ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸೋಮವಾರ (ಜಆ.3) ಖುಲಾಸೆಗೊಳಿಸಿ ಆದೇಶಿಸಿದೆ.
ಈ ತೀರ್ಪಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಖ್ಯಾತ ಕುಸ್ತಿಪಟು ಹಾಗೂ ಕಾಂಗ್ರೆಸ್ ನಾಯಕಿ ವಿನೇಶ್ ಫೋಗಟ್, “ಮೊದಲ ದಿನದಿಂದಲೂ ಇಡೀ ಸರ್ಕಾರಿ ಯಂತ್ರ ಹಾಗೂ ವ್ಯವಸ್ಥೆಯು ಬ್ರಿಜ್ ಭೂಷಣ್ ರಕ್ಷಣೆಗಾಗಿಯೇ ಕೆಲಸ ಮಾಡುತ್ತಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಆಡಳಿತ ಪಕ್ಷದ ಪ್ರಭಾವಿ ನಾಯಕನ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಸ್ತೆಗಿಳಿದು ಹೋರಾಡಲು ನಮಗೆ ಅಪಾರ ಧೈರ್ಯ ಬೇಕಾಯಿತು. ಆದರೆ, ಆರಂಭದಿಂದಲೂ ಸರ್ಕಾರ ಮತ್ತು ಇಡೀ ವ್ಯವಸ್ಥೆ ಅವರನ್ನು ರಕ್ಷಿಸಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರಿಜ್ ಭೂಷಣ್ ತಮ್ಮ ರಾಜಕೀಯ ಪ್ರಭಾವ ಮತ್ತು ತೋಳ್ಬಲ ಬಳಸಿ ಹಲವು ಯುವತಿಯರನ್ನು ಹೆದರಿಸಿ, ದೂರು ಹಿಂಪಡೆಯುವಂತೆ ಮಾಡಿದ್ದಾರೆ ಎಂದು ವಿನೇಶ್ ಆರೋಪಿಸಿದ್ದಾರೆ.
ನ್ಯಾಯಾಲಯದ ತೀರ್ಪಿನಿಂದ ಮಹಿಳಾ ಕುಸ್ತಿಪಟುಗಳಿಗೆ ತೀವ್ರ ನಿರಾಶೆಯಾಗಿದ್ದರೂ, ನಾವು ಭರವಸೆ ಕಳೆದುಕೊಂಡಿಲ್ಲ. ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ವಕೀಲರಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿನೇಶ್ ಈ ಪ್ರಕರಣದ ಆರು ದೂರುದಾರರಲ್ಲಿ ಒಬ್ಬರು. ಲೈಂಗಿಕ ಕಿರುಕುಳ ಪ್ರಕರಣಗಳ ಸಂತ್ರಸ್ತೆಯರ ಗುರುತನ್ನು ರಕ್ಷಿಸುವ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ, ವಿಚಾರಣೆ ನಡೆಯುವವರೆಗೆ ತಮ್ಮ ಗುರುತನ್ನು ಬಹಿರಂಗಪಡಿಸಿರಲಿಲ್ಲ ಎಂದು ಅವರು ಈ ಹಿಂದೆ ತಿಳಿಸಿದ್ದರು.
2023ರಲ್ಲಿ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪಗಳು ಕೇಳಿಬಂದ ಬಳಿಕ ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಹಾಗೂ ಬಜರಂಗ್ ಪುನಿಯಾ ನೇತೃತ್ವದಲ್ಲಿ ಹಲವು ತಿಂಗಳುಗಳ ಕಾಲ ಪ್ರತಿಭಟನೆ ನಡೆದಿತ್ತು. ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕು ಹಾಗೂ WFI ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಕುಸ್ತಿಪಟುಗಳು ಆಗ ಒತ್ತಾಯಿಸಿದ್ದರು.
ಈ ಪ್ರಕರಣದ ಸುದೀರ್ಘ ವಿಚಾರಣೆಯ ಬಳಿಕ ದೆಹಲಿ ಕೋರ್ಟ್ ಬ್ರಿಜ್ ಭೂಷಣ್ ಹಾಗೂ ಸಹ ಆರೋಪಿ ವಿನೋದ್ ತೋಮರ್ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ತೀರ್ಪು ನೀಡಿದೆ. ತೀರ್ಪಿನ ನಂತರ ಪ್ರತಿಕ್ರಿಯಿಸಿರುವ ಬ್ರಿಜ್ ಭೂಷಣ್, “ನ್ಯಾಯಾಲಯ ನನ್ನನ್ನು ಗೌರವಯುತವಾಗಿ ಖುಲಾಸೆಗೊಳಿಸಿದೆ, ನಾನು ಸಂತೋಷವಾಗಿದ್ದೇನೆ” ಎಂದು ಹೇಳಿದ್ದಾರೆ.


