ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ನಕಲಿ ಔಷಧ ಜಾಲದ ವಿರುದ್ಧ ಆರೋಗ್ಯ ಇಲಾಖೆ ಸಮರ ಸಾರಿದೆ. ರಾಜ್ಯದಲ್ಲಿ ನಕಲಿ ಔಷಧಗಳ ತಯಾರಿಕೆ, ಸಂಗ್ರಹಣೆ, ಮಾರಾಟ ಹಾಗೂ ಪೂರೈಕೆ ಕುರಿತು ನಿಖರ ಮಾಹಿತಿ ನೀಡುವ ಸಾರ್ವಜನಿಕರಿಗೆ 10 ಸಾವಿರದಿಂದ 50 ಸಾವಿರ ರೂಪಾಯಿಗಳವರೆಗೆ ನಗದು ಬಹುಮಾನ ನೀಡುವುದಾಗಿ ಆರೋಗ್ಯ ಇಲಾಖೆ ಅಧಿಕೃತವಾಗಿ ಘೋಷಿಸಿದೆ.
ನಕಲಿ ಔಷಧಗಳ ಜಾಲವನ್ನು ತಳಮಟ್ಟದಿಂದಲೇ ಕಿತ್ತು ಹಾಕಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ. ಸಾರ್ವಜನಿಕರು ತಮ್ಮ ಸುತ್ತಮುತ್ತ ಅನುಮಾನಾಸ್ಪದ ರೀತಿಯಲ್ಲಿ ನಡೆಯುತ್ತಿರುವ ಔಷಧ ತಯಾರಿಕೆ, ನಕಲಿ ಮೆಡಿಕಲ್ ಸ್ಟೋರ್‌ಗಳು ಅಥವಾ ಯಾವುದೇ ರೀತಿಯ ಔಷಧ ದಂಧೆಯ ಬಗ್ಗೆ ಮಾಹಿತಿ ಇದ್ದರೆ ತಕ್ಷಣವೇ ರಾಜ್ಯ ಔಷಧ ನಿಯಂತ್ರಣ ಮಂಡಳಿಯ ಸಹಾಯವಾಣಿ ಅಥವಾ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ದೂರು ನೀಡಬಹುದಾಗಿದೆ.
ಸಾರ್ವಜನಿಕರಿಂದ ಲಭ್ಯವಾಗುವ ಸುಳಿವು ಆಧರಿಸಿ ಔಷಧ ನಿಯಂತ್ರಣ ಅಧಿಕಾರಿಗಳು ತಕ್ಷಣ ಕ್ಷಿಪ್ರ ಪರಿಶೀಲನೆ ಹಾಗೂ ದಾಳಿ ನಡೆಸಲಿದ್ದಾರೆ. ತನಿಖೆಯಲ್ಲಿ ನಕಲಿ ಔಷಧ ತಯಾರಿಕೆ ಅಥವಾ ಮಾರಾಟ ಸಾಬೀತಾದರೆ ಸಂಬಂಧಪಟ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ನಕಲಿ ಔಷಧ ಜಾಲದ ಕುರಿತು ಸುಳಿವು ನೀಡುವ ಸಾರ್ವಜನಿಕರ ವಿವರ ಹಾಗೂ ಮಾಹಿತಿಯನ್ನು ಸಂಪೂರ್ಣ ಗೌಪ್ಯವಾಗಿಡಲಾಗುವುದು. ಹೀಗಾಗಿ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಧೈರ್ಯವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ ಬಿಡದಿಯಲ್ಲಿ ಪತ್ತೆಯಾದ ನಕಲಿ ಔಷಧ ತಯಾರಿಕಾ ದಂಧೆಯ ತನಿಖೆ ವೇಳೆ ಈ ಜಾಲವು ಮಹಾರಾಷ್ಟ್ರ, ಮುಂಬೈ, ಹಿಮಾಚಲ ಪ್ರದೇಶ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಹರಡಿರುವ ಅಂತರರಾಜ್ಯ ದಂಧೆ ಎಂಬುದು ಬೆಳಕಿಗೆ ಬಂದಿದೆ. ವಿಶೇಷವಾಗಿ ಕ್ಯಾನ್ಸರ್, ಹೃದಯಸಂಬಂಧಿ ಕಾಯಿಲೆ ಹಾಗೂ ದುಬಾರಿ ಬೆಲೆಯ ಜೀವರಕ್ಷಕ ಔಷಧಗಳನ್ನೇ ಗುರಿಯಾಗಿಸಿಕೊಂಡು ಈ ನಕಲಿ ಜಾಲ ಸಕ್ರಿಯವಾಗಿತ್ತು.
ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ವಿವಿಧ ರಾಜ್ಯಗಳ ಡ್ರಗ್ ಕಂಟ್ರೋಲರ್ ಮತ್ತು ರಾಜ್ಯ ಪರವಾನಗಿ ಸಮಿತಿಗಳು ಈಗಾಗಲೇ ಅಲರ್ಟ್ ಆಗಿದ್ದು, ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುವ ಈ ಜಾಲವನ್ನು ಸಂಪೂರ್ಣವಾಗಿ ಮಟ್ಟಹಾಕಲು ಎಲ್ಲರೂ ಜಾಗೃತರಾಗಿರಬೇಕು ಹಾಗೂ ಅನುಮಾನಾಸ್ಪದ ಔಷಧಗಳು ಕಂಡುಬಂದರೆ ತಕ್ಷಣ ವರದಿ ಮಾಡಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.


