ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು ಇನ್ನೂ ಸಹಿ ಮಾಡಿದ ಗಣತಿ ನಮೂನೆಗಳನ್ನು ಅಧಿಕಾರಿಗಳಿಗೆ ಸಲ್ಲಿಸಿಲ್ಲ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.
ಗಣತಿ ನಮೂನೆಗಳಿಗೆ ಸಹಿ ಮಾಡಿ ಹಿಂತಿರುಗಿಸದಿದ್ದರೆ ಅಂತಹ ಮತದಾರರ ಹೆಸರುಗಳನ್ನು ಮುಂಬರುವ ಕರಡು ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಕೈಬಿಡಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ (CEO) ವಿ. ಅನ್ಬುಕುಮಾರ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ವಿತರಿಸಲಾದ ಒಟ್ಟು 5.54 ಕೋಟಿ ನಮೂನೆಗಳ ಪೈಕಿ ಈಗಾಗಲೇ 4.26 ಕೋಟಿಗೂ ಹೆಚ್ಚು ನಮೂನೆಗಳನ್ನು ಯಶಸ್ವಿಯಾಗಿ ಡಿಜಿಟಲೀಕರಣಗೊಳಿಸಲಾಗಿದೆ.
ಇದೇ ಅವಧಿಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಜೂನ್ 16 ರಿಂದ ಜುಲೈ 29 ರ ನಡುವೆ 11.40 ಲಕ್ಷಕ್ಕೂ ಹೆಚ್ಚು ವಿವಿಧ ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ ಗರಿಷ್ಠ ಅಂದರೆ 7.74 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಫಾರ್ಮ್-8 (ವಿವರ ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಹೊಸ ಐಡಿ ಕಾರ್ಡ್) ಮೂಲಕ ಸಲ್ಲಿಕೆಯಾಗಿದ್ದರೆ, 3.32 ಲಕ್ಷಕ್ಕೂ ಹೆಚ್ಚು ಯುವಕರು ಹೊಸ ಮತದಾರರಾಗಿ ಸೇರ್ಪಡೆಗೊಳ್ಳಲು ಫಾರ್ಮ್-6 ಸಲ್ಲಿಸಿದ್ದಾರೆ. ಹೆಸರು ತೆಗೆದುಹಾಕಲು 30,696 ಫಾರ್ಮ್-7 ಹಾಗೂ ಅನಿವಾಸಿ ಭಾರತೀಯರಿಂದ 2,783 ಫಾರ್ಮ್-6A ಅರ್ಜಿಗಳು ಬಂದಿವೆ. ಇಡೀ ಪ್ರಕ್ರಿಯೆಯಲ್ಲಿ ಕೇವಲ 331 ಅರ್ಜಿಗಳು ಮಾತ್ರ ಆಫ್‌ಲೈನ್‌ನಲ್ಲಿ ಸಲ್ಲಿಕೆಯಾಗಿದ್ದು, ಉಳಿದೆಲ್ಲ ಸೇವೆಗಳನ್ನು ನಾಗರಿಕರು ಡಿಜಿಟಲ್ ರೂಪದಲ್ಲೇ ಪಡೆದುಕೊಂಡಿರುವುದು ವಿಶೇಷವಾಗಿದೆ.
ಇನ್ನು ಪರಿಷ್ಕರಣೆ ವೇಳೆ ರಾಜ್ಯಾದ್ಯಂತ ಗೈರುಹಾಜರಿ, ಸ್ಥಳಾಂತರ, ಮೃತ, ನಕಲಿ ಮತ್ತು ಇತರೆ (ASDDO) ವರ್ಗದಡಿ ಒಟ್ಟು 84.31 ಲಕ್ಷಕ್ಕೂ ಹೆಚ್ಚು ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 51.74 ಲಕ್ಷಕ್ಕೂ ಹೆಚ್ಚು ಜನರು ಶಾಶ್ವತವಾಗಿ ಬೇರೆಡೆಗೆ ಸ್ಥಳಾಂತರಗೊಂಡಿದ್ದರೆ, 14.99 ಲಕ್ಷ ಮತದಾರರು ಮೃತಪಟ್ಟಿರುವುದು ಕಂಡುಬಂದಿದೆ. ಬೂತ್ ಮಟ್ಟದ ಅಧಿಕಾರಿಗಳು ಮೂರು ಬಾರಿ ಮನೆಗೆ ಭೇಟಿ ನೀಡಿದರೂ ಸಿಗದ 11.61 ಲಕ್ಷ ಜನರನ್ನು ಗೈರುಹಾಜರಿ ಪಟ್ಟಿಗೆ ಸೇರಿಸಲಾಗಿದೆ.
ಬೃಹತ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯಲ್ಲಿ 1.03 ಕೋಟಿ ನಮೂನೆಗಳ ಪೈಕಿ ಶೇ. 46.13 ರಷ್ಟು ಮಾತ್ರ ಡಿಜಿಟಲೀಕರಣಗೊಂಡಿದ್ದು, ಬೆಂಗಳೂರಿನಲ್ಲೇ 39.38 ಲಕ್ಷ ಎಸ್‌ಡಿಡಿಒ ಮತದಾರರಿದ್ದಾರೆ. ನಿಗದಿತ ಸಮಯದೊಳಗೆ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳು ಶ್ರಮಿಸುತ್ತಿದ್ದು, ಮತದಾರರು ತಕ್ಷಣವೇ ತಮ್ಮ ಸಹಿ ಮಾಡಿದ ನಮೂನೆಗಳನ್ನು ನೀಡಿ ಮತದಾನದ ಹಕ್ಕನ್ನು ಕಾಯ್ದುಕೊಳ್ಳಲು ಆಯೋಗ ಕೋರಿದೆ.


