ಬಿಹಾರದ ನಳಂದ ಜಿಲ್ಲೆಯಲ್ಲಿ ಮಧ್ಯಾಹ್ನದ ಊಟ ಸೇವಿಸಿದ ನಂತರ 34 ಮಕ್ಕಳು ಅಸ್ವಸ್ಥರಾಗಿದ್ದಾರೆ. ಅಡುಗೆಯವರು ಉಪ್ಪಿನ ಬದಲಿಗೆ ಕಣ್ತಪ್ಪಿನಿಂದ ಡಿಟರ್ಜೆಂಟ್ ಪುಡಿಯನ್ನು ಬೆರೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಆಗಸ್ಟ್ 18 ರ ಮಂಗಳವಾರ ಪಾರ್ಸಾ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ಸಂಭವಿಸಿದ್ದಿ, ಕೆಲವು ವಿದ್ಯಾರ್ಥಿಗಳು ಗಂಟಲಿನಲ್ಲಿ ಉರಿ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವುದಾಗಿ ದೂರಿದ್ದಾರೆ.
ಸರ್ಕಾರೇತರ ಸಂಸ್ಥೆಯೊಂದು (ಎನ್‌ಜಿಒ) ಸರಬರಾಜು ಮಾಡಿದ ಮಧ್ಯಾಹ್ನದ ಊಟವನ್ನು ವಿದ್ಯಾರ್ಥಿಗಳಿಗೆ ನೀಡಲಾಗಿತ್ತು, ಇದನ್ನು ನಿಗದಿತ ಮೆನುವಿನ ಪ್ರಕಾರ ನೀಡಲಾಯಿತು.
ಹಲವು ಮಕ್ಕಳು ಆಹಾರದಲ್ಲಿ ಉಪ್ಪು ಇಲ್ಲ ಎಂದು ದೂರು ನೀಡಲು ಪ್ರಾರಂಭಿಸಿದ್ದಾರೆ. ಅಷ್ಟರಲ್ಲಿ ಕೆಲವು ವಿದ್ಯಾರ್ಥಿಗಳು ಈಗಾಗಲೇ ಊಟ ಮಾಡಿದ್ದರು. ಸ್ಥಳೀಯರ ಪ್ರಕಾರ, ಉಪ್ಪು ಮತ್ತು ಡಿಟರ್ಜೆಂಟ್ ಪುಡಿ ಪಾತ್ರೆಗಳನ್ನು ಅಡುಗೆಮನೆಯಲ್ಲಿ ಅದೇ ಸ್ಥಳದಲ್ಲಿ ಇರಿಸಲಾಗಿತ್ತು, ಅಡುಗೆಯವರು ಡಿಟರ್ಜೆಂಟ್ ಅನ್ನು ಉಪ್ಪು ಎಂದು ತಪ್ಪಾಗಿ ಭಾವಿಸಿ ಆಹಾರಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಊಟ ಸೇವಿಸಿದ ತಕ್ಷಣ, ಹಲವಾರು ವಿದ್ಯಾರ್ಥಿಗಳು ತಮ್ಮ ಗಂಟಲು ಉರಿಯುತ್ತಿದೆ ಮತ್ತು ತಲೆತಿರುಗುತ್ತಿದೆ ಎಂದು ವರದಿ ಮಾಡಿದ್ದಾರೆ. ಕೆಲವರು ವಾಂತಿ ಮಾಡಿಕೊಂಡಿದ್ದರು. ಆರಂಭದಲ್ಲಿ ಅವರಿಗೆ ಶಾಲೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು, ನಂತರ ಸದರ್ ಆಸ್ಪತ್ರೆಗೆ ವರ್ಗಾಯಿಸಲಾಯಿತು.
ಪ್ರಾಂಶುಪಾಲ ಶೈಲೇಂದ್ರ ಕುಮಾರ್ ಸಿಂಗ್ ಮಾತನಾಡಿ, “ಮಕ್ಕಳಿಗೆ ಕಣ್ತಪ್ಪಿನಿಮದ ಡಿಟರ್ಜೆಂಟ್ ಪೌಡರ್‌ನೊಂದಿಗೆ ಆಹಾರವನ್ನು ನೀಡಲಾಗಿದೆ ಎಂದು ಹೇಳಿದರು, ಮಧ್ಯಾಹ್ನದ ಊಟವನ್ನು ಎನ್‌ಜಿಒ ಪೂರೈಸಿದೆ” ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಶಿಕ್ಷಣ ಅಧಿಕಾರಿ, ಈ ಆರೋಪಗಳನ್ನು ನಿರಾಕರಿಸಿದ್ದಾರೆ. ತನಿಖೆ ನಡೆಯುತ್ತಿದ್ದು, ಆಸ್ಪತ್ರೆಯು ವೈದ್ಯಕೀಯ ವರದಿಯನ್ನು ನೀಡಿದ ನಂತರವೇ ಅನಾರೋಗ್ಯದ ಹಿಂದಿನ ನಿಜವಾದ ಕಾರಣವನ್ನು ಬಹಿರಂಗಪಡಿಸಲಾಗುತ್ತದೆ ಎಂದು ಅವರು ಹೇಳಿದರು.
ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಇಒ ಹೇಮಚಂದ್ರ ಪ್ರತಿಪಾದಿಸಿದರು.
ನಳಂದ ಸಿವಿಲ್ ಸರ್ಜನ್ ಡಾ. ಜಯ ಪ್ರಕಾಶ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸ್ಥಿತಿಯನ್ನು ಪರಿಶೀಲಿಸಿದರು. ಇದು ವಿಷದ ಆಹಾರ ಪ್ರಕರಣ ಎಂದು ಅವರು ದೃಢಪಡಿಸಿದರು. ಎಲ್ಲಾ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.
ಬಿಹಾರ ಗ್ರಾಮೀಣಾಭಿವೃದ್ಧಿ ಸಚಿವ ಶ್ರವಣ್ ಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಬಾಧಿತ ವಿದ್ಯಾರ್ಥಿಗಳನ್ನು ಭೇಟಿ ಮಾಡಿದರು. ಅವರ ಸ್ಥಿತಿಯ ಬಗ್ಗೆ ವೈದ್ಯರೊಂದಿಗೆ ಮಾತನಾಡಿದರು.
ಮಧ್ಯಾಹ್ನದ ಊಟದ ತಯಾರಿಕೆ ಮತ್ತು ವಿತರಣೆಯಲ್ಲಿ ಹೇಗೆ ಲೋಪ ಸಂಭವಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ವಿವರವಾದ ತನಿಖೆ ನಡೆಸಲಾಗುವುದು ಎಂದು ಕುಮಾರ್ ಹೇಳಿದರು.


