ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ತಾನು ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದು, ಪ್ರತಿಭಟನೆಯಲ್ಲಿದ್ದ ಜನರ ಪ್ರಭಾವಕ್ಕೆ ಒಳಗಾಗಿ ಪ್ರಧಾನಿಯವರ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ ಎಂದು ಪಿಟಿಐ ವರದಿ ಮಾಡಿದೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಆಕೆಯ ವಯಸ್ಸು 25 ವರ್ಷ ಎಂದು ಉಲ್ಲೇಖಿಸಲಾಗಿದ್ದರೆ, ಕ್ಷಮೆಯಾಚನೆಯ ವಿಡಿಯೋದಲ್ಲಿ ಆಕೆ ತನಗೆ ಕೇವಲ 15 ವರ್ಷ ವಯಸ್ಸು ಎಂದು ಹೇಳಿಕೊಂಡಿದ್ದಾಳೆ. ನನಗೆ ಕೇವಲ 15 ವರ್ಷ. ನಾನು ಮಾಡಿದ್ದು ಕ್ಷಮೆಗೆ ಅರ್ಹವಲ್ಲದ್ದು, ನಾನು ಅತ್ಯಂತ ಕೆಟ್ಟದಾಗಿ ಮಾತನಾಡಿದ್ದೇನೆ ಎಂದಿರುವ ಆಕೆ, ಇದನ್ನು ತನ್ನ ಮೊದಲ ಮತ್ತು ಕೊನೆಯ ತಪ್ಪು ಎಂದು ಹೇಳಿದ್ದಾಳೆ. ಅಲ್ಲದೆ, ನಾನು ಇಡೀ ದೇಶದ ಕ್ಷಮೆ ಕೇಳುತ್ತೇನೆ. ನನಗೆ ತುಂಬಾ ನಾಚಿಕೆಯಾಗುತ್ತಿದೆ, ನನ್ನನ್ನು ನಾನೇ ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ವಿನಂತಿಸಿದ್ದಾಳೆ. ಆದರೆ ಈ ವಿಡಿಯೋದ ನೈಜತೆಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ.
ಜುಲೈ 23 ರಂದು ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ನಡೆಸಿದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕಾಗಿ ನೋಯ್ಡಾ ಪೊಲೀಸರು ಜೀರೋ ಎಫ್‌ಐಆರ್ ದಾಖಲಿಸಿಕೊಂಡಿದ್ದರು. ಆ ನಂತರ ಈ ಜೀರೋ ಎಫ್‌ಐಆರ್ ಅನ್ನು ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಪ್ರತಿಭಟನಾಕಾರ ಬಾಲಕಿಯ ವಯಸ್ಸನ್ನು ಪರಿಶೀಲಿಸಲು ದೆಹಲಿ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಇದೀಗ ಕ್ಷಮೆಯಾಚನೆಯ ವೀಡಿಯೊ ಹೊರಬಂದಿರುವುದರಿಂದ, ಮುಂದಿನ ತನಿಖೆಯನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಪರಿಶೀಲಿಸಿ ನಿರ್ಧಾರ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಈ ವೀಡಿಯೊದಲ್ಲಿರುವ ಹೇಳಿಕೆಗಳ ಸತ್ಯಾಸತ್ಯತೆಯನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸ್ವತಂತ್ರವಾಗಿ ದೃಢೀಕರಿಸಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹುಡುಕಿದರೂ ಯಾವುದೇ ದೃಢೀಕೃತ ಖಾತೆ ಸಿಕ್ಕಿಲ್ಲ ಹಾಗೂ ಈ ಪ್ರಕರಣದಲ್ಲಿ ಆ ಯುವತಿಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದು ವರದಿ ಹೇಳಿದೆ.
ಮತ್ತೊಂದೆಡೆ, ಶುಕ್ರವಾರ ರಾತ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಜಂತರ್ ಮಂತರ್‌ನಲ್ಲಿ ಪ್ರತಿಭಟನಾಕಾರರು ಬಳಸಿದ ನಿಂದನೀಯ ಭಾಷೆ ಸಾಂಸ್ಕೃತಿಕ ಆಘಾತ ತಂದಿದೆ. ಆದಾಗ್ಯೂ, ದಾರಿ ತಪ್ಪಿದ ಯುವಜನತೆಯನ್ನು ಸಮಾಜವು ತಿದ್ದಿ ಸರಿದಾರಿಗೆ ತರಬೇಕು ಮತ್ತು ಆ ರೀತಿ ತನಗೆ ನಿಂದಿಸಿದ ‘ದಾರಿ ತಪ್ಪಿದ ಯುವಕರನ್ನು’ ತಾನು ಕ್ಷಮಿಸಿರುವುದಾಗಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪ್ರಧಾನಿ ಮೋದಿ, ಪ್ರತಿಭಟನೆಯ ಸಮಯದಲ್ಲಿ ಕೆಲವು ‘ಕಿಡಿಗೇಡಿ ಮಕ್ಕಳು’ ತಮ್ಮನ್ನು ಮತ್ತು ತಮ್ಮ ಮೃತ ತಾಯಿಯನ್ನು ಗುರಿಯಾಗಿಸಿಕೊಂಡು ಅತ್ಯಂತ ಕೀಳು ಮಟ್ಟದ ಮಾತುಗಳನ್ನು ಬಳಸಿದ್ದಾರೆ. ಆದರೆ ನಿಂದನೆಗಳಿಂದ ಎಂದಿಗೂ ಸಮಸ್ಯೆಗಳು ಬಗೆಹರಿಯುವುದಿಲ್ಲ, ಯೌವನದಲ್ಲಿ ಮಾಡಿದ ತಪ್ಪುಗಳನ್ನು ಸರಿಯಾದ ಮಾರ್ಗದರ್ಶನದ ಮೂಲಕ ತಿದ್ದಬೇಕು ಎಂದಿದ್ದಾರೆ. ಯುವಕರನ್ನು ಶಿಕ್ಷಿಸುವುದು, ಅವರನ್ನು ಕೋರ್ಟ್ ಮೆಟ್ಟಿಲೇರಿಸುವುದು ಅಥವಾ ತೊಂದರೆ ಕೊಡುವುದರಿಂದ ಪರಿಸ್ಥಿತಿ ಬದಲಾಗುವುದಿಲ್ಲ. ಹೀಗಾಗಿ ಅವರನ್ನು ಕ್ಷಮಿಸಲು ತಾನು ಬಯಸುತ್ತಿದ್ದು, ಸಮಾಜವೂ ಅವರಿಗೆ ಸರಿಯಾದ ದಾರಿ ತೋರಿಸಬೇಕು ಎಂದು ಪ್ರಧಾನಿ ಕರೆ ನೀಡಿದ್ದಾರೆ. ನೀಟ್ ಅಕ್ರಮಗಳ ಕುರಿತ ಈ ಸರಣಿ ಪ್ರತಿಭಟನೆಗಳ ಬೆನ್ನಲ್ಲೇ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದರು.


