Homeಮುಖಪುಟದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

- Advertisement -
- Advertisement -

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌ ವರ್ಮಾ ವಿರುದ್ಧ ಎಫ್‌ಐಆರ್‌ ದಾಖಲಿಸಲು ನಿರಾಕರಿಸಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

ಸಿಪಿಐ(ಎಂ) ಹಿರಿಯ ನಾಯಕಿ ಬೃಂದಾ ಕಾರಟ್‌ ಅವರು ಸುಪ್ರೀಂ ಕೋರ್ಟ್‌ನ ಏಪ್ರಿಲ್ 29ರ ತೀರ್ಪಿನ ವಿರುದ್ಧ ಈ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಿದ್ದರು.

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಜುಲೈ 29, 2026 ರಂದು ನೀಡಿರುವ ಆದೇಶದಲ್ಲಿ, “ನಾವು ನೀಡಿರುವ ಆಕ್ಷೇಪಾರ್ಹ ಆದೇಶದಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಸ್ಪಷ್ಟವಾಗಿ ಹೇಳಬೇಕೆಂದರೆ, ತೀರ್ಪಿನ ಮರುಪರಿಶೀಲನೆಗೆ ಅರ್ಹವಾಗುವಂತಹ ಯಾವುದೇ ಕಾನೂನಾತ್ಮಕ ಅಥವಾ ವಾಸ್ತವಿಕ ದೋಷಗಳು ನಮಗೆ ಗೋಚರಿಸುತ್ತಿಲ್ಲ” ಎಂದು ಸ್ಪಷ್ಟಪಡಿಸಿದೆ. 

ಇದರೊಂದಿಗೆ ಈ ವಿಷಯದಲ್ಲಿ ಬಹಿರಂಗ ನ್ಯಾಯಾಲಯದಲ್ಲಿ (ಓಪನ್ ಕೋರ್ಟ್) ವಿಚಾರಣೆ ನಡೆಸಬೇಕು ಎಂಬ ಮನವಿಯನ್ನೂ ನ್ಯಾಯಪೀಠ ನಿರಾಕರಿಸಿದೆ. ಸುಪ್ರೀಂ ಕೋರ್ಟ್‌ನ ನಿಯಮಾವಳಿಗಳ ಪ್ರಕಾರ, ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಾಧೀಶರು ತಮ್ಮ ಚೇಂಬರ್‌ಗಳಲ್ಲಿ, ವಕೀಲರ ನೇರ ಉಪಸ್ಥಿತಿ, ಮೌಖಿಕ ವಾದಗಳಿಲ್ಲದೆ ಕೇವಲ ಲಿಖಿತ ದಾಖಲೆಗಳ ಪರಿಶೀಲನೆಯ ಮೂಲಕ ವಿಲೇವಾರಿ ಮಾಡುತ್ತಾರೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ಮಾಜಿ ಕೇಂದ್ರ ಸಚಿವರಾಗಿದ್ದರೆ, ಪರ್ವೇಶ್‌ ವರ್ಮಾ ಅವರು ಪ್ರಸ್ತುತ ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ದ್ವೇಷ ಭಾಷಣದ ವಿರುದ್ಧ ಸಿಆರ್‌ಪಿಸಿಯ ಸೆಕ್ಷನ್ 156(3) ರ ಅಡಿಯಲ್ಲಿ ದೆಹಲಿ ಪೊಲೀಸರಿಗೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ ವಜಾಗೊಳಿಸಿತ್ತು. ಈ ನಿರ್ಧಾರವನ್ನು ಎತ್ತಿಹಿಡಿದಿದ್ದ ದೆಹಲಿ ಹೈಕೋರ್ಟ್‌ನ ಜೂನ್ 2022 ರ ಆದೇಶವನ್ನು ಪ್ರಶ್ನಿಸಿ ಬೃಂದಾ ಕಾರಟ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

ಜನವರಿ 27, 2020 ರಂದು ದೆಹಲಿ ಚುನಾವಣಾ ಪ್ರಚಾರದ ವೇಳೆ ಅನುರಾಗ್ ಠಾಕೂರ್ ಅವರು “ದೇಶ್ ಕೆ ಗದ್ದರೋಂ ಕೋ, ಗೋಲಿ ಮಾರೋಂ ಸಾಲೋಂ ಕೋ” (ದೇಶದ್ರೋಹಿಗಳಿಗೆ ಗುಂಡಿಕ್ಕಿ) ಎಂದು ಬಹಿರಂಗವಾಗಿ ಜನರಿಂದ ಘೋಷಣೆ ಕೂಗಿಸಿದ್ದರು. ಮತ್ತೊಂದೆಡೆ ಪರ್ವೇಶ್‌ ವರ್ಮಾ ಅವರು ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ಉದ್ದೇಶಿಸಿ, “ಅವರು ನಿಮ್ಮ ಮನೆಗಳಿಗೆ ನುಗ್ಗಿ ನಿಮ್ಮ ಹೆಣ್ಣುಮಕ್ಕಳು ಮತ್ತು ಸಹೋದರಿಯರ ಮೇಲೆ ಅತ್ಯಾಚಾರ ಮಾಡಿ ಕೊಲ್ಲುವ ಒಳನುಸುಳುಕೋರರು” ಎಂದು ನಿಂದನಾತ್ಮಕ ಭಾಷಣ ಮಾಡಿದ್ದರು. ಈ ಹೇಳಿಕೆಗಳು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 153 ಎ, 153 ಬಿ, 295 ಎ ಮತ್ತು 505 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಾಗಿವೆ ಎಂದು ಕಾರಟ್ ವಾದಿಸಿದ್ದರು.

ಈ ಮೊದಲು ಏಪ್ರಿಲ್ 29 ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಪೀಠವು, ಸೆಕ್ಷನ್ 156(3) ರ ಅಡಿಯಲ್ಲಿ ತನಿಖೆಗೆ ಆದೇಶಿಸಲು ಮ್ಯಾಜಿಸ್ಟ್ರೇಟ್‌ಗೆ ಸೆಕ್ಷನ್ 196 CrPC ಅಡಿಯಲ್ಲಿ ಸರ್ಕಾರದ ಪೂರ್ವಾನುಮತಿ ಅಗತ್ಯವಿಲ್ಲ ಎಂದು ಹೇಳಿತ್ತಾದರೂ, ಈ ಭಾಷಣಗಳು ಯಾವುದೇ ನಿರ್ದಿಷ್ಟ ಸಮುದಾಯವನ್ನು ನೇರವಾಗಿ ಗುರಿಯಾಗಿಸಿಕೊಂಡಿಲ್ಲ ಹಾಗೂ ಯಾವುದೇ ಗುರುತಿಸಬಹುದಾದ ಪ್ರಥಮ ದೃಷ್ಟಿಯ ಅಪರಾಧವನ್ನು ಬಹಿರಂಗಪಡಿಸಿಲ್ಲ ಎಂದು ಕೆಳ ನ್ಯಾಯಾಲಯಗಳ ಅಭಿಪ್ರಾಯವನ್ನು ಎತ್ತಿಹಿಡಿದಿತ್ತು.

ಆದರೆ, ಸುಪ್ರೀಂ ಕೋರ್ಟ್‌ನ ಈ ತೀರ್ಮಾನವು “ದಾಖಲೆಗಳ ಮೇಲ್ಮೈಯಲ್ಲಿಯೇ ಗೋಚರಿಸುವ ಸ್ಪಷ್ಟ ದೋಷ” ಎಂದು ಬೃಂದಾ ಕಾರಟ್ ತಮ್ಮ ಪುನರ್ ಪರಿಶೀಲನಾ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ವಿಚಾರಣಾ ನ್ಯಾಯಾಲಯವಾಗಲಿ ಅಥವಾ ಹೈಕೋರ್ಟ್ ಆಗಲಿ ವಾಸ್ತವಿಕ ಆರೋಪಗಳನ್ನು ಮತ್ತು ವಿಡಿಯೋ ಸಾಕ್ಷ್ಯಗಳನ್ನು ಸಮಗ್ರವಾಗಿ ಪರಿಶೀಲಿಸಿಲ್ಲ. ಹೈಕೋರ್ಟ್‌ ಕೇವಲ ಸರ್ಕಾರದ ಅನುಮತಿಯ ಕಾನೂನು ಪ್ರಶ್ನೆಗೆ ಸೀಮಿತವಾಗಿ ಪರಿಶೀಲನೆ ನಡೆಸಿತ್ತು ಮತ್ತು ತನ್ನ ಯಾವುದೇ ಅವಲೋಕನಗಳು ಭವಿಷ್ಯದ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರಬಾರದು ಎಂದು ಸ್ಪಷ್ಟಪಡಿಸಿತ್ತು ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿತ್ತು.

ಅಲ್ಲದೆ, ಜನವರಿ 2020 ರಲ್ಲಿ ಕೇಂದ್ರ ಚುನಾವಣಾ ಆಯೋಗ ಹೊರಡಿಸಿದ್ದ ಆದೇಶಗಳನ್ನು ಕಾರಟ್ ಅವರು ತಮ್ಮ ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದರು. ಈ ನಾಯಕರ ಭಾಷಣಗಳು ಮಾದರಿ ನೀತಿ ಸಂಹಿತೆಯನ್ನು ಗಂಭೀರವಾಗಿ ಉಲ್ಲಂಘಿಸಿವೆ, ಕೋಮು ಭಿನ್ನಾಭಿಪ್ರಾಯಗಳನ್ನು ಉಲ್ಬಣಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಇಬ್ಬರನ್ನೂ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದುಹಾಕಿ, ಪ್ರಚಾರ ನಿಷೇಧಿಸಿತ್ತು. ಇಷ್ಟೆಲ್ಲಾ ಸ್ಪಷ್ಟ ಸಾಕ್ಷ್ಯಗಳು ಮತ್ತು ವೀಡಿಯೊ ಆಧಾರಗಳಿದ್ದರೂ, ದೆಹಲಿ ಪೊಲೀಸರ ತನಿಖಾ ವರದಿಯನ್ನೇ ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ ಸ್ವತಂತ್ರ ತಾರ್ಕಿಕತೆಯಿಲ್ಲದೆ ಅರ್ಜಿ ವಜಾಗೊಳಿಸಿದೆ ಎಂದು ಮರುಪರಿಶೀಲನಾ ಅರ್ಜಿಯಲ್ಲಿ ವಾದಿಸಲಾಗಿತ್ತು. 

ಈ ಹಿಂದಿನ ತೀರ್ಪನ್ನು ಹಿಂಪಡೆದು, ಎರಡೂ ಕಡೆಯ ವಾದ ಆಲಿಸಿ ಅರ್ಹತೆಯ ಆಧಾರದಲ್ಲಿ ಹೊಸ ತೀರ್ಪು ನೀಡಬೇಕೆಂಬ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಇದೀಗ ಸಂಪೂರ್ಣವಾಗಿ ತಿರಸ್ಕರಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...