ನರ್ಮದಾಪುರಂ ಜಿಲ್ಲಾ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರು ತಮ್ಮ ಕರ್ತವ್ಯ ನಿರ್ವಹಣೆಯ ಕಾರಣಕ್ಕಾಗಿ ಬೆದರಿಕೆ ಮತ್ತು ನಿಂದನೆಗೆ ಒಳಗಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮಧ್ಯಪ್ರದೇಶ ಹೈಕೋರ್ಟ್, ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಾಲಯದ ಆದೇಶಗಳ ವಿರುದ್ಧ ಮೇಲ್ಮನವಿ ಸಲ್ಲಿಸಬಹುದೇ ಹೊರತು, ನ್ಯಾಯಾಧೀಶರು ನೀಡಿದ ನಿರ್ದಿಷ್ಟ ಆದೇಶ ಸಮಾಜದ ಒಂದು ವರ್ಗಕ್ಕೆ ಇಷ್ಟವಾಗಿಲ್ಲ ಎಂಬ ಕಾರಣಕ್ಕೆ ಅವರಿಗೆ ಬೆದರಿಕೆ ಹಾಕಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ವಿವೇಕ್ ಅಗರ್ವಾಲ್ ಮತ್ತು ಅವನೀಂದ್ರ ಸಿಂಗ್ ಅವರ ಪೀಠ ಹೇಳಿದೆ.
ನ್ಯಾಯಾಧೀಶೆ ತಬಸ್ಸುಮ್ ಖಾನ್ ಅವರನ್ನು ಗುರಿಯಾಗಿಸಿರುವ ಇಂತಹ ಪ್ರಕರಣಗಳು “ನಮ್ಮ ನ್ಯಾಯಾಂಗ ಅಧಿಕಾರಿಗಳ ನಿರ್ಭೀತ ಕಾರ್ಯವೈಖರಿ ಮತ್ತು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ನೇರವಾಗಿ ಅಡ್ಡಿಪಡಿಸುತ್ತವೆ” ಎಂದು ಪೀಠ ಬುಧವಾರ (ಜುಲೈ 1) ಹೊರಡಿಸಿದ ತನ್ನ ಆದೇಶದಲ್ಲಿ ತಿಳಿಸಿದೆ.
ನ್ಯಾಯಾಧೀಶೆ ಖಾನ್ ಅವರಿಗೆ ಬೆದರಿಕೆ ಹಾಕಿದವರನ್ನು ಪತ್ತೆಹಚ್ಚಲು ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಮೂರು ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡುವಂತೆ ನ್ಯಾಯಾಧೀಶರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಗೆ ನಿರ್ದೇಶನ ನೀಡಿದ್ದಾರೆ.
ಅಲ್ಲದೆ, ನ್ಯಾಯಾಧೀಶೆ ಖಾನ್ ಅವರಿಗೆ ನರ್ಮದಾಪುರಂ ಪೊಲೀಸ್ ವರಿಷ್ಠಾಧಿಕಾರಿಗಳಿಂದ ರಕ್ಷಣೆ ನೀಡುವಂತೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರವು, ಜಿಲ್ಲಾ ನ್ಯಾಯಾಧೀಶರಿಗೆ ಈಗಾಗಲೇ ರಕ್ಷಣೆ ನೀಡಲಾಗಿದೆ ಎಂದು ಪೀಠಕ್ಕೆ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್) ದಾಖಲಿಸಲಾಗಿದೆ ಎಂದು ಉಪ ಅಡ್ವೊಕೇಟ್ ಜನರಲ್ ಅಭಿಜೀತ್ ಅವಸ್ತಿ ಅವರು ಮಾಹಿತಿ ನೀಡಿದ್ದಾರೆ.
2022ರಲ್ಲಿ ನರ್ಮದಾಪುರಂನಲ್ಲಿ ನಡೆದ ಜಾನುವಾರು ಸಾಗಣೆದಾರರೊಬ್ಬರ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜೂನ್ 12ರಂದು ಏಳು ಮಂದಿ ಅಪರಾಧಿಗಳಿಗೆ ನ್ಯಾಯಾಧೀಶೆ ಖಾನ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದರು. ನಂತರ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಅಪರಾಧಿಗಳನ್ನು ಬಿಡುಗಡೆ ಮಾಡದಿದ್ದರೆ ‘ಮಾರಣಹೋಮ’ ನಡೆಸುವುದಾಗಿ ಒಬ್ಬ ವ್ಯಕ್ತಿ ವಿಡಿಯೋ ಪೋಸ್ಟ್ ಮಾಡಿದ್ದರೆ, ಮತ್ತೊಂದು ಖಾತೆಯು ನ್ಯಾಯಾಧೀಶೆಯನ್ನು ದೇಶದಿಂದ ಹೊರಹಾಕುವಂತೆ ಹಿಂದೂಗಳಿಗೆ ಕರೆ ನೀಡಿದೆ. ಇನ್ನು ಕೆಲವರು ಆಕೆಯ ಧರ್ಮದ ಕಾರಣಕ್ಕಾಗಿಯೇ ಈ ತೀರ್ಪು ಬಂದಿದೆ ಎಂದು ಬರೆದುಕೊಂಡಿದ್ದಾರೆ.
“ಕಾನೂನಿನ ಚೌಕಟ್ಟಿನಲ್ಲಿ ನೀಡಲಾದ ತೀರ್ಪಿಗೆ ನ್ಯಾಯಾಧೀಶರು ವೈಯಕ್ತಿಕ ಪರಿಣಾಮಗಳನ್ನು ಎದುರಿಸುವುದಾದರೆ, ಅದು ಭಾರತೀಯ ನ್ಯಾಯಾಂಗ ವ್ಯವಸ್ಥೆಯ ‘ಬೆನ್ನೆಲುಬು’ ಆಗಿರುವ ಜಿಲ್ಲಾ ನ್ಯಾಯಾಲಯಗಳ ಸ್ವಾತಂತ್ರ್ಯ ಮತ್ತು ಕಾರ್ಯವೈಖರಿಯ ಮೇಲೆ ತೀವ್ರ ನಕಾರಾತ್ಮಕ ಪರಿಣಾಮ ಬೀರಬಹುದು” ಎಂದು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಬುಧವಾರ ಹೇಳಿದೆ.
ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯುನೈಟೆಡ್ ಕ್ರಿಶ್ಚಿಯನ್ ಫೋರಂ (ಯುಸಿಎಫ್) ಕೂಡ ನ್ಯಾಯಾಧೀಶರಾದ ಖಾನ್ ಅವರೊಂದಿಗೆ ತನ್ನ ಒಗ್ಗಟ್ಟನ್ನು ವ್ಯಕ್ತಪಡಿಸಿದೆ ಮತ್ತು ಅವರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಅಭಿಯಾನವನ್ನು ಬಲವಾಗಿ ಖಂಡಿಸಿದೆ.
“ಈ ಉದ್ದೇಶಪೂರ್ವಕ ಹಗೆತನದ ವಿರುದ್ಧ ಯುಸಿಎಫ್ ನ್ಯಾಯಾಧೀಶರಾದ ತಬಸ್ಸುಮ್ ಖಾನ್ ಅವರೊಂದಿಗೆ ದೃಢವಾಗಿ ನಿಲ್ಲುತ್ತದೆ; ದೇಶದ ಸ್ವತಂತ್ರ ನ್ಯಾಯಾಂಗದ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ ಮತ್ತು ರಾಜ್ಯ ಸರ್ಕಾರವು ಅವರಿಗೆ ಶೀಘ್ರದಲ್ಲೇ ತಕ್ಷಣದ ಮತ್ತು ಸಮಗ್ರ ಭದ್ರತೆಯನ್ನು ಒದಗಿಸುವುದರ ಜೊತೆಗೆ, ಅವರ ವಿರುದ್ಧ ದ್ವೇಷದ ಅಭಿಯಾನವನ್ನು ಪ್ರಚೋದಿಸುತ್ತಿರುವ ವ್ಯಕ್ತಿಗಳನ್ನು ಕಾನೂನಿನ ಅಡಿಯಲ್ಲಿ ತ್ವರಿತವಾಗಿ ವಿಚಾರಣೆಗೆ ಒಳಪಡಿಸುತ್ತದೆ ಎಂದು ಆಶಿಸುತ್ತದೆ” ಎಂದು ಅದು ಹೇಳಿದೆ.
“ಅಂತಿಮವಾಗಿ, ಇದು ಕೇವಲ ಒಬ್ಬ ನ್ಯಾಯಾಧೀಶರ ಭದ್ರತೆಗೆ ಸಂಬಂಧಿಸಿದ ಪ್ರಶ್ನೆಯಲ್ಲ, ಬದಲಿಗೆ ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಸ್ತಂಭವನ್ನು ರಕ್ಷಿಸುವ ವಿಷಯವಾಗಿದೆ” ಎಂದು ಫೋರಂನ ರಾಷ್ಟ್ರೀಯ ಅಧ್ಯಕ್ಷ ಮೈಕೆಲ್ ವಿಲಿಯಮ್ಸ್ ಹೇಳಿದ್ದಾರೆ. “ನ್ಯಾಯಾಂಗದ ಸ್ವಾತಂತ್ರ್ಯದ ಮೇಲಿನ ವಿಶ್ವಸಂಸ್ಥೆಯ ಮೂಲಭೂತ ತತ್ವಗಳಂತಹ ಅಂತಾರಾಷ್ಟ್ರೀಯ ಚೌಕಟ್ಟುಗಳು, ನ್ಯಾಯಾಧೀಶರು ಯಾವುದೇ ಸೂಕ್ತವಲ್ಲದ ಪ್ರಭಾವಗಳು, ಪ್ರಲೋಭನೆಗಳು ಅಥವಾ ಬೆದರಿಕೆಗಳಿಂದ ಮುಕ್ತವಾಗಿ ವಿಷಯಗಳನ್ನು ನಿರ್ಧರಿಸುವುದನ್ನು ರಾಜ್ಯ ಸರ್ಕಾರವು ಖಾತರಿಪಡಿಸಬೇಕು ಎಂದು ಆದೇಶಿಸುತ್ತವೆ” ಎಂಬುದನ್ನು ಸಹ ಸಂಸ್ಥೆಯು ನೆನಪಿಸಿದೆ.


