ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇತರರ ವಿರುದ್ಧ ದಾಖಲಾಗಿರುವ ಮುಡಾ ಭೂ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ‘ಬಿ ರಿಪೋರ್ಟ್’ / ಮುಕ್ತಾಯ ವರದಿಯನ್ನು ವಿಚಾರಣಾ ನ್ಯಾಯಾಲಯ ಸ್ವೀಕರಿಸುವುದನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗುರುವಾರ (ಮಾರ್ಚ್ 26) ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಏಕಸದಸ್ಯ ಪೀಠವು ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಬಿ.ಎಂ ಪಾರ್ವತಿ, ಅವರ ಸೋದರ ಮಾವ ಮಲ್ಲಿಕಾರ್ಜುನ ಸ್ವಾಮಿ, ಭೂಮಾಲೀಕ ದೇವರಾಜು, ಇಡಿ ಮತ್ತು ಲೋಕಾಯುಕ್ತ ಪೊಲೀಸರು ಸೇರಿದಂತೆ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಹೇಳಿದೆ.
ಜನವರಿ 28ರಂದು ವಿಚಾರಣಾ ನ್ಯಾಯಾಲಯ ಆಪಾದಿತ ಹಗರಣದಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸಲ್ಲಿಸಿದ್ದ ಬಿ ರಿಪೋರ್ಟ್ ಸ್ವೀಕರಿಸಿತ್ತು. ಇದರ ವಿರುದ್ದ ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಅರ್ಜಿಯಲ್ಲಿ ಬಿ ರಿಪೋರ್ಟ್ ತಿರಸ್ಕರಿಸಬೇಕೆಂದು ಕೋರಿದ್ದಾರೆ. ಪ್ರಕರಣದ ತನಿಖೆಯನ್ನು ಸ್ವತಂತ್ರ ತನಿಖಾ ಸಂಸ್ಥೆಗೆ ವರ್ಗಾಯಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಕರಣದ ಹೊಸ ತನಿಖೆಗೆ ನಿರ್ದೇಶನ ನೀಡಬೇಕು. ಸಿಆರ್‌ಪಿಸಿ ಸೆಕ್ಷನ್ 173 (ಈಗ ಬಿಎನ್‌ಎಸ್‌ಎಸ್ ಸೆಕ್ಷನ್ 193) ಅಡಿಯಲ್ಲಿ ಹೊಸ ವರದಿ ಸಲ್ಲಿಸಲು ಸದರಿ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಬೇಕು. ತನಿಖೆಯನ್ನು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರು ಮೇಲ್ವಿಚಾರಣೆ ಮಾಡಬೇಕು ಎಂದು ಅರ್ಜಿಯಲ್ಲಿ ಕೋರಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ಅಥವಾ ಪ್ರಾಸಿಕ್ಯೂಷನ್‌ಗೆ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 17ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 218ರ ಅಡಿಯಲ್ಲಿ ರಾಜ್ಯಪಾಲರು ನೀಡಿದ್ದ ಅನುಮತಿಯನ್ನು ಎತ್ತಿಹಿಡಿದು, ‘ಸಿದ್ದರಾಮಯ್ಯ ಮತ್ತು ಕರ್ನಾಟಕ ರಾಜ್ಯ ಹಾಗೂ ಇತರರು’ ಪ್ರಕರಣದಲ್ಲಿ (ಡಬ್ಲ್ಯೂಪಿ ಸಂಖ್ಯೆ 22356/2024) ಸಮನ್ವಯ ಪೀಠವು ಸೆಪ್ಟೆಂಬರ್ 2024ರ ತನ್ನ ಆದೇಶದಲ್ಲಿ ನೀಡಿದ ಅವಲೋಕನಗಳ ಹಿನ್ನೆಲೆಯಲ್ಲಿ ಸ್ನೇಹಮಯಿ ಕೃಷ್ಣ ಈ ಪರಿಹಾರಗಳನ್ನು ಕೋರಿದ್ದಾರೆ ಎಂದು livelaw.in ವರದಿ ಹೇಳಿದೆ.
ಸ್ನೇಹಮಯಿ ಕೃಷ್ಣ ತನ್ನ ಅರ್ಜಿಯಲ್ಲಿ ದಿನಾಂಕ 30.11.2024ರ ಜಾರಿ ನಿರ್ದೇಶನಾಲಯದ (ಇಡಿ) ಪತ್ರ ವ್ಯವಹಾರ ಮತ್ತು ಜನವರಿ 2026ರ ಇಡಿ ಪತ್ರಿಕಾ ಪ್ರಕಟಣೆಯನ್ನು ಸಹ ಉಲ್ಲೇಖಿಸಿದ್ದಾರೆ.
ಪ್ರಕರಣ ಒಂದೇ ಆದರೂ, ಇತರ ಮುಡಾ ಅಧಿಕಾರಿಗಳ ವಿರುದ್ಧ ಹೆಚ್ಚಿನ ತನಿಖೆಗೆ ಆದೇಶ ನೀಡಿ, ಸಿಎಂ ಮತ್ತು ಅವರ ಕುಟುಂಬದ ಸದಸ್ಯರ ಪರ ‘ಬಿ’ ರಿಪೊರ್ಟ್ ಅನ್ನು ವಿಚಾರಣಾ ನ್ಯಾಯಾಲಯ ಅಂಗೀಕರಿಸಿದ್ದರ ಬಗ್ಗೆ ಸ್ನೇಹಮಯಿ ಕೃಷ್ಣ ಸಂಶಯ ವ್ಯಕ್ತಪಡಿಸಿದ್ದಾರೆ.
ಸಿಎಂ, ಅವರ ಕುಟುಂಬದ ಸದಸ್ಯರು ಮತ್ತು ಭ್ರಷ್ಟ ಅಧಿಕಾರಿಗಳು ಸೇರಿ ಈ ಮುಡಾ ಭೂ ಹಗರಣವನ್ನು ಒಂದು ‘ಏಕರೂಪದ, ಸಂಯೋಜಿತ ಸಂಚಿನ ಯೋಜನೆ’ಯಡಿ ನಡೆಸಿದ್ದಾರೆ ಎಂಬ ವಾಸ್ತವವನ್ನು ವಿಚಾರಣಾ ನ್ಯಾಯಾಲಯವು ಪರಿಗಣಿಸುವಲ್ಲಿ ವಿಫಲವಾಗಿದೆ ಎಂದು ಕೃಷ್ಣ ಆರೋಪಿಸಿದ್ದಾರೆ.
ಸಾರ್ವಜನಿಕ ಹುದ್ದೆಯಲ್ಲಿರುವ ಒಬ್ಬ ಹಾಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧದ ದುರುಪಯೋಗದ ಆರೋಪಗಳಿರುವ ಪ್ರಕರಣದಲ್ಲಿ ‘ಬಿ’ ರಿಪೋರ್ಟ್ ಅಂಗೀಕರಿಸುವುದು ತನಿಖಾ ಪ್ರಕ್ರಿಯೆಯ ನ್ಯಾಯಸಮ್ಮತತೆ ಮತ್ತು ನಿಷ್ಪಕ್ಷಪಾತದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಕುಗ್ಗಿಸುತ್ತದೆ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಇಡಿ ಸಲ್ಲಿಸಿದ ಪತ್ರ ವ್ಯವಹಾರ ಮತ್ತು ದಾಖಲೆಗಳನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಪ್ರಕರಣದ ಆರಂಭಿಕ ಹಂತದಲ್ಲಿಯೇ ‘ಸಂದೇಹಾತೀತ ಸಾಕ್ಷ್ಯಾಧಾರದ ಮಾನದಂಡ’ವನ್ನು (standard of proof beyond reasonable doubt) ಅಳವಡಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದಾರೆ.


