ನಿನ್ನೆ ರಾತ್ರಿ ಬಯಲು ಶೌಚಾಲಯಕ್ಕೆಂದು ಮನೆಯಿಂದ ಹೊರಹೋಗಿದ್ದ ಯುವತಿಯೊಬ್ಬಳು ನಾಪತ್ತೆಯಾಗಿದ್ದು, ಇಂದು ಬೆಳಗ್ಗೆ ಜಮೀನಿನಲ್ಲಿದ್ದ ಬಾವಿಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ.
ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಕ್ರಾಣಿ ಗ್ರಾಮದಲ್ಲಿ ಘಟನೆ ನಡೆಸಿದ್ದು, ಮೃತ ಯುವತಿಯನ್ನು ಅಶ್ವಿನಿ (22) ಎಂದು ಗುರುತಿಸಲಾಗಿದೆ. ರಾತ್ರಿ ಬಯಲು ಶೌಚಕ್ಕೆ ತೆರಳಿದ್ದ ವೇಳೆ ನಾಪತ್ತೆಯಾಗಿದ್ದ ಅಶ್ವಿನಿಗಾಗಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ಗ್ರಾಮದ ರೈತರೊಬ್ಬರು ಜಮೀನಿಗೆ ತೆರಳಿದಾಗ ಬಾವಿಯಲ್ಲಿ ಮೃತದೇಹ ಕಂಡುಬಂದಿದೆ. ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಸಿರವಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯುವತಿಯ ಸಾವಿನ ಕುರಿತು ಹಲವು ಅನುಮಾನಗಳನ್ನು ಕಂಡುಬಂದಿವೆ. ಅತ್ಯಾಚಾರವೆಸಗಿ ಕೊಲೆ ಮಾಡಿ ಮೃತದೇಹವನ್ನು ಬಾವಿಗೆ ಎಸೆದಿದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ ಸಾವಿನ ನಿಖರ ಕಾರಣ ಪೊಲೀಸ್ ತನಿಖೆ ಹಾಗೂ ಮರಣೋತ್ತರ ಪರೀಕ್ಷೆಯ ಬಳಿಕವೇ ತಿಳಿದುಬರಬೇಕಿದೆ.
ಮೃತ ಅಶ್ವಿನಿಗೆ ಕೇವಲ ಒಂದು ತಿಂಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು ಎಂದು ತಿಳಿದುಬಂದಿದೆ.


