ಯುಎಇ ರಾಜಧಾನಿ ಅಬುಧಾಬಿ ಸೇರಿದಂತೆ ವಿವಿಧ ಪ್ರದೇಶಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಸಂದರ್ಭದಲ್ಲಿ, ಕ್ಷಿಪಣಿಗಳ ಅವಶೇಷಗಳು ಬಿದ್ದ ಪರಿಣಾಮ ಐವರು ಭಾರತೀಯರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಅಬುಧಾಬಿಯ ಸರ್ಕಾರಿ ಮಾಧ್ಯಮ ಕಚೇರಿ ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, “ಈ ಘಟನೆಯಲ್ಲಿ ಭಾರತೀಯ ಮೂಲದ ಐವರು ವ್ಯಕ್ತಿಗಳು ಗಾಯಗೊಂಡಿದ್ದು, ಅವರಲ್ಲಿ ಕೆಲವರಿಗೆ ಮಧ್ಯಮ ಮಟ್ಟದ ಗಾಯಗಳಾಗಿದ್ದರೆ, ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ” ಎಂದು ತಿಳಿಸಲಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷವು ಒಂದು ತಿಂಗಳು ಪೂರೈಸುತ್ತಿರುವಾಗ ಇರಾನ್ ಗಲ್ಫ್ ರಾಷ್ಟ್ರಗಳ ಮೇಲೆ ಸತತ ದಾಳಿಗಳನ್ನು ನಡೆಸುತ್ತಿದೆ. “ಇರಾನ್ ಉಡಾಯಿಸಿದ ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಎದುರಿಸಲು ತನ್ನ ವಾಯು ರಕ್ಷಣಾ ವ್ಯವಸ್ಥೆಯು ಸಜ್ಜಾಗಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ಹೇಳಿದೆ.
ಅಬುಧಾಬಿ ಸರ್ಕಾರಿ ಮಾಧ್ಯಮ ಕಚೇರಿಯು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಎಮಿರೇಟ್‌ನ ಖಲೀಫಾ ಎಕನಾಮಿಕ್ ಝೋನ್ (KEZAD) ಪ್ರದೇಶದಲ್ಲಿ ಸಂಭವಿಸಿದ ಎರಡು ಅಗ್ನಿ ಅವಘಡಗಳನ್ನು ನಿಯಂತ್ರಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.
ಬ್ಯಾಲಿಸ್ಟಿಕ್ ಕ್ಷಿಪಣಿಯೊಂದನ್ನು ವಾಯು ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಹೊಡೆದುರುಳಿಸಿದಾಗ, ಅದರ ಅವಶೇಷಗಳು ಕೆಳಗೆ ಬಿದ್ದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಅಂದರೆ, ಕ್ಷಿಪಣಿಯು ಗುರಿಯನ್ನು ತಲುಪುವ ಮೊದಲೇ ಅದನ್ನು ಆಕಾಶದಲ್ಲಿಯೇ ನಾಶಪಡಿಸಲಾಗಿದ್ದು, ಅದರ ಚೂರುಗಳು ಬಿದ್ದ ಜಾಗದಲ್ಲಿ ಅಗ್ನಿ ಅವಘಡ ಸಂಭವಿಸಿದೆ ಎಂದಿದೆ.


