ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಹೀನಾಯ ಸೋಲಿನ ಹಿನ್ನೆಲೆಯಲ್ಲಿ, ಅತ್ಯಂತ ನಿರ್ಣಾಯಕವಾದ ಸಾಂಸ್ಥಿಕ ಜವಾಬ್ದಾರಿಗೆ ನೇಮಕಗೊಂಡ ಕೇವಲ ಒಂದು ತಿಂಗಳ ಒಳಗಾಗಿಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯ ಘಟಕದ ಅಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಅವರು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಣಕ್ಕೆ ಸಂಕಷ್ಟದ ಸರಮಾಲೆಯೇ ಸೃಷ್ಟಿಯಾದಂತಾಗಿದೆ.
ಟಿಎಂಸಿ ಅಧ್ಯಕ್ಷೆಗೆ ಬರೆದಿರುವ ಪತ್ರದಲ್ಲಿ ಭಟ್ಟಾಚಾರ್ಯ ಅವರು ಪಕ್ಷದ ಇತರ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದು, ಇದು ಅವರು ಪಕ್ಷದೊಂದಿಗಿನ ಎಲ್ಲಾ ಪ್ರಾಯೋಗಿಕ ಸಂಬಂಧಗಳನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದಾರೆಯೇ ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮತ್ತು ಚರ್ಚೆಗಳನ್ನು ಹುಟ್ಟುಹಾಕಿದೆ.
ಕೊನೆಯದಾಗಿ, ನಾನು ನಿಮ್ಮ ಬಗ್ಗೆ ಅತ್ಯುನ್ನತ ಗೌರವವನ್ನು ಹೊಂದಿದ್ದೇನೆ ಮತ್ತು ಯಾವಾಗಲೂ ನಿಮಗೆ ಗೌರವ ಪೂರ್ವಕವಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಲು ಬಯಸುತ್ತೇನೆ, ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಮತಾ ಬ್ಯಾನರ್ಜಿ ಸಂಪುಟದಲ್ಲಿ ಸಚಿವೆಯಾಗಿದ್ದ ಭಟ್ಟಾಚಾರ್ಯ ಅವರು ಹಣಕಾಸು ಮತ್ತು ಆರೋಗ್ಯದಂತಹ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ಜೊತೆಗೆ ಪಕ್ಷದ ಮಹಿಳಾ ಘಟಕದ ನೇತೃತ್ವ ವಹಿಸಿದ್ದ ಪ್ರಮುಖ ನಾಯಕಿಯೂ ಆಗಿದ್ದಾರೆ.
ಇದರೊಂದಿಗೆ, ವಿವಿಧ ಬ್ಯಾಂಕ್ಗಳಲ್ಲಿರುವ ಪಕ್ಷದ ಖಾತೆಗಳ ಅಧಿಕೃತ ಸಹಿದಾರರ ಜವಾಬ್ದಾರಿಯಿಂದ ಹಾಗೂ ಚುನಾವಣಾ ಆಯೋಗದ ಮುಂದೆ ಹಾಜರಾಗಲು ಮಮತಾ ಬ್ಯಾನರ್ಜಿ ಅವರ ಅಧಿಕೃತ ಪ್ರತಿನಿಧಿಯಾಗಿದ್ದ ಹೊಣೆಗಾರಿಕೆಯಿಂದಲೂ ಭಟ್ಟಾಚಾರ್ಯ ಅವರು ತಮ್ಮನ್ನು ಮುಕ್ತಗೊಳಿಸಿಕೊಂಡಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲ್ಕತ್ತಾದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಾದ ‘ತೃಣಮೂಲ ಭವನ’ದ ಕಾರ್ಯಾಚರಣೆಯ ನಿಯಂತ್ರಣವನ್ನು ರಿತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣದ ಕೈಗೆ ಸಿಗುವಂತೆ ಮಾಡಿದ್ದಾರೆ ಎಂದು ಆರೋಪಿಸಿ, ಮಮತಾ ಬ್ಯಾನರ್ಜಿ ಅವರು ಫೋನ್ನಲ್ಲಿ ತಮಗೆ ತರಾಟೆಗೆ ತೆಗೆದುಕೊಂಡಿದ್ದೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದರು.
“ನಾನು ಬಂಡಾಯಗಾರರಿಗೆ ಪಕ್ಷದ ಕಚೇರಿಯನ್ನು ಹಸ್ತಾಂತರಿಸಿದ್ದೇನೆ ಎಂದು ಅವರು (ಮಮತಾ ಬ್ಯಾನರ್ಜಿ) ನನಗೆ ಕರೆ ಮಾಡಿ ಹೇಳಿದಾಗ ನನಗೆ ತೀವ್ರ ಆಘಾತವಾಯಿತು ಮತ್ತು ನೋವಾಯಿತು. ಆದರೆ ನಾನು ಹಾಗೆ ಹೇಗೆ ಮಾಡಿದೆ ಎಂಬುದು ನನಗೇ ತಿಳಿಯುತ್ತಿಲ್ಲ. ನನ್ನ ನಿಷ್ಠೆ ಮತ್ತು ನಂಬಿಕೆಯನ್ನು ಬುಡಮೇಲು ಮಾಡಿರುವುದು ಇದರಿಂದ ಸ್ಪಷ್ಟವಾಗಿದೆ. ಈ ಹಿಂದೆ ಎಂದೂ ಹೀಗೆ ಆಗಿರಲಿಲ್ಲ. ಒಮ್ಮೆ ಆ ಮೂಲಭೂತ ನಂಬಿಕೆಯೇ ಹೋದಮೇಲೆ, ನಾನು ಪಕ್ಷದಲ್ಲಿ ಉಳಿಯಲು ಅಥವಾ ಅದಕ್ಕೆ ಮರಳಲು ಯಾವುದೇ ಕಾರಣವಿಲ್ಲ, ಎಂದು ಭಟ್ಟಾಚಾರ್ಯ ಪತ್ರಕರ್ತರಿಗೆ ತಿಳಿಸಿದ್ದಾರೆ.
ಆದರೆ, ಪಕ್ಷದೊಳಗಿನ ತೀವ್ರಗೊಳ್ಳುತ್ತಿರುವ ಬಣ ರಾಜಕೀಯದ ಕುರಿತು ಮತ್ತು ತಾವು ಯಾವ ಬಣವನ್ನು ಬೆಂಬಲಿಸುತ್ತೀರಿ ಎಂಬ ಬಗ್ಗೆ ಪ್ರತಿಕ್ರಿಯಿಸಲು ಭಟ್ಟಾಚಾರ್ಯ ನಿರಾಕರಿಸಿದರು. “ಈ ವಿಷಯಗಳು ಚುನಾವಣಾ ಆಯೋಗ ಅಥವಾ ನ್ಯಾಯಾಲಯದ ಮುಂದೆ ಇರುವುದರಿಂದ ಸದ್ಯಕ್ಕೆ ಇದು ನ್ಯಾಯಾಲಯದ ಪರಿಧಿಯಲ್ಲಿದೆ ಎಂಬ ಕಾರಣ ನೀಡಿದರು.
ಇದಾದ ಕೆಲವೇ ಕ್ಷಣಗಳಲ್ಲಿ, ಭಟ್ಟಾಚಾರ್ಯ ಅವರು ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ಅವರ ಕೊಠಡಿಯಲ್ಲಿ ಬಂಡಾಯ ಬಣದ ನಾಯಕರೊಂದಿಗೆ ಸಭೆ ನಡೆಸಿದರು.
ವಿಧಾನಸಭೆಯ ಗೇಟ್ ಬಳಿ ಬಂಡಾಯ ಬಣದ ಪ್ರಮುಖ ಸದಸ್ಯ ಮತ್ತು ವಿರೋಧ ಪಕ್ಷದ ಉಪ ನಾಯಕರಾದ ಸಂದೀಪನ್ ಸಹಾ ಅವರು ಭಟ್ಟಾಚಾರ್ಯ ಅವರನ್ನು ಸ್ವಾಗತಿಸಿದರು. ಇತ್ತೀಚೆಗಷ್ಟೇ ಕೋಲ್ಕತ್ತಾ ಮಹಾನಗರ ಪಾಲಿಕೆಯ ಮಾಜಿ ಟಿಎಂಸಿ ಕೌನ್ಸಿಲರ್ ಆಗಿರುವ ಇವರ ಪುತ್ರ ಸೌರವ್ ಬಸು ಬಂಡಾಯ ಬಣವನ್ನು ಸೇರಿಕೊಂಡು ಅದರ ಸಭೆಗಳಲ್ಲಿ ಭಾಗವಹಿಸಿದ್ದರು. ಈ ವಿಧಾನಸಭೆಯ ಆಂತರಿಕ ಸಭೆಯಲ್ಲೂ ಅವರು ಉಪಸ್ಥಿತರಿದ್ದುದು ಕಂಡುಬಂದಿತು ಎಂದು ಪಿಟಿಐ ವರದಿ ಮಾಡಿದೆ.
ಜೂನ್ 5 ರಂದು ಮಮತಾ ಬ್ಯಾನರ್ಜಿ ಅವರ ಕಾಳೀಘಾಟ್ ನಿವಾಸದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಹಿರಿಯ ನಾಯಕ ಸುಬ್ರತಾ ಬಕ್ಷಿ ಅವರ ಸ್ಥಾನಕ್ಕೆ ಭಟ್ಟಾಚಾರ್ಯ ಅವರನ್ನು ಹೊಸ ರಾಜ್ಯ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ಪಶ್ಚಿಮ ಬಂಗಾಳದ ಮೂರು ಬಾರಿಯ ಶಾಸಕಿಯಾಗಿದ್ದ ಇವರು 2026ರ ವಿಧಾನಸಭಾ ಚುನಾವಣೆಯಲ್ಲಿ ದಮ್ ದಮ್ ಉತ್ತರ್ ಕ್ಷೇತ್ರದಲ್ಲಿ ಬಿಜೆಪಿಯ ಸೌರವ್ ಸಿಕ್ದರ್ ವಿರುದ್ಧ ಸೋಲು ಕಂಡಿದ್ದರು.


