ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ ‘ನಿಯಂತ್ರಣ ಕಾಯ್ದುಕೊಳ್ಳುವಂತೆ’ ಮಂಗಳವಾರ (ಜೂ. 2) ಹೈಕೋರ್ಟ್ ಸೂಚಿಸಿದೆ ಎಂದು ಕಾನೂನು ಸುದ್ದಿ ಸಂಸ್ಥೆ livelaw.in ವರದಿ ಮಾಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು, ಪುತ್ತೂರು ತಾಲೂಕಿನ ಉಪ್ಪಳಿಗೆಯಲ್ಲಿ 2025ರ ಅಕ್ಟೋಬರ್ನಲ್ಲಿ ನಡೆದ ದೀಪೋತ್ಸವ ಕಾರ್ಯಕ್ರಮವೊಂದರಲ್ಲಿ ಪ್ರಭಾಕರ್ ಭಟ್ ಅವರು ಮಾಡಿದ ಭಾಷಣದ ವಿರುದ್ಧ ದಾಖಲಾದ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿತು.
ವಿಚಾರಣೆಯ ವೇಳೆ, ದೂರುದಾರೆ ಕರ್ನಾಟಕ ರಾಜ್ಯ ದಲಿತ ಹಕ್ಕುಗಳ ರಾಜ್ಯ ಸಮಿತಿಯ ಸದಸ್ಯೆ ಈಶ್ವರಿ ಪದ್ಮುಂಜ ಅವರು ವಾದ ಮಂಡಿಸಿ, ಅರ್ಜಿದಾರರು ‘ಬೆಳಗ್ಗೆ ಎದ್ದು ಮೈಕ್ ಹಿಡಿದು ಕೇವಲ ವಿಷ ಉಗುಳುತ್ತಾರೆ’ ಮತ್ತು ಅವರು ಮುಸ್ಲಿಮರ ವಿರುದ್ಧ ಹಲವು ಸಂದರ್ಭಗಳಲ್ಲಿ ಪದೇ ಪದೇ ಮಾತನಾಡಿದ್ದಾರೆ ಎಂದು ತಿಳಿಸಿದರು. ಅಲ್ಲದೆ, ಅರ್ಜಿದಾರರು ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ನಿರ್ಬಂಧಿಸಲು ನ್ಯಾಯಾಲಯದ ನಿರ್ದೇಶನವನ್ನು ಕೋರಿದರು.
ಈ ಹಂತದಲ್ಲಿ, ನ್ಯಾಯಾಲಯವು ಅರ್ಜಿದಾರರಿಗೆ ನಿಯಂತ್ರಣ ಕಾಯ್ದುಕೊಳ್ಳುವಂತೆ ಸಲಹೆ ನೀಡಿತು ಮತ್ತು “ವಿಷ ಕಾರದೆ, ನೀವು ಮಾತನಾಡಿ… ಪದೇ ಪದೇ ದೂರುಗಳು ದಾಖಲಾಗಲು ಯಾಕೆ ಅವಕಾಶ ನೀಡುತ್ತೀರಿ? ಆದರೆ, ಈ ವಿಷಯಕ್ಕೆ ನಾವು ಕಾನೂನಾತ್ಮಕವಾಗಿ ಉತ್ತರಿಸುತ್ತೇವೆ” ಎಂದಿತು.
ದೂರುದಾರರ ಆರೋಪದ ಪ್ರಕಾರ, ಆರೋಪಿಯು ಮುಸ್ಲಿಂ ಸಮುದಾಯದ ಜನನ ದರವನ್ನು ಹಿಂದೂ ಸಮುದಾಯದ ಜನನ ದರದೊಂದಿಗೆ ಹೋಲಿಸಿದ್ದರು ಮತ್ತು ‘ಮಹಾಲಿಂಗೇಶ್ವರ ಸ್ವಾಮಿ’ಗಾಗಿ ಹಿಂದೂಗಳ ಜನಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಹೇಳಿದ್ದರು. ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂ ಜನಸಂಖ್ಯೆ ಕಡಿಮೆಯಿರುವುದನ್ನು ಪ್ರಸ್ತಾಪಿಸಿದ್ದರು ಮತ್ತು ‘ಪ್ರತಿಯೊಂದು ಹಿಂದೂ ಕುಟುಂಬದಲ್ಲಿ ಕನಿಷ್ಠ ಮೂರು ಮಕ್ಕಳನ್ನು’ ಹೊಂದುವಂತೆ ಅಲ್ಲಿದ್ದ ಜನಸಮೂಹಕ್ಕೆ ಕರೆ ನೀಡಿದ್ದರು.
ಈ ಹೇಳಿಕೆಗಳು ಎರಡೂ ಸಮುದಾಯಗಳ ಮಹಿಳೆಯರ ಘನತೆಗೆ ಧಕ್ಕೆ ತಂದಿವೆ, ಧಾರ್ಮಿಕ ದ್ವೇಷವನ್ನು ಉತ್ತೇಜಿಸಿವೆ ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತಂದಿವೆ ಎಂದು ದೂರುದಾರರು ಆರೋಪಿಸಿದ್ದರು.
ಪ್ರಭಾಕರ ಭಟ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 3(5), 79, 196, 299 ಮತ್ತು 302 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಸಂಬಂಧಿತ ಇತರ ಅರ್ಜಿಗಳೊಂದಿಗೆ ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಜೂನ್ 16ಕ್ಕೆ ನಿಗದಿಪಡಿಸಿದೆ.
ಪ್ರಭಾಕರ ಭಟ್ ಇಂತಹ ದ್ವೇಷಪೂರಿತ ಭಾಷಣಗಳನ್ನು ಮುಂದುವರಿಸದಂತೆ ಮಧ್ಯಂತರ ನಿರ್ದೇಶನ ನೀಡಬೇಕೆಂದು ದೂರುದಾರರು ಕೋರಿದಾಗ, ಆರೋಪಿಯು ಈಗಾಗಲೇ ತಾವು ಇದನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.
ಇದಕ್ಕೂ ಮುನ್ನ, ಇದೇ ಎಫ್ಐಆರ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಹೈಕೋರ್ಟ್ ವಿವಾದಾತ್ಮಕ ಭಾಷಣದ ಸಂಪೂರ್ಣ ಪ್ರತಿಲೇಖನವನ್ನು (ಟ್ರಾನ್ಸ್ಸ್ಕ್ರಿಪ್ಟ್) ಪಡೆದುಕೊಂಡಿತ್ತು ಮತ್ತು ಪ್ರಭಾಕರ ಭಟ್ ವಿರುದ್ಧ ಯಾವುದೇ ಬಲವಂತದ ಕ್ರಮವನ್ನು ತೆಗೆದುಕೊಳ್ಳಬಾರದು ಎಂದು ಆದೇಶಿಸಿತ್ತು; ಈ ಆದೇಶವನ್ನು ಇಂದಿನವರೆಗೂ ವಿಸ್ತರಿಸಿಕೊಂಡು ಬರಲಾಗಿದೆ.
ಪ್ರಭಾಕರ ಭಟ್ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಮ್ ಮತ್ತು ಎರಡನೇ ಪ್ರತಿವಾದಿ (ದೂರುದಾರರ) ಪರವಾಗಿ ವಕೀಲರಾದ ಬಾಲಕೃಷ್ಣ ಅವರು ಹಾಜರಾಗಿದ್ದರು.


