ಮುಸ್ಲಿಮರ ವಿರುದ್ಧ ನಿಂದನಾತ್ಮಕ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ವಿಧಾನಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಗರದ ಜಾಮಿಯಾ ಮಸೀದಿಯ ಅಧ್ಯಕ್ಷ ಮುದಸ್ಸಿರ್ ಪಾಷಾ ಅವರು ನೀಡಿದ ದೂರಿನಂತೆ ಸಿ.ಟಿ ರವಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್), 2023ರ ಸೆಕ್ಷನ್ 353(2) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಜುಲೈ 23ರಂದು ಸಂಜೆ ಯೂತ್ ಫಾರ್ ನೇಷನ್ ಚಿಕ್ಕಮಗಳೂರು ವತಿಯಿಂದ ನಗರದ ಆಝಾದ್ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿ.ಟಿ. ರವಿ “ಮುಲ್ಲಾನಿಗೂ ನೀಟ್ ಎಕ್ಸಾಮ್‌ಗೂ ಏನು ಸಂಬಂಧ? ಮುಲ್ಲಾಗಳ ಎದೆ ಸೀಳಿದರೆ ಮೂರು ಅಕ್ಷರ ಬರಲ್ಲ, ಆತ ಬಂದು ನೀಟ್ ವಿರುದ್ಧ ಹೋರಾಟ ಅಂತೆ?” ಎಂದು ಮುಸ್ಲಿಂ ಸಮುದಾಯದ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಮುಸ್ಲಿಮರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಮಾಡಿ ಧರ್ಮ ಹಾಗೂ ಸಮುದಾಯದ ಆಧಾರದ ಮೇಲೆ ಪ್ರಚೋದನಕಾರಿ ಹೇಳಿಕೆ ನೀಡಿ, ಎರಡು ಸಮುದಾಯ ನಡುವೆ ಸಂಘರ್ಷ ಉಂಟು ಮಾಡಿ, ಸಮಾಜದಲ್ಲಿ ಆಶಾಂತಿ ಹಬ್ಬಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ಮಾತನಾಡಿರುವ ಸಿ.ಟಿ. ರವಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.


