ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರಿನ ಗ್ರಾಹಕರು ಇನ್ನು ಮುಂದೆ ಪ್ರಮುಖ ಕ್ವಿಕ್ ಕಾಮರ್ಸ್ ಸಂಸ್ಥೆಯಾದ ‘ಇನ್‌ಸ್ಟಾಮಾರ್ಟ್’ (Instamart) ಆ್ಯಪ್ ಮೂಲಕವೇ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಬಹುದು. ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಸಂಸ್ಥೆಯು ಇನ್‌ಸ್ಟಾಮಾರ್ಟ್ ಜೊತೆಗೆ ವಿಶೇಷ ಪಾಲುದಾರಿಕೆ ಮಾಡಿಕೊಂಡಿದ್ದು, ಈ ನೂತನ ಸೇವೆಗೆ ಐಟಿ ಸಿಟಿಯಲ್ಲಿ ಚಾಲನೆ ನೀಡಲಾಗಿದೆ.
ಬುಧವಾರದಿಂದಲೇ ಅಧಿಕೃತವಾಗಿ ಜಾರಿಗೆ ಬಂದಿರುವ ಈ ಯೋಜನೆಯಡಿ, ಹೆಚ್‌ಪಿಸಿಎಲ್ ಸಂಸ್ಥೆಯು ಇತ್ತೀಚೆಗೆ ಮಾರುಕಟ್ಟೆಗೆ ಪರಿಚಯಿಸಿರುವ ಸುಧಾರಿತ ತಂತ್ರಜ್ಞಾನದ ‘ಹೆಚ್‌ಪಿ ನವ್ಯ’ (HP Navya) ಹೆಸರಿನ 10 ಕೆಜಿಯ ಕಾಂಪೋಸಿಟ್ (ಹಗುರವಾದ) ಸಿಲಿಂಡರ್ ಹಾಗೂ 5 ಕೆಜಿಯ ಸಣ್ಣ ಲೋಹದ ಸಿಲಿಂಡರ್‌ಗಳನ್ನು ಇನ್‌ಸ್ಟಾಮಾರ್ಟ್ ಮೂಲಕ ಆರ್ಡರ್ ಮಾಡಬಹುದಾಗಿದೆ.
ಮೊದಲ ಆರ್ಡರ್ ಎಲ್ಲಿದೆ?:
ಪ್ರಾಯೋಗಿಕ ಯೋಜನೆಯಾಗಿ (Pilot Project) ಜುಲೈ 15 ರಿಂದಲೇ ನಗರದ ಸುಬ್ರಹ್ಮಣ್ಯಪುರದಲ್ಲಿ ಈ ವಿತರಣಾ ಸೇವೆಗೆ ಚಾಲನೆ ನೀಡಲಾಗಿದೆ. ಕ್ವಿಕ್ ಕಾಮರ್ಸ್ ವೇದಿಕೆಯೊಂದರ ಮೂಲಕ ಗ್ರಾಹಕರ ಬೇಡಿಕೆಗೆ ತಕ್ಕಂತೆ ತಕ್ಷಣವೇ ಎಲ್‌ಪಿಜಿ ಸಿಲಿಂಡರ್ ಪೂರೈಸುವ ಹೆಚ್‌ಪಿಸಿಎಲ್‌ನ ಮೊದಲ ಹೆಜ್ಜೆ ಇದಾಗಿದೆ.
ಯಾರಿಗೆ ಹೆಚ್ಚು ಅನುಕೂಲ?:
ಈ ಸೇವೆಯ ಪ್ರಮುಖ ವಿಶೇಷತೆಯೆಂದರೆ, ಗ್ರಾಹಕರು ಈ ಸಿಲಿಂಡರ್‌ಗಳನ್ನು ಖರೀದಿಸಲು ಮೊದಲೇ ಯಾವುದೇ ಗೃಹಬಳಕೆಯ ಎಲ್‌ಪಿಜಿ ಸಂಪರ್ಕ (Gas Connection) ಹೊಂದುವ ಅಗತ್ಯವಿರುವುದಿಲ್ಲ. ಹೀಗಾಗಿ ನಗರದಲ್ಲಿ ವಾಸಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಣ್ಣ ಕುಟುಂಬಗಳಿಗೆ ಇದು ವರದಾನವಾಗಲಿದೆ. ಒಮ್ಮೆ ಸಿಲಿಂಡರ್ ಖಾಲಿಯಾದ ನಂತರ, ವಿತರಣಾ ಸಿಬ್ಬಂದಿಗೆ ಖಾಲಿ ಸಿಲಿಂಡರ್ ನೀಡಿ ಮರುಪೂರಣ (Refill) ಮಾಡಿಸಿಕೊಳ್ಳಬಹುದು.
“ಇನ್‌ಸ್ಟಾಮಾರ್ಟ್ ಕೇವಲ ದಿನಸಿ ವಸ್ತುಗಳಿಗೆ ಸೀಮಿತವಾಗದೆ ಜನರ ದೈನಂದಿನ ಜೀವನದ ಭಾಗವಾಗಿದೆ. ಇದೀಗ ಹೆಚ್‌ಪಿಸಿಎಲ್ ಜೊತೆಗೂಡಿ ಸುರಕ್ಷತೆ ಮತ್ತು ನಂಬಿಕಸ್ಥ ಸೇವೆಯೊಂದಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದ್ದೇವೆ,” ಎಂದು ಇನ್‌ಸ್ಟಾಮಾರ್ಟ್ ಸಿಇಒ ಅಮಿತೇಶ್ ಝಾ ತಿಳಿಸಿದ್ದಾರೆ.
ಸುರಕ್ಷತೆಗೆ ಮೊದಲ ಆದ್ಯತೆ:
ಈ ಆರ್ಡರ್‌ಗಳನ್ನು ಹೆಚ್‌ಪಿಸಿಎಲ್‌ನ ಅಧಿಕೃತ ವಿತರಕರ ನೆಟ್‌ವರ್ಕ್ ಮೂಲಕವೇ ಸುರಕ್ಷಿತವಾಗಿ ಪೂರೈಸಲಾಗುತ್ತದೆ. ಮೊದಲ ಬಾರಿ ಸಿಲಿಂಡರ್ ಪಡೆಯುವ ಗ್ರಾಹಕರು ವಿತರಣೆಯ ಸಮಯದಲ್ಲಿ ತಮ್ಮ ಗುರುತಿನ ಚೀಟಿ (ID Verification) ಪರಿಶೀಲನೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ ಎಂದು ಸಂಸ್ಥೆ ತಿಳಿಸಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಈ ಯೋಜನೆ ಸಹಕಾರಿಯಾಗಲಿದೆ ಎಂದು ಹೆಚ್‌ಪಿಸಿಎಲ್ ಮಾರ್ಕೆಟಿಂಗ್ ನಿರ್ದೇಶಕ ಅಮಿತ್ ಗರ್ಗ್ ಆಶಯ ವ್ಯಕ್ತಪಡಿಸಿದ್ದಾರೆ.


