ಮಧ್ಯಪ್ರದೇಶದ ಧಾರ್‌ನಲ್ಲಿರುವ ಐತಿಹಾಸಿಕ ಭೋಜ್‌ಶಾಲಾ-ಕಮಲ್ ಮೌಲಾ ಸಂಕೀರ್ಣವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು ಘೋಷಿಸಿ, ಅಲ್ಲಿ ನಮಾಝ್ ಮಾಡುವುದನ್ನು ನಿಷೇಧಿಸಿರುವ ಮಧ್ಯಪ್ರದೇಶ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ, ವಿವಿಧ ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಜು.14) ನೋಟಿಸ್ ಜಾರಿ ಮಾಡಿದೆ.
ಆದರೆ, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ನಿಗದಿಪಡಿಸಿದ ದಿನಗಳಲ್ಲಿ ಹಿಂದೂಗಳ ಪೂಜೆಯೊಂದಿಗೆ ಮುಸ್ಲಿಮರಿಗೆ ಶುಕ್ರವಾರದಂದು ನಮಾಝ್ ಮಾಡಲು ಅವಕಾಶ ನೀಡುತ್ತಿದ್ದ ಹಿಂದಿನ ಯಥಾಸ್ಥಿತಿಯನ್ನು ಮರುಸ್ಥಾಪಿಸಬೇಕೆಂಬ ಅರ್ಜಿದಾರರ ಮಧ್ಯಂತರ ಆದೇಶದ ಕೋರಿಕೆಯನ್ನು ತಿರಸ್ಕರಿಸಿದೆ.
“ಯಾವುದೇ ಉದ್ವಿಗ್ನತೆಗೆ ಕಾರಣವಾಗಬಹುದಾದ ಯಾವುದೇ ಆದೇಶವನ್ನು ನಾವು ಹೊರಡಿಸುವುದು ಬೇಡ” ಎಂದು ಮುಖ್ಯ ನ್ಯಾಯಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರದಂದು ಮಧ್ಯಾಹ್ನ 1 ರಿಂದ 3 ಗಂಟೆಯ ನಡುವೆ ನಮಾಝ್ ಮಾಡಲು ಮುಸ್ಲಿಂ ಧರ್ಮೀಯರಿಗೆ ಸದರಿ ಸ್ಥಳಕ್ಕೆ ಹೊಂದಿಕೊಂಡಂತೆ ಇರುವ ಪ್ರತ್ಯೇಕ ಮುಕ್ತ ಜಾಗವನ್ನು ಒದಗಿಸುವಂತೆ ಪೀಠವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ವ್ಯವಸ್ಥೆಯು ತಾತ್ಕಾಲಿಕವಾಗಿದ್ದು, ಪ್ರಕರಣದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಮತ್ತು ಇದು ಯಾವುದೇ ಪಕ್ಷಗಳ ವಾದಗಳಿಗೆ ಬಾಧಕವಾಗುವುದಿಲ್ಲ ಎಂದು ಪೀಠವು ಸ್ಪಷ್ಟಪಡಿಸಿದೆ.
ಇದಲ್ಲದೆ, ಮುಸ್ಲಿಂ ಪರ ಹಿರಿಯ ನ್ಯಾಯವಾದಿ ಹುಝೇಫಾ ಅಹ್ಮದಿ ಅವರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ತನ್ನ ಪೂರ್ವಾನುಮತಿಯನ್ನು ಪಡೆಯದೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ಎಎಸ್‌ಐ) ಈ ಸ್ಮಾರಕದ ಯಾವುದೇ ರಚನಾತ್ಮಕ ಬದಲಾವಣೆಗಳನ್ನು ಮಾಡಬಾರದು ಎಂದು ನಿರ್ದೇಶಿಸಿದೆ.
ಮುಂದಿನ ಮೂರು ವಾರಗಳ ನಂತರ ಅಂತಿಮ ವಿಚಾರಣೆಗಾಗಿ ಈ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಪೀಠವು ಸೂಚಿಸಿದೆ.


