ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು ಏನಾಗಲಿಲ್ಲ ಎಂಬುದನ್ನು ನಾವು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕಿದೆ .
ಖಂಡಿತವಾಗಿಯೂ ಇಲ್ಲಿ ಸಂಭವಿಸಿದ್ದು ಮೋದಿ ಸರ್ಕಾರದ ವಿರುದ್ಧ ಸಾರ್ವಜನಿಕವಾಗಿ, ನೇರಾನೇರವಾಗಿ ನಡೆದ ಮೊದಲ ದಿಕ್ಕಾರ ಮತ್ತು ವ್ಯಂಗ್ಯದ ಪ್ರತಿಭಟನೆ. ಜುಲೈ 20ರ ಹಿಂಸಾಚಾರದ ನಂತರ ಸರ್ಕಾರ ಅತ್ಯಂತ ಜಾಗರೂಕತೆಯಿಂದ ಸ್ಪಂದಿಸಿದ್ದರೆ, ಅದಕ್ಕೆ ಪ್ರಮುಖ ಕಾರಣ ಪ್ರತಿಭಟನೆಯಲ್ಲಿದ್ದ ಶೇ. 95ಕ್ಕಿಂತ ಹೆಚ್ಚು ಯುವಕರು ಮತ್ತು ಮಕ್ಕಳು, ಹಿಂದೂ ಮಧ್ಯಮ ಹಾಗೂ ಮೇಲ್ಮಧ್ಯಮ ವರ್ಗಕ್ಕೆ ಸೇರಿದವರಾಗಿದ್ದರು.
ಇವರೇ ಬಿಜೆಪಿಯ ಮೂಲ ಮತಬ್ಯಾಂಕ್. ನೀವು ಇವರನ್ನು ‘ಜೆನ್ ಜಿ’ (Gen Z) ಎಂದು ಕರೆದು, ಮಾಧ್ಯಮಗಳ ಚರ್ಚೆಗಳಲ್ಲಿ ಅವರ ಭಾಷೆ, ಶೈಲಿ ಅಥವಾ ಗೇಲಿಗಳನ್ನು ಮಾತ್ರ ಎತ್ತಿಹಿಡಿದು ಅವರ ಹೋರಾಟದ ತೀವ್ರತೆಯನ್ನು ಹಗುರಗೊಳಿಸಲು ಯತ್ನಿಸಬಹುದು. ಆದರೆ ಅವರು ಪ್ರದರ್ಶಿಸಿದ ದಿಕ್ಕಾರವನ್ನು ಯಾವುದೇ ಚರ್ಚೆಗಳಿಂದಲೂ ಮುಚ್ಚಿಹಾಕಲು ಸಾಧ್ಯವಿಲ್ಲ.
ಮೊದಲನೆಯದಾಗಿ, ಜುಲೈ 20ರ ಪೊಲೀಸರ ಪೆಟ್ಟಿನ ನಂತರವೂ ಅವರು ಮತ್ತೆ ಜಂತರ್ ಮಂತರ್ಗೆ ಮರಳಿದ ರೀತಿ ಅವರಲ್ಲಿದ್ದ ದೈಹಿಕ ಅಪಾಯವನ್ನು ಎದುರಿಸುವ ತುಡಿತವನ್ನು ತೋರಿಸುತ್ತದೆ. ಎರಡನೆಯದಾಗಿ, ತಮ್ಮ ವೃತ್ತಿಜೀವನದ ಬಗ್ಗೆ ಯಾವುದೇ ಭಯವಿಲ್ಲದೆ ಅವರು ತೋರಿದ ಧೈರ್ಯ ಬೆರಗುಗೊಳಿಸುವಂತಿತ್ತು. 1990ರ ದಶಕದ ಮಂಡಲ್ ವರದಿ ವಿರೋಧಿ ಹೋರಾಟದ ನಂತರ ದೆಹಲಿ ಕಂಡ ಅತ್ಯಂತ ಆಕ್ರೋಶಭರಿತ ವಿದ್ಯಾರ್ಥಿ ಚಳವಳಿ ಇದಾಗಿದೆ. ಎರಡೂ ಹೋರಾಟಗಳ ಮೂಲ ಉದ್ದೇಶ ಒಂದೇ ಆಗಿತ್ತು, ಅದೇ ಶಿಕ್ಷಣ ಮತ್ತು ಉದ್ಯೋಗ.
ಅಂದು ಹೋರಾಟ ಮಾಡಿದ ತಲೆಮಾರಿನಂತೆಯೇ, ನಾಲ್ಕು ದಶಕಗಳ ನಂತರದ ಈ ಯುವ ಪೀಳಿಗೆಯೂ ಪೊಲೀಸರ ದೌರ್ಜನ್ಯಕ್ಕೆ ಅಂಜಲಿಲ್ಲ. ಮೋದಿ ಸರ್ಕಾರದ ವಿರುದ್ಧ ಒಂದು ಮಾತನ್ನೂ ಆಡಲು ಹೆದರಿ ಮೌನಕ್ಕೆ ಶರಣಾಗಿದ್ದ ಮೇಲ್ವರ್ಗದ ಕಟ್ಟುಪಾಡುಗಳನ್ನು ಈ ಯುವಕರು ಧೈರ್ಯವಾಗಿ ಮುರಿದರು. ಇದು ಸರ್ಕಾರದ ಮುಖಕ್ಕೆ ಹಿಡಿದ ಕನ್ನಡಿಯಾಗಿತ್ತು. ಮೋದಿ ಸರ್ಕಾರದ ಘೋಷಣೆಯಾದ ‘ವಿಕಸಿತ ಭಾರತ’ ಅಥವಾ ‘ಅಮೃತ ಕಾಲ’ ಎಂಬ ಪದ ಪುಂಜಗಳಿಗೆ ಪ್ರಭಾವಿತರಾಗದ ದೊಡ್ಡ ಯುವಸಮೂಹ ಇಲ್ಲಿದೆ ಎಂಬುದನ್ನು ಇದು ಸಾಬೀತುಪಡಿಸಿತು.
2047ರ ವೇಳೆಗೆ ಇಂದಿನ ಯುವಕರಿಗೆ 35ರಿಂದ 50 ವರ್ಷ ವಯಸ್ಸಾಗಿರುತ್ತದೆ. ಅಲ್ಲಿಯವರೆಗೆ ಕಾಯುವ ತಾಳ್ಮೆ ಈ ತಲೆಮಾರಿಗೆ ಖಂಡಿತ ಇಲ್ಲ. 2014ರಲ್ಲಿ ಮೋದಿ ಅಧಿಕಾರಕ್ಕೆ ಬಂದಾಗ ಬಾಲ್ಯಾವಸ್ಥೆಯಲ್ಲಿದ್ದ 3 ವರ್ಷದ ಮಗು, 2029ರಲ್ಲಿ ತನ್ನ ಮೊದಲ ಮತ ಚಲಾಯಿಸಲಿದೆ ಎಂಬುದನ್ನು ನಾವಿಲ್ಲಿ ನೆನಪಿನಲ್ಲಿಡಬೇಕು.
ಈ ಹೋರಾಟವನ್ನು ಭಾರತದ ‘ಕೊಲಂಬೋ’ ಅಥವಾ ‘ಢಾಕಾ’ ಮಾದರಿಯ ದಂಗೆ ಎಂದು ಬಣ್ಣಿಸುವುದು ಭಾರತೀಯ ಪ್ರಜಾಪ್ರಭುತ್ವದ ಸಾಮರ್ಥ್ಯಕ್ಕೆ ಮಾಡುವ ಅಪಮಾನ. ಭಾರತದಲ್ಲಿ ಚುನಾಯಿತ ಸರ್ಕಾರವನ್ನು ಬೀಳಿಸುವುದು ಅಷ್ಟು ಸುಲಭವಲ್ಲ. 240 ಸೀಟುಗಳನ್ನು ಗೆದ್ದಿರುವ ಬಿಜೆಪಿಗೆ ಸುಮಾರು 24 ಕೋಟಿ ಭಾರತೀಯರು ಮತ ಹಾಕಿದ್ದಾರೆ, ಇದು ಎರಡನೇ ದೊಡ್ಡ ಪಕ್ಷವಾದ ಕಾಂಗ್ರೆಸ್ಗಿಂತ ಎರಡರಷ್ಟು ಹೆಚ್ಚು ಎಂಬುದನ್ನು ಗಮನದಲ್ಲಿಡಬೇಕು.
ಆದಾಗ್ಯೂ, ಈ ವಿದ್ಯಾರ್ಥಿಗಳು ಮೋದಿ ಸರ್ಕಾರದ ಬಲವಾದ ಕೋಟೆಯಲ್ಲಿ ಸಣ್ಣದೊಂದು ಬಿರುಕನ್ನು ಮೂಡಿಸಿದ್ದಾರೆ. ತಮ್ಮ ಅತ್ಯಂತ ನಿಷ್ಠಾವಂತ ಮತದಾರರಲ್ಲೂ ಸರ್ಕಾರದ ಬಗ್ಗೆ ಒಂದು ರೀತಿಯ ಬೇಸರ ಮತ್ತು ಅಸಹನೆ ಮೂಡುತ್ತಿದೆ ಎಂಬುದನ್ನು ಈ ಪ್ರತಿಭಟನೆ ಎತ್ತಿ ತೋರಿಸಿದೆ. 2018ರ ಛತ್ತೀಸ್ಗಢ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥನೊಬ್ಬ ಹೇಳಿದ ಮಾತು ‘ಎಷ್ಟು ದಿನ ಅಂತ ಒಂದೇ ತರಕಾರಿ (ಸಬ್ಜಿ) ತಿನ್ನೋದು, ಇಷ್ಟವಾದ ಅಡುಗೆಯಾದರೂ ಬೇಸರವಾಗಲ್ವೇ? ಈ ಸಂದರ್ಭಕ್ಕೆ ಸೂಕ್ತವಾಗಿ ಹೊಂದುತ್ತದೆ.
ಈ ರಾಜಕೀಯ ಅಸಹನೆಯೇ ಬಿಜೆಪಿಯನ್ನು ಎಚ್ಚರಗೊಳ್ಳುವಂತೆ ಮಾಡಿದೆ. ತಕ್ಷಣವೇ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ವಿದ್ಯಾರ್ಥಿಗಳ ಬಳಿಗೆ ಕಳುಹಿಸಿ, ಅವರ ಬೇಡಿಕೆಗಳನ್ನು ಆಲಿಸಿ ಜಂಟಿ ಪತ್ರಿಕಾಗೋಷ್ಠಿ ನಡೆಸುವಂತೆ ಮಾಡಿತು. ಈ ಹಿಂದೆ ಭೂಸ್ವಾಧೀನ ಮತ್ತು ಕೃಷಿ ಕಾಯ್ದೆಗಳ ವಿಚಾರದಲ್ಲಿ ಅಸಡ್ಡೆ ತೋರಿಸಿದ್ದ ಸರ್ಕಾರ, ಈ ಬಾರಿ ಮಂಡಿಯೂರಿದೆ ಎಂದರೆ ಅತಿಸಯೋಕ್ತಿಯಲ್ಲ.
ಆದರೆ, ಇಲ್ಲೇನೂ ದೊಡ್ಡ ಕ್ರಾಂತಿ ಸಂಭವಿಸಿಲ್ಲ ಎಂಬುದನ್ನೂ ನಾವು ಗ್ರಹಿಸಬೇಕು. ಇನ್ನು ಎರಡೇ ದಿನಗಳಲ್ಲಿ ಉತ್ತರ ಭಾರತದ ರಸ್ತೆಗಳಲ್ಲಿ ಲಕ್ಷಾಂತರ ‘ಕಾವಡಿಯಾ’ ಯುವಕರು ಕೂಗಾಡುತ್ತಾ ಮೆರವಣಿಗೆ ಹೋಗಲಿದ್ದಾರೆ. ಅವರ ಮೇಲೆಯೂ ಸರ್ಕಾರಿ ಹೆಲಿಕಾಪ್ಟರ್ಗಳು ಹೂಮಳೆ ಸುರಿಸಲಿವೆ. ಈ ಯುವಕರಲ್ಲಿ ಹೆಚ್ಚಿನವರೂ ಇಂದಿನ ನವಪೀಳಿಗೆಯವರೇ (ಜೆನ್ ಜಿ) ಆಗಿದ್ದು, ಇವರೆಲ್ಲರೂ ಬಿಜೆಪಿಯ ಗಟ್ಟಿ ಬೆಂಬಲಿಗರಾಗಿದ್ದಾರೆ.
2029ರವರೆಗಿನ ರಾಜಕೀಯವು ಈ ಯುವಕರು ಮೂಡಿಸಿರುವ ಬಿರುಕನ್ನು ಮುಚ್ಚುವುದು ಅಥವಾ ಅದನ್ನು ಮತ್ತಷ್ಟು ಅಗಲಗೊಳಿಸುವುದರ ಮೇಲೆಯೇ ನಿಂತಿರುತ್ತದೆ. ಮೋದಿ ಸರ್ಕಾರಕ್ಕೂ ಈ ಸವಾಲಿನ ಅರಿವಿದೆ, ಅದಕ್ಕಾಗಿಯೇ ಪ್ರಧಾನಿಯವರು ಈಗ ಇನ್ಸ್ಟಾಗ್ರಾಮ್ನಲ್ಲಿ ಮಾತನಾಡಲು ಶುರುಮಾಡಿದ್ದಾರೆ. ಆದರೆ, 15 ವರ್ಷಗಳಿಂದ ಒಂದೇ ಸರ್ಕಾರ ಆಡಳಿತ ನಡೆಸಿದಾಗ ಜನರಿಗೆ ಬರುವ ಬೇಸರ ಹಾಗೂ ಆಕ್ರೋಶವನ್ನು ಅವರು ಹೇಗೆ ನಿವಾರಿಸುತ್ತಾರೆ?
ಸರ್ಕಾರದ ಪುನಶ್ಚೇತನ ಕೇವಲ ಇನ್ಸ್ಟಾಗ್ರಾಮ್ನಿಂದ ಸಾಧ್ಯವಿಲ್ಲ. ಯುವಜನತೆಗೆ ನೇರ ಸಂಬಂಧವಿರುವ ಶಿಕ್ಷಣ ಇಲಾಖೆಗೆ ಈಗಾಗಲೇ ಐವರು ಸಚಿವರಾಗಿದ್ದಾರೆ. ಕೌಶಲ್ಯಾಭಿವೃದ್ಧಿ ಇಲಾಖೆ ನಾಲ್ಕು ಸಚಿವರನ್ನು ಕಂಡಿದೆ. ದೇಶದಲ್ಲಿ ಉದ್ಯೋಗ ಸೃಷ್ಟಿಗೆ ಪ್ರಮುಖವಾಗಿರುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆಗಳು ಕೇವಲ ಮೈತ್ರಿಕೂಟದ ನಾಯಕರ ಕೈಯಲ್ಲಿದ್ದು, ಯಾವುದೇ ಪ್ರಮುಖ ಬದಲಾವಣೆ ಕಾಣುತ್ತಿಲ್ಲ. ಮೋದಿ ಸರ್ಕಾರ ತನ್ನನ್ನು ತಾನು ಸಂಪೂರ್ಣವಾಗಿ ಹೊಸದಾಗಿ ರೂಪಿಸಿಕೊಳ್ಳಬೇಕಿದೆ.
ಇನ್ನೊಂದೆಡೆ, ಈ ಅವಕಾಶವನ್ನು ಬಳಸಿಕೊಳ್ಳಲು ಬಯಸುವ ವಿರೋಧ ಪಕ್ಷಗಳು ಒಂದನ್ನು ನೆನಪಿನಲ್ಲಿಡಬೇಕು. ಭಾರತದಲ್ಲಿ ಯಾವುದೇ ಶಕ್ತಿಯುತ ನಾಯಕನನ್ನು ಎದುರಾಳಿಗಳು ಸೋಲಿಸುವುದಿಲ್ಲ, ಬದಲಿಗೆ ಆ ನಾಯಕರೇ ಮಾಡುವ ತಪ್ಪುಗಳಿಂದ ಸೋಲುತ್ತಾರೆ. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿಯಿಂದ, ರಾಜೀವ್ ಗಾಂಧಿ ‘ಶಾ ಬಾನೋ’ ಮತ್ತು ‘ಅಯೋಧ್ಯೆ’ ಎಡವಟ್ಟುಗಳಿಂದ, ವಾಜಪೇಯಿ ‘ಇಂಡಿಯಾ ಶೈನಿಂಗ್’ ಎಂಬ ಅತಿಯಾದ ಆತ್ಮವಿಶ್ವಾಸದಿಂದ ಸೋತರು. 2014ರಲ್ಲಿ ಮನ್ಮೋಹನ್ ಸಿಂಗ್ ಸರ್ಕಾರ ದುರ್ಬಲಗೊಂಡಾಗಷ್ಟೇ ಮೋದಿ ಸದೃಢ ನಾಯಕನಂತೆ (ಮಾಧ್ಯಮಗಳ ಸೃಷ್ಠಿ) ಹೊರಹೊಮ್ಮಿದರು.
ಪ್ರತಿ ಬಾರಿಯೂ ಬಲಿಷ್ಠ ನಾಯಕರ ವಿರುದ್ಧ ಜನಾಭಿಪ್ರಾಯ ರೂಪಿಸಲು ಯಾರಾದರೊಬ್ಬರು ಕಾರಣಕರ್ತರಾಗಿದ್ದರು. ಇಂದಿರಾ ವಿರುದ್ಧ ಜಯಪ್ರಕಾಶ್ ನಾರಾಯಣ್, ರಾಜೀವ್ ವಿರುದ್ಧ ವಿ.ಪಿ. ಸಿಂಗ್ ನಿಂತರು. ಈ ಎಲ್ಲ ಬದಲಾವಣೆಗಳ ಹಿಂದೆ ಆರೆಸ್ಸೆಸ್ (RSS) ನಂತಹ ಬಲವಾದ ಸಂಘಟನೆ ಇತ್ತು. ಆದರೆ ಇಂದು ಕಾಂಗ್ರೆಸ್ಗೆ ಅಂತಹ ನಿಷ್ಠಾವಂತ ಪಡೆಗಳ ಬೆಂಬಲವಿಲ್ಲ. ಸಿಕ್ಕಿರುವ ಈ ಸಣ್ಣ ಅವಕಾಶವನ್ನು ಬಳಸಿಕೊಂಡು ತಳಮಟ್ಟದಿಂದ ಬೆಳೆಯಲು ವಿರೋಧ ಪಕ್ಷಗಳಿಗೆ ಮೂರು ವರ್ಷಗಳ ಕಾಲಾವಕಾಶವಿದೆ. ಅದೇ ಸಮಯದಲ್ಲಿ ಮೋದಿ-ಶಾ ಜೋಡಿಗೂ ತಮ್ಮ ಸರ್ಕಾರವನ್ನು ಮತ್ತೆ ಕಟ್ಟಿ ಬೆಳೆಸಲು ಅಷ್ಟೇ ಸಮಯವಿದೆ.
ಅನುವಾದ,
ಮೂಲ: ದಿ ಪ್ರಿಂಟ್


