೇಲಿನ ದಾಳಿ ಮತ್ತು ಪ್ರಾದೇಶಿಕ ಭದ್ರತೆಗೆ ನೇರ ಬೆದರಿಕೆ ಎಂದು ಎಂದು ಹೇಳಿದೆ.
ದಾಳಿಯ ಪರಿಣಾಮವಾಗಿ, ಖತಾರ್‌ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮಿಲಿಟರಿ ಅಧಿಕಾರಿಗಳನ್ನು ‘ಪರ್ಸೋನಾ ನಾನ್ ಗ್ರಾಟಾ’ (Persona non grata) ಎಂದು ಘೋಷಿಸಲಾಗಿದೆ.
‘ಪರ್ಸೋನಾ ನಾನ್ ಗ್ರಾಟಾ’ (Persona non grata) ಎಂಬುದು ಲ್ಯಾಟಿನ್ ಪದವಾಗಿದ್ದು, ಇದರ ನೇರ ಅರ್ಥ “ಸ್ವೀಕಾರಾರ್ಹವಲ್ಲದ ವ್ಯಕ್ತಿ“ ಎಂದಾಗುತ್ತದೆ.
ಒಂದು ದೇಶವು ತನ್ನಲ್ಲಿರುವ ವಿದೇಶಿ ರಾಯಭಾರಿ ಅಥವಾ ಅಧಿಕಾರಿಯನ್ನು ತನ್ನ ದೇಶದಲ್ಲಿ ಇರಲು ಇಷ್ಟಪಡದಿದ್ದಾಗ ಈ ಪದವನ್ನು ಬಳಸುತ್ತದೆ.
ಸಾಮಾನ್ಯವಾಗಿ ಬೇಹುಗಾರಿಕೆ (Spying), ಅಪರಾಧ ಚಟುವಟಿಕೆಗಳು ಅಥವಾ ಆ ದೇಶದ ವಿರುದ್ಧದ ಕೆಲಸಗಳಲ್ಲಿ ತೊಡಗಿಕೊಂಡಾಗ ಈ ಘೋಷಣೆ ಮಾಡಲಾಗುತ್ತದೆ.
ಒಮ್ಮೆ ಒಬ್ಬ ಅಧಿಕಾರಿಯನ್ನು ‘ಪರ್ಸೋನಾ ನಾನ್ ಗ್ರಾಟಾ’ ಎಂದು ಘೋಷಿಸಿದರೆ, ಅವರು ತಕ್ಷಣವೇ ಆ ದೇಶವನ್ನು ಬಿಟ್ಟು ಹೋಗಬೇಕಾಗುತ್ತದೆ. ಇಲ್ಲದಿದ್ದರೆ ಅವರು ತಮ್ಮ ರಾಜತಾಂತ್ರಿಕ ರಕ್ಷಣೆಯನ್ನು ಕಳೆದುಕೊಳ್ಳುತ್ತಾರೆ.
ಖತಾರ್ ಮತ್ತು ಇರಾನ್ ನಡುವಿನ ಈ ಪ್ರಕರಣದಲ್ಲಿ, ಇರಾನ್‌ನ ಮಿಲಿಟರಿ ಅಧಿಕಾರಿಗಳನ್ನು ಖತಾರ್ ಸರ್ಕಾರವು ತನ್ನ ದೇಶದಿಂದ ಹೊರಹಾಕಲು ಈ ಅಧಿಕೃತ ಆದೇಶವನ್ನು ಬಳಸಿದೆ.
ವಿಶ್ವದ ಎಲ್‌ಎನ್‌ಜಿ ರಫ್ತಿನಲ್ಲಿ ಸುಮಾರು 20% ಪಾಲು ಹೊಂದಿರುವ ಖತಾರ್‌ನ ಮೇಲೆ ನಡೆದ ಇರಾನ್ ದಾಳಿಯು ಜಾಗತಿಕ ಇಂಧನ ಪೂರೈಕೆಯ ಮೇಲೆ ಆತಂಕ ಮೂಡಿಸಿದೆ.
ಈ ಘಟನೆಯ ನಂತರ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ರಕ್ಷಣಾ ಪಡೆಗಳು ಕಟ್ಟೆಚ್ಚರ ವಹಿಸಿವೆ.


