ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಟಿವಿಕೆ ಎಂಬ ಪಕ್ಷ, 75 ವರ್ಷಗಳ ಅನುಭವಿ ಪಕ್ಷವಾದ ಡಿಎಂಕೆಯನ್ನು ಸೋಲಿಸಿರುವುದು, ಕಳೆದ ಅರವತ್ತು ವರ್ಷಗಳಲ್ಲಿ ಮೊಟ್ಟ ಮೊದಲ ಬಾರಿಗೆ ದ್ರಾವಿಡ ಚಳುವಳಿ ಹಿನ್ನೆಲೆಯ ಪಕ್ಷವನ್ನು ಅಧಿಕಾರದಿಂದ ಹೊರಗುಳಿಯುವಂತೆ ಮಾಡಿದ್ದು ಈ ಚುನಾವಣೆಯ ಬಹುದೊಡ್ಡ ಅಚ್ಚರಿ ಎಂದರೆ ತಪ್ಪಾಗಲಾರದು.
ವಿಜಯ್ ತಮ್ಮ ಚುನಾವಣಾ ಪ್ರಚಾರದಲ್ಲಿ ಹೆಚ್ಚು ಮಾತನಾಡಿದ್ದು ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆಯೇ. ಇದು ಅವರ ಪಕ್ಷ ಹೆಚ್ಚು ಮತಗಳಿಸಲು ಸಾಧ್ಯವಾಗಿದೆ ಎಂದು ಹೇಳಲಾಗುತ್ತಿದೆ. ಅಂದರೆ ತಮಿಳುನಾಡಿನ ಜನರಲ್ಲಿ ಭ್ರಷ್ಟಾಚಾರದ ವಿರುದ್ದ ಈ ಮಟ್ಟಿಗಿನ ಜಾಗೃತಿ ಮೂಡಿ ಅದು ಮತಗಳಾಗಿ ಪರಿವರ್ತನೆಗೊಂಡಿದೆ ಎಂದರೆ ಸ್ವಾಗತಾರ್ಹವೇ. ಆದರೆ ಅದೇ ಟಿವಿಕೆ ಪಕ್ಷದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತಿರುವ ಹಲವರು ಈ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂಬುದು ವೈರುದ್ಯವೇ ಸರಿ.
ಭ್ರಷ್ಟಾಚಾರ ಮತ್ತು ತಮಿಳುನಾಡು:
ತಮಿಳುನಾಡು ಭಾರತದ ಅತ್ಯಂತ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿದ್ದರೂ, ಇಲ್ಲಿನ ರಾಜಕೀಯ ಇತಿಹಾಸವು ಗಂಭೀರ ಭ್ರಷ್ಟಾಚಾರದ ಹಗರಣಗಳಿಂದ ಕೂಡಿದೆ. ದ್ರಾವಿಡ ಚಳವಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಅಧಿಕಾರ ಹಿಡಿದಾಗಲೆಲ್ಲಾ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಲೇ ಬಂದಿವೆ.
1. ಎಂ. ಕರುಣಾನಿಧಿ ಮತ್ತು ಸರ್ಕಾರಿಯಾ ಆಯೋಗ (1970):
ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಚರ್ಚೆ ಆರಂಭವಾಗುವುದು 1970ರ ದಶಕದಲ್ಲಿ. ಆಗಿನ ಡಿಎಂಕೆ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಕೇಳಿಬಂದವು. ಕೇಂದ್ರ ಸರ್ಕಾರವು ನೇಮಿಸಿದ ಸರ್ಕಾರಿಯಾ ಆಯೋಗವು ಕರುಣಾನಿಧಿ ಮತ್ತು ಅವರ ಸಹೋದ್ಯೋಗಿಗಳು ವೈಮಾನಿಕ ಸಿಂಪಡಣೆ ಕಾಂಟ್ರಾಕ್ಟ್‌ಗಳಲ್ಲಿ ಮತ್ತು ಇತರ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ವರದಿ ನೀಡಿತ್ತು. ಇದು ದ್ರಾವಿಡ ರಾಜಕಾರಣದ ಇತಿಹಾಸದಲ್ಲಿ ಮೊದಲ ದೊಡ್ಡ ಕಳಂಕವಾಗಿ ದಾಖಲಾಯಿತು.
2. ಜಯಲಲಿತಾ ಮತ್ತು ಅಕ್ರಮ ಆಸ್ತಿ ಗಳಿಕೆ ಪ್ರಕರಣ (1990):
ತಮಿಳುನಾಡು ರಾಜಕಾರಣದ ಅತ್ಯಂತ ಚರ್ಚಿತ ಪ್ರಕರಣವೆಂದರೆ ಜೆ. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣ. 1991-96ರ ಅವಧಿಯಲ್ಲಿ ಜಯಲಲಿತಾ ಅವರು ಸುಮಾರು 66 ಕೋಟಿ ರೂಪಾಯಿಗಳಿಗೂ ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಆರೋಪಿಸಲಾಯಿತು. ಈ ಪ್ರಕರಣದಲ್ಲಿ ಅವರ ನಿವಾಸದ ಮೇಲೆ ನಡೆದ ದಾಳಿಯಲ್ಲಿ 28ಕೆಜಿ ಚಿನ್ನ, 100 ಕೆಜಿ ಬೆಳ್ಳಿ, ಮತ್ತು 10,000ಕ್ಕೂ ಹೆಚ್ಚು ಸೀರೆಗಳು ಪತ್ತೆಯಾಗಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣಕ್ಕಾಗಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಯಿತು.
ಜಯಲಲಿತಾ ಅವರ ನಿಧನದ ನಂತರವೂ ಈ ಭ್ರಷ್ಟಾಚಾರದ ಕಲೆ ಎಐಎಡಿಎಂಕೆಯನ್ನು ಬೆಂಬಿಡದೆ ಕಾಡಿತು. ಶಶಿಕಲಾ ಅವರ ಜೈಲು ವಾಸ ಮತ್ತು ಪಕ್ಷದೊಳಗಿನ ಭಿನ್ನಮತಕ್ಕೆ ಈ ಹಳೆಯ ಪ್ರಕರಣಗಳೇ ತಳಹದಿಯಾಗಿದ್ದವು.
ಪ್ರಸ್ತುತ ಡಿಎಂಕೆ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ವಿ. ಸೆಂಥಿಲ್ ಬಾಲಾಜಿ ಅವರ ಮೇಲಿನ ‘ಕೆಲಸಕ್ಕಾಗಿ ಲಂಚ’ (Cash-for-jobs) ಪ್ರಕರಣ ಮತ್ತು ಇತ್ತೀಚಿನ 397 ಕೋಟಿ ರೂಪಾಯಿಗಳ ಟೆಂಡರ್ ಅಕ್ರಮ ಆರೋಪಗಳು ತಮಿಳುನಾಡಿನಲ್ಲಿ ಭ್ರಷ್ಟಾಚಾರದ ಪರಂಪರೆ ಇಂದಿಗೂ ಜೀವಂತವಾಗಿದೆ ಎಂಬುದನ್ನು ತೋರಿಸುತ್ತವೆ.
ವಿಜಯ್ ಪಾರ್ಟಿಯಲ್ಲೂ ಇದ್ದಾರೆ ಕಳಂಕಿತರು:
ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ತಮಿಳುನಾಡಿನಲ್ಲಿ ಭರ್ಜರಿ ಜಯ ಸಾಧಿಸಿದೆ ಎಂಬುದು ಎಷ್ಟು ನಿಜವೋ, ಅದರ ಶಾಸಕರ ಪಟ್ಟಿಯಲ್ಲಿರುವ ‘ಕ್ರಿಮಿನಲ್ ಹಿನ್ನೆಲೆ’ಯ ಅಂಕಿಅಂಶಗಳು ಅಷ್ಟೇ ಚರ್ಚೆಗೆ ಗ್ರಾಸವಾಗಿವೆ. ವಿಜಯ್ ಅವರು “ಸ್ವಚ್ಛ ರಾಜಕಾರಣ”ದ ಮಾತಾಡಿದರೂ, ಗೆದ್ದ ಅಭ್ಯರ್ಥಿಗಳ ಹಿನ್ನೆಲೆಯನ್ನು ಕೆದಕಿದಾಗ ಹತ್ತು ಹಲವು ಶಾಸಕರು ಕ್ರಿಮಿನಲ್ ಹಿನ್ನಲೆ ಉಳ್ಳವರು ಎಂಬುದನ್ನು ಮರೆಮಾಚುವಂತಿಲ್ಲ.
ಚುನಾವಣಾ ಪ್ರಚಾರದ ಉದ್ದಕ್ಕೂ ವಿಜಯ್ ಅವರು ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳನ್ನು “ಭ್ರಷ್ಟಾಚಾರದ ಕೂಟಗಳು” ಎಂದು ಕರೆಯುತ್ತಿದ್ದರು. “ನಾವು ಬದಲಾವಣೆಯ ಹರಿಕಾರರು” ಎಂದು ಜನರಿಗೆ ಭರವಸೆ ನೀಡಿದ್ದರು. ಆದರೆ, 2026ರ ಶಾಸಕರ ಪಟ್ಟಿಯನ್ನು ಗಮನಿಸಿದಾಗ, ಈ ಭರವಸೆ ಕೇವಲ ಚುನಾವಣಾ ಗಿಮಿಕ್ ಆಗಿತ್ತೇ ಎಂಬ ಅನುಮಾನ ಮೂಡುತ್ತದೆ. ಏಕೆಂದರೆ, ಗೆದ್ದ ಶಾಸಕರಲ್ಲಿ ಸರಿಸುಮಾರು ಶೇ. 20ರಷ್ಟು ಮಂದಿ ಕ್ರಿಮಿನಲ್ ಅಥವಾ ಆರ್ಥಿಕ ಅಕ್ರಮಗಳ ಹಿನ್ನೆಲೆ ಹೊಂದಿದ್ದಾರೆ.
ಇಂತಹ ವಿಷಯಗಳನ್ನ ಚರ್ಚಿಸುವಾಗ, ಈಗೆಲ್ಲ ರಾಜಕಾರಣದಲ್ಲಿ ಕ್ರಿಮಿನಲ್ ಹಿನ್ನಲೆ ಅಥವಾ ಭ್ರಷ್ಟಾಚಾರ ಎಂಬುದು ಸರ್ವೇ ಸಾಮಾನ್ಯ ಎನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿಬರುತ್ತವೆ. ಆದರೆ ಡರ್ಟಿ ಪಾಲಿಟಿಕ್ಸ್ ಎಂಬುದನ್ನು ರಾಜಕೀಯ ಪಕ್ಷಗಳು ಸದಾ ಕಾಲಕ್ಕೂ ಪೋಷಿಸಿಕೊಂಡು ಬರುತ್ತಿರುವುದರಿಂದಲೇ, ಭ್ರಷ್ಟಾಚಾರ, ಅಕ್ರಮ ಆಸ್ತಿಗಳಿಕೆಯಂತಹ ಗಂಭೀರ ಅಪರಾಧ ಪ್ರಕರಣಗಳು ನಡೆದಾಗಲೂ ಅದಕ್ಕೆ ಹೆಚ್ಚಿನ ವಿರೋಧಗಳೇನು ವ್ಯಕ್ತವಾಗುವುದಿಲ್ಲ. ಕ್ರಿಮಿನಲ್ ಹಿನ್ನಲೆ ಹೊಂದಿದ ಜಪ್ರತಿನಿಧಿಗೆ ಅದೊಂದು ಅವಮಾನದ ಅಥವಾ ಸಂವಿಧಾನಕ್ಕೆ ಎಸಗಿದ ದ್ರೋಹ ಎಂದೆನಿಸುವುದೇ ಇಲ್ಲ.
ಈಗ ತಮಿಳುನಾಡಿನಲ್ಲಿ ಟಿವಿಕೆ ಒಟ್ಟು ಗೆದ್ದ 108 ಶಾಸಕರಲ್ಲಿ ಸರಿಸುಮಾರು ಶೇ. 20 ರಿಂದ 25 ರಷ್ಟು (ಅಂದರೆ ಶೇ 22-26 ಶಾಸಕರು) ಅಭ್ಯರ್ಥಿಗಳು ತಮ್ಮ ಅಫಿಡವಿಟ್‌ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. ಇವರಲ್ಲಿ ಅರ್ಧದಷ್ಟು ಮಂದಿ ‘ಗಂಭೀರ ಕ್ರಿಮಿನಲ್ ಪ್ರಕರಣ’ಗಳನ್ನು (Serious Criminal Cases) ಎದುರಿಸುತ್ತಿದ್ದಾರೆ.
ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಹೆಚ್ಚಿನ ಶಾಸಕರು ಟಿವಿಕೆಯ ಹಳೆಯ ಕಾರ್ಯಕರ್ತರಲ್ಲ. ಬದಲಾಗಿ, ಚುನಾವಣೆಯ ಅಂತಿಮ ಹಂತದಲ್ಲಿ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳಿಂದ ಟಿಕೆಟ್ ಸಿಗದೆ ಅಥವಾ ಪಕ್ಷಾಂತರ ಮಾಡಿ ಟಿವಿಕೆ ಸೇರಿದವರು. ದ್ರಾವಿಡ ಪಕ್ಷಗಳ ಭದ್ರಕೋಟೆಯನ್ನು ಭೇದಿಸಲು ವಿಜಯ್ ಅವರು ಅನಿವಾರ್ಯವಾಗಿ ಇಂತಹ ‘ಬಲಿಷ್ಠ’ (Strongmen) ನಾಯಕರಿಗೆ ಟಿಕೆಟ್ ನೀಡಿರುವುದನ್ನು ನೋಡಿದರೆ, ತಮ್ಮ ಚುನಾವಣಾ ಪ್ರಚಾರದ ವೇಳೆ ಭ್ರಷ್ಟಾಚಾರ ವಿರುದ್ದ ಮಾತನಾಡಿದ ಅವರ ನೈಜ ಕಾಳಜಿ ಬಗ್ಗೆ ಪ್ರಶ್ನೆಯನ್ನುಟ್ಟು ಹಾಕುತ್ತದೆ.
ಹಲವು ಶಾಸಕರ ಮೇಲೆ ಪ್ರತಿಭಟನೆ, ಸಾರ್ವಜನಿಕ ಶಾಂತಿ ಭಂಗದಂತಹ ಪ್ರಕರಣಗಳಿವೆ. ಇವುಗಳನ್ನು ಸಾಮಾನ್ಯವಾಗಿ ರಾಜಕೀಯ ಹೋರಾಟದ ಭಾಗವೆಂದು ಪರಿಗಣಿಸಲಾಗುತ್ತದೆ. ಆದರೆ ಸುಮಾರು 10ಕ್ಕೂ ಹೆಚ್ಚು ಶಾಸಕರು ಭೂಕಬಳಿಕೆ, ಹಲ್ಲೆ ಮತ್ತು ಹಣಕಾಸು ಅಕ್ರಮಗಳಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇದು “ಬದಲಾವಣೆ” ಬಯಸಿದ ಮತದಾರರಲ್ಲಿ ಅಸಮಾಧಾನ ಮೂಡಿಸುವ ಸಾಧ್ಯತೆಯಿದೆ.
ಆರ್.ಕೆ. ನಗರ ಕ್ಷೇತ್ರದಲ್ಲಿ ಗೆದ್ದಿರುವ ಮೇರಿ ವಿಲ್ಸನ್ ಅವರ ಮೇಲೆ 1.10 ಕೋಟಿ ರೂಪಾಯಿಗಳ ವಂಚನೆಯ ಆರೋಪವಿದ್ದು, ಚುನಾವಣೆಗೆ ಕೆಲವೇ ದಿನಗಳ ಮೊದಲು ದೂರು ದಾಖಲಾಗಿತ್ತು. ಅರಕ್ಕೋಣಂ ಶಾಸಕ ವಿ. ಗಾಂಧಿರಾಜ್ ಸೇರಿದಂತೆ ಹಲವರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಹೊತ್ತುಕೊಂಡೇ ಸದನ ಪ್ರವೇಶಿಸಿದ್ದಾರೆ.
ಟಿವಿಕೆ ಶಾಸಕರು ಮತ್ತು ಅವರ ಮೇಲಿರುವ ಕ್ರಿಮಿನಲ್ ಪ್ರಕರಣಗಳ ವಿವರ:
| ಶಾಸಕರ ಹೆಸರು | ಕ್ಷೇತ್ರ | ಹಿನ್ನೆಲೆ | ಪ್ರಕರಣಗಳ ಸ್ವರೂಪ |
| ಪ್ರಕಾಶ್ (ಕುಟ್ಟಿ) | ಪೂಂದಮಲ್ಲಿ | ಟಿವಿಕೆ ಜಿಲ್ಲಾ ಕಾರ್ಯದರ್ಶಿ | ಇವರ ಮೇಲೆ ಲೈಂಗಿಕ ಕಿರುಕುಳದ (Sexual Harassment) ಆರೋಪದಡಿ ಪ್ರಕರಣ ದಾಖಲಾಗಿದೆ. |
| ಪಿ. ರಾಜೇಂದ್ರನ್ | ತಿರುವಣ್ಣಾಮಲೈ ದಕ್ಷಿಣ | ಎಐಎಡಿಎಂಕೆಯಿಂದ ಬಂದವರು | ಭೂಕಬಳಿಕೆ, ಅಕ್ರಮ ಆಸ್ತಿ ಗಳಿಕೆ ಮತ್ತು ಅಧಿಕಾರ ದುರ್ಬಳಕೆ. |
| ಎಂ. ಕುಮಾರ್ | ಕಾಂತಲೂರು | ಡಿಎಂಕೆಯಿಂದ ಬಂದವರು | ದಂಗೆ (Rioting), ಕ್ರಿಮಿನಲ್ ಬೆದರಿಕೆ ಮತ್ತು ಹಲ್ಲೆ ಪ್ರಕರಣಗಳು. |
| ವಿ. ಗಾಂಧಿರಾಜ್ | ಅರಕ್ಕೋಣಂ | ಡಿಎಂಕೆಯಿಂದ ಬಂದವರು | ಹಣಕಾಸು ವಂಚನೆ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣಗಳು. |
| ಜೆ. ಪ್ರಕಾಶ್ | ಚೆನ್ನೈ ಭಾಗ | ಉದ್ಯಮಿ / ರಾಜಕಾರಣಿ | ಚೆಕ್ ಬೌನ್ಸ್ ಮತ್ತು ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ದೂರುಗಳು. |
| ವಿ. ಶಂಕರ್ | ಮಧುರೈ ಭಾಗ | ಸ್ಥಳೀಯ ಪ್ರಭಾವಿ ನಾಯಕ | ಸಾರ್ವಜನಿಕ ಆಸ್ತಿಗೆ ಹಾನಿ ಮತ್ತು ಅಕ್ರಮ ಕೂಟ ರಚನೆ (Unlawful Assembly). |
ವಿಜಯ್ ಅವರು ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳಲು “ಗೆಲ್ಲುವ ಅಭ್ಯರ್ಥಿಗಳಿಗೆ” (Winnable Candidates) ಮಣೆ ಹಾಕಿದರು. ಹೀಗೆ ಮಣೆ ಹಾಕುವಾಗ ಅವರ ಹಳೆಯ ಕ್ರಿಮಿನಲ್ ಹಿನ್ನಲೆಯನ್ನು ಕಡೆಗಣಿಸಲಾಗಿದೆ. ಭ್ರಷ್ಟಾಚಾರ ಮುಕ್ತ ಸಮಾಜದ ಮಾತಾಡುವ ಪಕ್ಷವು, ಭ್ರಷ್ಟಾಚಾರದ ಆರೋಪ ಹೊತ್ತವರನ್ನೇ ಶಾಸಕರನ್ನಾಗಿ ಮಾಡುವುದು ನೈತಿಕವಾಗಿ ಎಷ್ಟು ಸರಿ? ಇದು ಹಳೆಯ ಪಕ್ಷಗಳ ಶೈಲಿಯನ್ನೇ ಅನುಸರಿಸಿದಂತಾಗುವುದಿಲ್ಲವೇ?
ಸಾಮಾನ್ಯ ಮತದಾರರು ವಿಜಯ್ ಅವರನ್ನು ಒಬ್ಬ ‘ರಕ್ಷಕ’ನಂತೆ ನೋಡಿ ಓಟು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಸದನದಲ್ಲಿ ಕುಳಿತುಕೊಳ್ಳುವ ಶಾಸಕರು ಅದೇ ಹಳೆಯ ‘ಬಾಹುಬಲಿ’ಗಳಾಗಿದ್ದರೆ, ಬದಲಾವಣೆ ಬಯಸುವುದಾದರೂ ಹೇಗೆ? ಕ್ರಿಮಿನಲ್ ಮತ್ತು ಭ್ರಷ್ಟಾಚಾರದ ಹಿನ್ನೆಲೆ ಇರುವ ಶಾಸಕರು ಅಭಿವೃದ್ಧಿ ಕೆಲಸಗಳಿಗಿಂತ ತಮ್ಮ ಮೇಲಿರುವ ಪ್ರಕರಣಗಳನ್ನು ಮುಚ್ಚಿಹಾಕಲು ಅಧಿಕಾರವನ್ನು ಬಳಸಿಕೊಳ್ಳುವ ಅಪಾಯ ಹೆಚ್ಚು.
ಚುನಾವಣಾ ಪ್ರಚಾರದ ಭಾಷಣಗಳಲ್ಲಿ ಭ್ರಷ್ಟಾಚಾರದ ವಿರುದ್ದ ಮಾತನಾಡುತ್ತಲೇ, ಡಿಎಂಕೆ ಮತ್ತು ಎಐಎಡಿಂಕೆ ಪಕ್ಷಗಳಿಂದ ಬಂದಂತಹ ಕ್ರಿಮಿನಲ್ ಹಿನ್ನಲೆಯ ನಾಯಕರಿಗೆ ಟಿವಿಕೆ ಚುನಾವಣೆಯಲ್ಲಿ ನಿಲ್ಲಲ್ಲು ಅವಕಾಶ ನೀಡಿದ್ದನ್ನು ನೋಡಿದರೆ, ಈಗಾಗಲೆ ಪ್ರಚಲಿತದಲ್ಲಿರುವ ಗೆಲ್ಲುವ ಸೂತ್ರಗಳ ಸಿದ್ದ ಮಾದರಿಗಳನ್ನು ಅನುಸರಿಸಿಯೇ ಇವರೂ ಕೂಡ ಅಧಿಕಾರಕ್ಕೆರಲು ಬಂದಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.
ಇಷ್ಟೆಲ್ಲವನ್ನು ಹೇಳಲು ಮುಖ್ಯಕಾರಣ, ವಿಜಯ್ ಅವರ ಮೊದಲ ಚುನಾವಣಾ ಜಯವನ್ನು ದಕ್ಷಿಣ ಭಾರತದ ಸಾಮಾನ್ಯ ಜನ ಅಚ್ಚರಿ ಮತ್ತು ಪ್ರೀತಿಯಿಂದ ನೋಡುತ್ತಿರುವ ಹೊತ್ತಲ್ಲಿ , ಇವರೂ ಕೂಡ ಹತ್ತರಲ್ಲಿ ಒಂದು ಎಂಬಂತಾಗಬಾರದು ಎಂಬ ಆಶಯ ಹಲವರದ್ದು. ಹಾಗಾಗಿ ಮುಂದಿನ ದಿನಗಳಲ್ಲಿ ಇದೆಲ್ಲವನ್ನು ಹೇಗೆ ನಿಭಾಯಿಸುತ್ತಾರೆ, ಭಷ್ಟಾಚಾರದ ಆರೋಪ ಮತ್ತು ಕ್ರಿಮಿನಲ್ ಹಿನ್ನಲೆಯ ಶಾಸಕರನ್ನು ಹೇಗೆ ಕಂಟ್ರೋಲ್ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.


