ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾಗ, ನೈಮಿಷಾ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಪತ್ತೆಹಚ್ಚಿದ್ದ ನೆಟ್ಟಿಗರು ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತಂದೆ ದೇಶದ ಶಿಕ್ಷಣ ಸಚಿವರಾಗಿದ್ದರೂ ಮಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವುದನ್ನು ಪ್ರಶ್ನಿಸಿ ಜನರು ಕಮೆಂಟ್ ವಿಭಾಗದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಸಾರ್ವಜನಿಕರ ವ್ಯಕ್ತವಾದ ಟೀಕೆಗೆ ಹೆದರಿ ನೈಮಿಷಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಆಕ್ಟಿವೇಟ್ ಮಾಡಿಕೊಂಡಿದ್ದರು.
ಅಷ್ಟಕ್ಕೇ ಸಮ್ಮನಾಗದ ಕೆಲವು ಬಳಕೆದಾರರು, ನೈಮಿಷಾ ಕಲಿಯುತ್ತಿದ್ದ ಅಮೆರಿಕದ ‘ಟಫ್ಟ್ಸ್ ವಿಶ್ವವಿದ್ಯಾಲಯ’ದ ಸಾಮಾಜಿಕ ಜಾಲತಾಣ ಪುಟಗಳಲ್ಲೂ ಕಮೆಂಟ್ ಮಾಡಿ, ಆಕೆಯ ವಿದೇಶಿ ಶಿಕ್ಷಣದ ಬಗ್ಗೆ ಪ್ರಶ್ನಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆಗೆ ಆಗ್ರಹಿಸಿ ಸಂಸತ್ತಿಗೆ ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಕ್ರಮ ಕೈಗೊಂಡ ನಂತರ ಈ ಆಕ್ರೋಶ ಮತ್ತಷ್ಟು ಹೆಚ್ಚಾಗಿತ್ತು. ನೈಮಿಷಾ ಪ್ರಧಾನ್ ಅವರು 2023 ರಲ್ಲಿ ಅಮೆರಿಕದ ಮ್ಯಾಸಚೂಸೆಟ್ಸ್‌ನ ಮೆಡ್‌ಫೋರ್ಡ್‌ನಲ್ಲಿರುವ ‘ಟಫ್ಟ್ಸ್ ವಿಶ್ವವಿದ್ಯಾಲಯ’ದ ‘ದಿ ಫ್ಲೆಚರ್ ಸ್ಕೂಲ್’ನಿಂದ ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ (LLM) ಪೂರ್ಣಗೊಳಿಸಿದ್ದು, ಪ್ರಸ್ತುತ ‘ಯುಎಸ್-ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್‌ನರ್‌ಶಿಪ್ ಫೋರಂ’ (USISPF) ಸಂಸ್ಥೆಯಲ್ಲಿ ಹಿರಿಯ ಅಸೋಸಿಯೇಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಬೆನ್ನಲ್ಲೇ ಇದೀಗ ಮತ್ತೊಂದು ಹಳೆಯ ಅಧಿಕಾರ ದುರುಪಯೋಗದ ವಿವಾದ ಮುನ್ನೆಲೆಗೆ ಬಂದಿದೆ. ಧರ್ಮೇಂದ್ರ ಪ್ರಧಾನ್ ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾಗಿದ್ದ ಅವಧಿಯಲ್ಲಿ (2017-18), ಅವರ ಪುತ್ರಿ ನೈಮಿಷಾ ಅವರ ಅಂತಾರಾಷ್ಟ್ರೀಯ ಮೊಬೈಲ್ ಫೋನ್ ಬಿಲ್ ಅನ್ನು ಸರ್ಕಾರಿ ಅನುದಾನಿತ ಸಂಸ್ಥೆಯಾದ ‘ಪೆಟ್ರೋನೆಟ್ ಎಲ್‌ಎನ್‌ಜಿ ಲಿಮಿಟೆಡ್’ ಭರಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. 2026 ಮೇ 24 ರಂದು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಎಕ್ಸ್ (ಟ್ವಿಟರ್) ನಲ್ಲಿ ಈ ವಿಚಾರವನ್ನು ಉಲ್ಲೇಖಿಸಿ ಧರ್ಮೇಂದ್ರ ಪ್ರಧಾನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.
2017 ರಲ್ಲಿ ನೈಮಿಷಾ ವಿದೇಶಕ್ಕೆ ತೆರಳುವಾಗ ಆಕೆಗೆ ವಿಮಾನ ನಿಲ್ದಾಣದಲ್ಲಿ ‘ಪೆಟ್ರೋನೆಟ್’ ಕಂಪನಿಯ ಮೂಲಕ ಅಂತಾರಾಷ್ಟ್ರೀಯ ಸಿಮ್ ಕಾರ್ಡ್ ಒದಗಿಸಲಾಗಿತ್ತು ಎಂದು ಸುಪ್ರಿಯಾ ಶ್ರೀನೇತ್ ಆರೋಪಿಸಿದ್ದಾರೆ. ವಿದೇಶದಿಂದ ಆಕೆ ಮನೆಗೆ ಕರೆ ಮಾಡಿದ್ದರಿಂದ ಬಂದ ಸುಮಾರು ₹70,000 ಫೋನ್ ಬಿಲ್ ಅನ್ನು ಆಕೆಯ ತಂದೆ ಪಾವತಿಸದೆ, ಪೆಟ್ರೋಲಿಯಂ ಸಚಿವಾಲಯದ ವ್ಯಾಪ್ತಿಗೆ ಬರುವ ಪೆಟ್ರೋನೆಟ್ ಕಂಪನಿಯೇ ಭರಿಸಿತ್ತು. ದೇಶದ 23 ಲಕ್ಷ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳು ನೀಟ್ ಪರೀಕ್ಷೆಯ ಅಕ್ರಮಗಳಿಂದ ಭವಿಷ್ಯ ಕಳೆದುಕೊಂಡು ಬೀದಿಗೆ ಬಿದ್ದಿದ್ದರೆ, ಬಿಜೆಪಿ ಸಚಿವರ ಮಕ್ಕಳ ವೈಯಕ್ತಿಕ ವೆಚ್ಚಗಳನ್ನು ಸರ್ಕಾರಿ ಕಂಪನಿಗಳು ಭರಿಸುತ್ತಿವೆ ಎಂದು ಅವರು ಕಿಡಿಕಾರಿದ್ದರು.
ಇದಕ್ಕೂ ಮುನ್ನ 2020 ಆಗಸ್ಟ್ 29 ರಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಈ ಪಾವತಿಯ ರಸೀದಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ‘ಮ್ಯಾಟ್ರಿಕ್ಸ್ ಸೆಲ್ಯುಲಾರ್ ಇಂಟರ್ನ್ಯಾಷನಲ್ ಸರ್ವಿಸಸ್’ ಸಂಸ್ಥೆಯು 2017 ಆಗಸ್ಟ್‌ನಲ್ಲಿ ನೀಡಿದ್ದ ರಸೀದಿಯಲ್ಲಿ ನೈಮಿಷಾ ಪ್ರಧಾನ್ ಹೆಸರಿದ್ದು, ಹತ್ತು ದಿನಗಳ ವಿದೇಶಿ ಪ್ರವಾಸದ ಒಟ್ಟು ₹68,424 ಬಿಲ್ ಅನ್ನು ಕಂಪನಿಯ ‘ವಿದೇಶಿ ಪ್ರವಾಸದ ವೆಚ್ಚ’ದಡಿ ಜಮಾ ಮಾಡಲಾಗಿತ್ತು. ಈ ಪಾವತಿಗೆ ಮ್ಯಾನೇಜಿಂಗ್ ಡೈರೆಕ್ಟರ್ ಪ್ರಭಾತ್ ಸಿಂಗ್ ಅನುಮೋದನೆ ನೀಡಿದ್ದರು ಎಂದು ನ್ಯೂಸ್ ಗ್ರಾಮ್ ವರದಿ ಮಾಡಿದೆ.
ವಿಶೇಷವೆಂದರೆ, ಈ ಬಿಲ್ ಪಾವತಿ ಪ್ರಸ್ತಾವನೆಯ ಆಂತರಿಕ ದಾಖಲೆಯಲ್ಲಿ ಹಿರಿಯ ಅಧಿಕಾರಿಯೊಬ್ಬರು “ಮುಂದಿನ ದಿನಗಳಲ್ಲಿ ಇಂತಹ ಚಟುವಟಿಕೆಗಳನ್ನು ಕಡಿಮೆ ಮಾಡಬೇಕು” ಎಂದು ಕೈಬರಹದಲ್ಲಿ ಟಿಪ್ಪಣಿ ಬರೆದಿದ್ದರು. ಅಧಿಕಾರದಲ್ಲಿದ್ದವರ ವೈಯಕ್ತಿಕ ಖರ್ಚುಗಳಿಗೆ ಸಾರ್ವಜನಿಕರ ತೆರಿಗೆ ಹಣ ಮತ್ತು ಪಿಎಸ್‌ಯು ಸಂಸ್ಥೆಗಳ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ನೆಟ್ಟಿಗರು ಹಾಗೂ ಸಾರ್ವಜನಿಕರು ತೀವ್ರವಾಗಿ ಖಂಡಿಸುತ್ತಿದ್ದಾರೆ.
ಐದು ವರ್ಷಗಳಿಗೂ ಹೆಚ್ಚು ಕಾಲ ಹಳೆಯದಾದ ಈ ವಿವಾದ ಈಗ ಮತ್ತೆ ಮರುಜೀವ ಪಡೆದುಕೊಂಡಿದೆ. ಈ ದಾಖಲೆಗಳು ಮೊದಲ ಬಾರಿಗೆ ಬಹಿರಂಗಗೊಂಡಾಗ, ಅಲಹಾಬಾದ್ ಹೈಕೋರ್ಟ್ ಇದರಲ್ಲಿನ ಲೋಪಗಳನ್ನು ಗುರುತಿಸಿ ‘ಕೇಂದ್ರೀಯ ಜಾಗೃತ ಆಯೋಗ’ಕ್ಕೆ (CVC) ತನಿಖೆಗೆ ಆದೇಶಿಸಿತ್ತು. ಆದರೆ, ಆ ಆದೇಶದ ನಂತರ ಯಾವುದೇ ಪ್ರಮುಖ ಕಾನೂನು ನಡಾವಳಿಗಳು ಅಥವಾ ಕ್ರಮಗಳು ಜರುಗಿರಲಿಲ್ಲ.
ಪ್ರಧಾನ್ ಅವರು ಪೆಟ್ರೋಲಿಯಂ ಸಚಿವರಾಗಿದ್ದ ಅವಧಿಯಲ್ಲಿ ‘ಪೆಟ್ರೋನೆಟ್ ಎಲ್‌ಎನ್‌ಜಿ’ ನಡೆದುಕೊಂಡ ರೀತಿ ಮತ್ತು ಕಾರ್ಯವೈಖರಿಯ ಬಗ್ಗೆಯೂ ಈ ವಿವಾದದ ಮೂಲಕ ಮತ್ತೆ ಚರ್ಚೆ ಆರಂಭವಾಗಿದೆ. ಸದ್ಯಕ್ಕೆ, ಹಳೆಯ ದಾಖಲೆಗಳು ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಕೇಂದ್ರ ಸಚಿವರ ವಿರುದ್ಧ ಸಾರ್ವಜನಿಕರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ. ಹೊಣೆಗಾರಿಕೆಗೆ ಆಗ್ರಹಗಳು ಹೆಚ್ಚಾಗುತ್ತಿರುವುದರಿಂದ ಮೋದಿ ಸರ್ಕಾರಕ್ಕೆ ಮತ್ತೆ ರಾಜಕೀಯ ಒತ್ತಡ ಹೆಚ್ಚಾಗಿದೆ.


