ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ ಹಾಗೂ ಕೋಮು ದ್ವೇಷ ಹರಡಿದ 33 ವರ್ಷಗಳ ಹಳೆಯ ಪ್ರಕರಣದಲ್ಲಿ 78 ವರ್ಷದ ವೃದ್ಧನನ್ನು ದೋಷಮುಕ್ತಗೊಳಿಸಿದೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ವಿಶೇಷ (ಎನ್ಐಎ) ನ್ಯಾಯಾಧೀಶ ಉಮಾಕಾಂತ್ ಜಿಂದಾಲ್ ಅವರು ಜುಲೈ 31, 2026 ರಂದು ತೀರ್ಪು ಪ್ರಕಟಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124A (ದೇಶದ್ರೋಹ), 295A (ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು) ಮತ್ತು 153B (ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಆರೋಪಗಳು) ಅಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದ ಗೋರಖ್‌ಪುರ ಜಿಲ್ಲೆಯ ಇಸ್ಮಾಯಿಲ್‌ಪುರ ನಿವಾಸಿ ಮೊಹಮ್ಮದ್ ನಯೀಮ್ ಅವರನ್ನು ದೋಷಮುಕ್ತಗೊಳಿಸಿದ್ದಾರೆ. ಈ ಪ್ರಕರಣವು 1993ರಲ್ಲಿ ಗೋರಖ್‌ಪುರದ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಾಸಿಕ್ಯೂಷನ್ ಪ್ರಕಾರ, ಜನವರಿ 26,1993 ರಂದು ಅಂದಿನ ಕೊತ್ವಾಲಿ ಇನ್ಸ್‌ಪೆಕ್ಟರ್ ಪವನ್ ಕುಮಾರ್ ಸಿಂಗ್ ಅವರು ಇತರ ಪೊಲೀಸ್ ಸಿಬ್ಬಂದಿಯೊಂದಿಗೆ ಗಸ್ತು ತಿರುಗುತ್ತಿದ್ದಾಗ, ಇಸ್ಮಾಯಿಲ್‌ಪುರ ಪ್ರದೇಶದ ಕೆಲವು ಮನೆಗಳಿಂದ ಕೆಲವರು ಕಪ್ಪು ಧ್ವಜಗಳನ್ನು ಹಾರಿಸುತ್ತಿರುವುದನ್ನು ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಹಾಗೂ ‘ಗಣರಾಜ್ಯೋತ್ಸವ ಮುರ್ದಾಬಾದ್’ ಎಂಬ ಘೋಷಣೆಗಳನ್ನು ಕೂಗುತ್ತಿರುವುದನ್ನು ನೋಡಿದ್ದಾರೆ ಎನ್ನಲಾಗಿದೆ.
ಸಿಂಗ್ ಅವರು ತಮ್ಮ ಎಫ್‌ಐಆರ್‌ನಲ್ಲಿ, ಆರೋಪಿಗಳು ಭಾರತದಲ್ಲಿ ಮತ್ತೊಂದು ಪಾಕಿಸ್ತಾನದ ಅಗತ್ಯವಿದೆ ಎಂದು ಕೂಗಿದ್ದರು, ಬಾಬರಿ ಮಸೀದಿ ಧ್ವಂಸದ ಬಗ್ಗೆ ಪ್ರಸ್ತಾಪಿಸಿದ್ದರು ಮತ್ತು ದ್ವೇಷವನ್ನು ಉತ್ತೇಜಿಸುವ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ನೀಡಿದ್ದರು ಎಂದು ಪ್ರತಿಪಾದಿಸಿದ್ದರು.
ಪೊಲೀಸರು ಪ್ರತಿಪಾದಿಸಿದ ಪ್ರಕಾರ, ಆರೋಪಿಗಳು ಬಂಧಿಸುವ ಮುನ್ನವೇ ಸ್ಥಳದಿಂದ ಪರಾರಿಯಾಗಿದ್ದರು ಮತ್ತು ಘಟನಾ ಸ್ಥಳದಿಂದ ನಾಲ್ಕು ಕಪ್ಪು ಧ್ವಜಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ, ಪೊಲೀಸರು ಆರೋಪಿಗಳನ್ನು ಮೊಹಮ್ಮದ್ ನಯೀಮ್, ಮೊಹಮ್ಮದ್ ಯೂಸುಫ್, ಅತಾವುಲ್ಲಾ ಮತ್ತು ಇತರರು ಎಂದು ಗುರುತಿಸಿದ್ದರು.
ನಯೀಮ್ ಅವರ ಪರ ವಕೀಲರಾದ ರಾಹುಲ್ ಸೋಂಕರ್ ತಿಳಿಸಿರುವ ಪ್ರಕಾರ, ಈ ಪ್ರಕರಣವು ಅಸಾಮಾನ್ಯವಾಗಿ ಸುದೀರ್ಘವಾದ ತನಿಖೆಗೆ ಸಾಕ್ಷಿಯಾಗಿದೆ ಮತ್ತು ಇದರ ವಿಚಾರಣೆಯು ಮೂರು ದಶಕಗಳಿಗೂ ಹೆಚ್ಚು ಕಾಲ ನಡೆದಿದೆ. ಈ ಪ್ರಕರಣವು 1993ರಲ್ಲಿ ದಾಖಲಾಗಿತ್ತು ಮತ್ತು ತನಿಖಾಧಿಕಾರಿಯು 2003ರಲ್ಲಿ ಅಂತಿಮ ವರದಿಯನ್ನು ಸಲ್ಲಿಸಿ, ಆರೋಪಿಗಳ ವಿರುದ್ಧ ಮೊಕದ್ದಮೆ ಹೂಡಲು ಸಾಕಷ್ಟು ಪುರಾವೆಗಳು ಲಭ್ಯವಿಲ್ಲ ಎಂದು ತಿಳಿಸಿದ್ದರು. ಅಲ್ಲದೆ, ಆರೋಪಿಗಳಲ್ಲಿ ಒಬ್ಬರಾದ ಮೊಹಮ್ಮದ್ ಯೂಸುಫ್ ಮರಣ ಹೊಂದಿದ್ದಾರೆ ಎಂದೂ ಆ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಅಂತಿಮ ವರದಿಯನ್ನು ಅಂಗೀಕರಿಸದ ಕಾರಣ, ಮತ್ತೊಬ್ಬ ತನಿಖಾಧಿಕಾರಿಯು ಯಾವುದೇ ಹೊಸ ಪುರಾವೆಗಳನ್ನು ಸಂಗ್ರಹಿಸದೆಯೇ 2005ರಲ್ಲಿ ನಯೀಮ್ ಮತ್ತು ಅತಾವುಲ್ಲಾ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಪ್ರಕರಣದ ವಿಚಾರಣೆ ಬಾಕಿ ಇರುವಾಗಲೇ ಸಹ-ಆರೋಪಿ ಅತಾವುಲ್ಲಾ ಮರಣ ಹೊಂದಿದರು. ಹೀಗಾಗಿ ವಿಚಾರಣೆಯು ಕೇವಲ ನಯೀಮ್ ವಿರುದ್ಧ ಮಾತ್ರ ಮುಂದುವರಿಯಿತು. ನಂತರ, ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕಾಯ್ದೆಯಡಿ ನ್ಯಾಯವ್ಯಾಪ್ತಿಯಲ್ಲಿನ ಬದಲಾವಣೆಗಳಿಂದಾಗಿ, ಈ ಪ್ರಕರಣವನ್ನು ಗೋರಖ್‌ಪುರದಿಂದ ಲಕ್ನೋದ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು ಎಂದು ರಾಹುಲ್ ಸೋಂಕರ್ ಹೇಳಿದ್ದಾರೆ.
ಲಭ್ಯವಿರುವ ಸಾಕ್ಷ್ಯಾಧಾರಗಳು ಗಂಭೀರವಾದ ಕಾರ್ಯವಿಧಾನದ ಲೋಪದೋಷಗಳಿಂದ ಕೂಡಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯವು, ನಯೀಮ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. ಅವರ ಜಾಮೀನು ಬಾಂಡ್‌ಗಳನ್ನು ರದ್ದುಗೊಳಿಸಿದೆ. ಜೊತೆಗೆ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 437A ಅಡಿಯ ಶಾಸನಬದ್ಧ ಬಾಂಡ್ ಆರು ತಿಂಗಳವರೆಗೆ ಜಾರಿಯಲ್ಲಿರಬೇಕು ಎಂದು ನಿರ್ದೇಶಿಸಿದೆ. ನ್ಯಾಯಾಲಯವು ತೀರ್ಪು ಪ್ರಕಟಿಸಿದ ತಕ್ಷಣವೇ, ಮೊಹಮ್ಮದ್ ನಯೀಮ್ ಅವರು ಕಣ್ಣೀರು ಹಾಕಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
“ಈಗಲಾದರೂ ಜನರು ನನ್ನನ್ನು ದೇಶದ್ರೋಹಿ ಎಂದು ಕರೆಯುವುದನ್ನು ನಿಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. 33 ವರ್ಷಗಳ ಕಾಲ ನಾನು ನಿರ್ದೋಷಿ, ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಎಲ್ಲರಿಗೂ ಹೇಳುತ್ತಲೇ ಇದ್ದೆ. ಇಂದು ನನಗೆ ನ್ಯಾಯ ಸಿಕ್ಕಂತಾಗಿದೆ” ಎಂದು ನಯೀಮ್ ಹೇಳಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ, ಪ್ರಾಸಿಕ್ಯೂಷನ್ ಮಂಡಿಸಿದ ವಾದದಲ್ಲಿ ಗಂಭೀರ ಲೋಪದೋಷಗಳಿರುವುದನ್ನು ನ್ಯಾಯಾಲಯವು ಪತ್ತೆಹಚ್ಚಿದೆ. ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾದ ಕಪ್ಪು ಧ್ವಜಗಳನ್ನು ವಿಚಾರಣೆಯ ಅವಧಿಯಲ್ಲಿ ನ್ಯಾಯಾಲಯದ ಮುಂದೆ ಎಂದಿಗೂ ಹಾಜರುಪಡಿಸಿಲ್ಲ. ಅವುಗಳನ್ನು ವಶಪಡಿಸಿಕೊಂಡಿದ್ದನ್ನು ಸಾಬೀತುಪಡಿಸುವ ಸರಿಯಾದ ಜಪ್ತಿ ಪತ್ರವಾಗಲಿ ಅಥವಾ ವಶಪಡಿಸಿಕೊಂಡ ವಸ್ತುಗಳನ್ನಾಗಲಿ ಸಾಕ್ಷ್ಯವಾಗಿ ಪ್ರಸ್ತುತಪಡಿಸದ ಕಾರಣ, ಪ್ರಾಸಿಕ್ಯೂಷನ್ ಹೆಣೆದ ಕಥೆಯು ಸಂಶಯಾಸ್ಪದವಾಗಿದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ಪ್ರಾಸಿಕ್ಯೂಷನ್‌ನ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರಾದ ಕಾನ್‌ಸ್ಟೆಬಲ್ ದುರ್ವಿಜಯ್ ಸಿಂಗ್ ಅವರು ಕ್ರಾಸ್ ಎಕ್ಸಾಮಿನೇಷನ್ ಸಂದರ್ಭದಲ್ಲಿ, ಪೊಲೀಸರು ಸ್ಥಳಕ್ಕೆ ತಲುಪಿದಾಗ ಘೋಷಣೆಗಳನ್ನು ಕೂಗುತ್ತಿದ್ದ ಜನರು ಆಗಲೇ ಪರಾರಿಯಾಗಿದ್ದರು ಎಂಬುವುದನ್ನು ಒಪ್ಪಿಕೊಂಡಿದ್ದಾರೆ ಎಂದು ನ್ಯಾಯಾಲಯವು ಗುರುತಿಸಿದೆ. ದೂರುದಾರ ಮತ್ತು ಅಂದಿನ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಪವನ್ ಕುಮಾರ್ ಸಿಂಗ್ ಅವರು ಕೇವಲ ಎಕ್ಸಾಮಿನೇಷನ್-ಇನ್-ಚೀಫ್ (ಮುಖ್ಯ ವಿಚಾರಣೆ) ಗೆ ಮಾತ್ರ ಹಾಜರಾಗಿದ್ದರು ಮತ್ತು ಪದೇ ಪದೇ ಅವಕಾಶಗಳನ್ನು ನೀಡಿದಾಗ್ಯೂ ಅವರನ್ನು ಕ್ರಾಸ್ ಎಕ್ಸಾಮಿನೇಷನ್‌ಗೆ ಎಂದಿಗೂ ಹಾಜರುಪಡಿಸಿರಲಿಲ್ಲ ಎಂಬುದನ್ನು ತೀರ್ಪು ಎತ್ತಿ ತೋರಿಸಿದೆ.
ವಿಶೇಷ ನ್ಯಾಯಾಧೀಶರು ತಮ್ಮ ಅವಲೋಕನದಲ್ಲಿ, ಎರಡನೇ ತನಿಖಾಧಿಕಾರಿಯು ತಾವೆಂದಿಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ, ಯಾವುದೇ ಹೊಸ ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿರಲಿಲ್ಲ ಮತ್ತು ಕೇವಲ ಹಿಂದಿನ ತನಿಖಾಧಿಕಾರಿ ಸಂಗ್ರಹಿಸಿದ್ದ ದಾಖಲೆಗಳ ಆಧಾರದ ಮೇಲೆಯೇ ದೋಷಾರೋಪ ಪಟ್ಟಿ ಸಲ್ಲಿಸಿದ್ದಾಗಿ ಕ್ರಾಸ್ ಎಕ್ಸಾಮಿನೇಷನ್ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಗುರುತಿಸಿದ್ದಾರೆ.
ಪ್ರಾಸಿಕ್ಯೂಷನ್ ಸಾಕ್ಷಿಗಳ ಪ್ರಕಾರ, ಪೊಲೀಸರು ಸ್ಥಳಕ್ಕೆ ಬರುವ ಮುನ್ನವೇ ಎಲ್ಲರೂ ಪರಾರಿಯಾಗಿದ್ದಾಗ, ಪೊಲೀಸರು ನಯೀಮ್ ಮತ್ತು ಇತರ ಆರೋಪಿಗಳನ್ನು ಹೇಗೆ ಗುರುತಿಸಿದರು ಎಂದು ನ್ಯಾಯಾಲಯವು ಪ್ರಶ್ನಿಸಿದೆ. ಆರೋಪಿಗಳ ಗುರುತಿನ ಬಗ್ಗೆ ಪೊಲೀಸರಿಗೆ ಯಾರು ಮಾಹಿತಿ ನೀಡಿದರು ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಮತ್ತು ನಯೀಮ್ ಅವರನ್ನು ಈ ಘಟನೆಗೆ ಲಿಂಕ್ ಮಾಡಲು ಯಾವುದೇ ಸ್ವತಂತ್ರ ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.


