ಗುವಾಹಟಿ: ವಿಶ್ವಪ್ರಸಿದ್ಧ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸಮೀಪ ಪ್ರಸ್ತಾವಿತ ಐಷಾರಾಮಿ ಪಂಚತಾರಾ ಹೋಟೆಲ್ ಯೋಜನೆಗಾಗಿ ಆದಿವಾಸಿಗಳ ಕೃಷಿ ಹಾಗೂ ಗೋಮಾಳ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಸ್ಸಾಂನ ಸಾಮಾಜಿಕ ಕಾರ್ಯಕರ್ತ ಪ್ರಣಬ್ ಡೋಲೆ ಅವರನ್ನು ಪೊಲೀಸರು ಕಾನೂನುಬಾಹಿರವಾಗಿ ಬಂಧಿಸಿ ಸುಳ್ಳು ಆರೋಪಗಳನ್ನು ಹೊರಿಸಿದ್ದಾರೆ ಎಂದು ‘ಗ್ರೇಟರ್ ಕಾಜಿರಂಗ ಭೂಮಿ ಮತ್ತು ಮಾನವ ಹಕ್ಕುಗಳ ರಕ್ಷಣಾ ಸಮಿತಿ’ (GKLHRPC) ಆರೋಪಿಸಿದೆ.
ಗೋಲಾಘಾಟ್ ಜಿಲ್ಲೆಯ ಇನ್ಲೇ ಪಠಾರ್ ಪ್ರದೇಶದಲ್ಲಿ ಆದಿವಾಸಿಗಳ ಒಡೆತನದಲ್ಲಿದ್ದ ಕೃಷಿ ಮತ್ತು ಮೇವು ಭೂಮಿಯನ್ನು (ಸಮುದಾಯ ಗೋಮಾಳ) ಪ್ರಸ್ತಾವಿತ ಹಯಾತ್ (Hyatt) ಗ್ರೂಪ್‌ಗೆ ಸೇರಿದ ಪಂಚತಾರಾ ಹೋಟೆಲ್ ಯೋಜನೆ ಹಾಗೂ ಆದಿವಾಸಿ ಸಾಂಸ್ಕೃತಿಕ ಪರಂಪರೆಯ ವಸ್ತು ಸಂಗ್ರಹಾಲಯ ನಿರ್ಮಾಣಕ್ಕಾಗಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುತ್ತಿದೆ. ಈ ಸ್ವಾಧೀನ ಪ್ರಕ್ರಿಯೆಯ ವಿರುದ್ಧ ಜೂನ್ ಅಂತ್ಯದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು.
ಈ ಹೋರಾಟಕ್ಕೆ ಸಂಬಂಧಿಸಿದಂತೆ ಜಿಕೆಎಲ್‌ಎಚ್‌ಆರ್‌ಪಿಸಿ (GKLHRPC) ಸಂಘಟನೆಯ ಸಂಚಾಲಕ ಹಾಗೂ 2026ರ ಅಸ್ಸಾಂ ವಿಧಾನಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿಯಾಗಿದ್ದ ಪ್ರಣಬ್ ಡೋಲೆ ಅವರನ್ನು ಭಾನುವಾರ ಬೆಳಿಗ್ಗೆ ಗುವಾಹಟಿಯಲ್ಲಿ ಅಸ್ಸಾಂ ಪೊಲೀಸರು ವಶಕ್ಕೆ ಪಡೆದರು. ಈ ಯೋಜನೆಯು 45ಕ್ಕೂ ಹೆಚ್ಚು ಆದಿವಾಸಿ ಕುಟುಂಬಗಳನ್ನು ಸ್ಥಳಾಂತರಿಸುತ್ತದೆ, ನೂರಾರು ಜನರ ದಿನನಿತ್ಯದ ಜೀವನೋಪಾಯಕ್ಕೆ ಗಂಭೀರ ಅಪಾಯ ತಂದೊಡ್ಡುತ್ತದೆ ಹಾಗೂ ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಸೂಕ್ಷ್ಮ ವನ್ಯಜೀವಿ ಕಾರಿಡಾರ್‌ಗಳ ಮೇಲೆಯೂ ಮಾರಕ ಪರಿಣಾಮ ಬೀರುತ್ತದೆ ಎಂದು ಡೋಲೆ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಧ್ವನಿ ಎತ್ತುತ್ತಿದ್ದರು.
ಸಮಿತಿಯ ಪ್ರಕಾರ, ಜೂನ್ 28 ರಂದು ಸ್ಥಳೀಯ ನಿವಾಸಿಗಳು ಮತ್ತು ಕಾರ್ಯಕರ್ತರು ಯೋಜನೆಗೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ಪ್ರಣಬ್ ಡೋಲೆ ಹಾಗೂ ಇತರ ಕಾರ್ಯಕರ್ತರು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳೊಂದಿಗೆ ಕೇವಲ ಶಾಂತಿಯುತವಾಗಿ ಮಾತುಕತೆ ನಡೆಸಲು ಯತ್ನಿಸಿದ್ದರು. ಆದರೆ, ಪೊಲೀಸರು ತರುವಾಯ ಡೋಲೆ ಸೇರಿದಂತೆ ಒಟ್ಟು 16 ಜನರ (ಡೋಲೆ ಮತ್ತು ಇತರ 15 ಜನರ) ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಕಠಿಣ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಎಫ್‌ಐಆರ್‌ನಲ್ಲಿ ಗಲಭೆ, ಕಾನೂನುಬಾಹಿರ ಸಭೆ ಸೇರುವುದು, ಕ್ರಿಮಿನಲ್ ಪಿತೂರಿ, ಅಕ್ರಮ ಅತಿಕ್ರಮಣ ಮತ್ತು ಸಾರ್ವಜನಿಕ ಸೇವಕರ (ಪೊಲೀಸರ) ಮೇಲೆ ಹಲ್ಲೆ ನಡೆಸಿರುವುದು ಸೇರಿದಂತೆ ಗಂಭೀರ ಆರೋಪಗಳನ್ನು ಹೊರಿಸಲಾಗಿದೆ. ಅಷ್ಟೇ ಅಲ್ಲದೆ, ಜೀವಾವಧಿ ಶಿಕ್ಷೆ ವಿಧಿಸಬಹುದಾದ ಅಪರಾಧಗಳಿಗೆ ಸಂಬಂಧಿಸಿದ ‘ಸೆಕ್ಷನ್ 62’ ಅನ್ನು ಸಹ ಅನ್ವಯಿಸಲಾಗಿದೆ ಎಂದು ಜಿಕೆಎಲ್‌ಎಚ್‌ಆರ್‌ಪಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಾನವ ಹಕ್ಕುಗಳ ಗುಂಪು ಆರೋಪಿಸಿರುವಂತೆ, ಭಾನುವಾರ ಬೆಳಿಗ್ಗೆ ಗುವಾಹಟಿಯಲ್ಲಿ ಡೋಲೆ ಅವರನ್ನು ಬಂಧಿಸುವಾಗ ಸೂಕ್ತ ಕಾರಣಗಳನ್ನು ತಿಳಿಸಿರಲಿಲ್ಲ. ಅಲ್ಲದೆ ಬೊಕಾಖಾಟ್ ಪೊಲೀಸರಿಗೆ ವರ್ಗಾಯಿಸುವ ಮೊದಲು ಸುಮಾರು 12 ಗಂಟೆಗಳ ಕಾಲ ಅವರನ್ನು ದಿಸ್ಪುರ್ ಪೊಲೀಸ್ ಠಾಣೆಯಲ್ಲೇ ಇರಿಸಲಾಗಿತ್ತು. ತದನಂತರ, ಅಂದರೆ ಅವರನ್ನು ವಶಕ್ಕೆ ಪಡೆದ ಸುಮಾರು 18 ಗಂಟೆಗಳ ಬಳಿಕ, ಜುಲೈ 13 ರ ಬೆಳಗಿನ ಜಾವ 3.20 ಕ್ಕೆ ಬಂಧನದ ಕಾರಣಗಳನ್ನು ತಿಳಿಸುವ ಔಪಚಾರಿಕ ನೋಟಿಸ್ ನೀಡಲಾಗಿದೆ.
ಇಷ್ಟೇ ಅಲ್ಲದೆ, ಯಾವುದೇ ಕೋರ್ಟ್ ವಾರಂಟ್ ಇಲ್ಲದೆ ಪೊಲೀಸರು ಡೋಲೆ ಅವರ ನಿವಾಸವನ್ನು ಎರಡು ಬಾರಿ ಶೋಧಿಸಿ, ಕಾರ್ಯಾಚರಣೆಯ ಸಮಯದಲ್ಲಿ ಅವರ ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ. ಇದೇ ಪ್ರಕರಣದಲ್ಲಿ ಇತರ ಇಬ್ಬರು ಕಾರ್ಯಕರ್ತರಾದ ಬ್ರಿಜಿತ್ ಕುಟುಮ್ ಮತ್ತು ಅಮಿತ್ ನಾಗ್ ಅವರನ್ನು ಸಹ ಬಂಧಿಸಲಾಗಿದೆ. ಸೋಮವಾರ ಗೋಲಾಘಾಟ್‌ನಲ್ಲಿರುವ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಡೋಲೆ ಅವರನ್ನು ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಡೋಲೆ ವಿರುದ್ಧದ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಜಿಕೆಎಲ್‌ಎಚ್‌ಆರ್‌ಪಿಸಿ, ಈ ಆರೋಪಗಳು “ಉದ್ದೇಶಪೂರ್ವಕ ಹಾಗೂ ಘೋರ” ಎಂದು ಬಣ್ಣಿಸಿದೆ. ಅಲ್ಲದೆ, ಬಂಧಿತ ಎಲ್ಲ ಕಾರ್ಯಕರ್ತರನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದೆ. ಪ್ರಸ್ತಾವಿತ ಭೂಸ್ವಾಧೀನಕ್ಕೆ ವ್ಯಕ್ತವಾಗುತ್ತಿರುವ ಜನಾಗ್ರಹ ಮತ್ತು ವಿರೋಧವನ್ನು ಹತ್ತಿಕ್ಕಲು ಅಸ್ಸಾಂ ಸರ್ಕಾರವು ಕ್ರಿಮಿನಲ್ ಮೊಕದ್ದಮೆಗಳನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಸಂಘಟನೆ ನೇರವಾಗಿ ಆರೋಪಿಸಿದೆ.
ಪ್ರಸ್ತಾವಿತ ಐಷಾರಾಮಿ ಹೋಟೆಲ್ ಯೋಜನೆಗಾಗಿ ಅಸ್ಸಾಂ ಸರ್ಕಾರವು 2023 ರಲ್ಲೇ ‘ಸರಾಫ್ ಗ್ರೂಪ್’ ಮತ್ತು ‘ಹಯಾತ್’ ನಡುವಿನ ಪಾಲುದಾರಿಕೆ ಸಂಸ್ಥೆಯಾದ ‘ಜುನಿಪರ್ ಹೋಟೆಲ್ಸ್’ ಜೊತೆ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಿತ್ತು. ಆದಿವಾಸಿಗಳ ಒಡೆತನದ ಸುಮಾರು 60 ಬಿಘಾ ಕೃಷಿ ಮತ್ತು ಸಮುದಾಯ ಗೋಮಾಳ ಭೂಮಿಯನ್ನು ಯಾವುದೇ ಸ್ಥಳೀಯ ಸಮಾಲೋಚನೆ ಇಲ್ಲದೆ ಯೋಜನೆಗೆ ಕಾಯ್ದಿರಿಸಲಾಗಿತ್ತು. ಸಕ್ರಮ ಭೂ ತೆರಿಗೆ ದಾಖಲೆಗಳನ್ನು ಹೊಂದಿದ್ದರೂ ಸಹ 2024 ರಲ್ಲಿ 45 ಬುಡಕಟ್ಟು ಕುಟುಂಬಗಳನ್ನು ಬಲವಂತವಾಗಿ ಜಾಗದಿಂದ ಹೊರಹಾಕಲಾಗಿತ್ತು.
ಭೂ ಹಕ್ಕುಗಳು ಮತ್ತು ಪರಿಸರ ಸುರಕ್ಷತಾ ನಿಯಮಗಳ ಉಲ್ಲಂಘನೆಯನ್ನು ಪ್ರಶ್ನಿಸಿ, ಸಂತ್ರಸ್ತ ಕುಟುಂಬಗಳು ಈಗಾಗಲೇ ಗುವಾಹಟಿ ಹೈಕೋರ್ಟ್‌ನಲ್ಲಿ ಸ್ವಾಧೀನ ಪ್ರಕ್ರಿಯೆಯನ್ನು ಸವಾಲು ಮಾಡಿವೆ. ಇನ್ನು ವನ್ಯಜೀವಿ ಕಾರಿಡಾರ್‌ಗಳ ಮೇಲಾಗುವ ಯೋಜನೆಯ ಪರಿಣಾಮದ ಬಗ್ಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಕೂಡ ಈ ಹಿಂದೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿತ್ತು. ನಂತರ ಈ ವಿಷಯವನ್ನು ಎನ್‌ಜಿಟಿಯ ಪೂರ್ವ ಪೀಠವು ವಿಲೇವಾರಿ ಮಾಡಿತು ಎಂದು ಸಂಘಟನೆ ಉಲ್ಲೇಖಿಸಿದೆ.
ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ನಿರ್ಮಾಣ ಸಲಕರಣೆಗಳಿಗೆ ಬೆಂಕಿ ಹಚ್ಚಲು ಯತ್ನಿಸಿದ ‘ಕಾನೂನುಬಾಹಿರ ಸಭೆಯ Mastermind (ಸೂತ್ರಧಾರ)’ ಪ್ರಣಬ್ ಡೋಲೆ ಎಂದು ಅಸ್ಸಾಂ ಪೊಲೀಸರು ಆರೋಪಿಸಿದ್ದಾರೆ. ಆದರೆ ಜಿಕೆಎಲ್‌ಎಚ್‌ಆರ್‌ಪಿಸಿ ಈ ಆರೋಪವನ್ನು ಸ್ಪಷ್ಟವಾಗಿ ನಿರಾಕರಿಸಿದೆ.
ಪ್ರತಿಭಟನೆಯ ವೀಡಿಯೊ ದೃಶ್ಯಾವಳಿಗಳು ಪೊಲೀಸರ ಹೇಳಿಕೆಗೆ ತದ್ವಿರುದ್ಧವಾಗಿದ್ದು, ಪ್ರದರ್ಶನದ ಸಮಯದಲ್ಲಿ ಪೊಲೀಸರೇ ಹದಿಹರೆಯದ ಹುಡುಗಿಯ ಮೇಲೆ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಜಿಕೆಎಲ್‌ಎಚ್‌ಆರ್‌ಪಿಸಿ ದೂರಿದೆ. ಅಲ್ಲದೆ, ಪೊಲೀಸರು ನೀಡಿದ ಬಂಧನ ನೋಟಿಸ್‌ನಲ್ಲಿ ಘಟನೆಯ ದಿನಾಂಕವನ್ನು ಜೂನ್ 28 ಎಂದು ಉಲ್ಲೇಖಿಸಲಾಗಿದೆ, ಆದರೆ ವಾಸ್ತವವಾಗಿ ಪ್ರತಿಭಟನೆ ನಡೆದಿದ್ದು ಜೂನ್ 29 ರಂದು ಎಂದು ಸಂಘಟನೆ ಬೆಟ್ಟು ಮಾಡಿದೆ.


