ಬೆಂಗಳೂರು: ರಾಜ್ಯಾದ್ಯಂತ ವಿವಿಧ ವಲಯಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಹೊರಗುತ್ತಿಗೆ, ದಿನಗೂಲಿ ಹಾಗೂ ತಾತ್ಕಾಲಿಕ ಕಾರ್ಮಿಕರ ಶೋಷಣೆ ತಡೆಗಟ್ಟಿ, ಅವರಿಗೆ ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಸಿಟಿಯು) ನೇತೃತ್ವದಲ್ಲಿ ಗುರುವಾರ (ಆಗಸ್ಟ್ 20) ಬೆಂಗಳೂರಿನಲ್ಲಿ ಬೃಹತ್ ರಾಜ್ಯಮಟ್ಟದ ಪ್ರತಿಭಟನೆ ನಡೆಯಿತು. ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದು, ನೇರ ವೇತನ ಪಾವತಿ ಪದ್ಧತಿ ತರುವುದು ಹಾಗೂ ಪರಿಷ್ಕೃತ ಕನಿಷ್ಠ ವೇತನವನ್ನು ಜಾರಿಗೆ ತರಬೇಕು ಎಂಬುದು ಈ ಹೋರಾಟದ ಪ್ರಮುಖ ಉದ್ದೇಶವಾಗಿತ್ತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ’ರೋಜಾರಿಯೊ ಅವರು, ರಾಜ್ಯದ ಕಾರ್ಖಾನೆಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಸಂಬಂಧಿಸಿದ ನಿರಂತರ ಹಾಗೂ ಮೂಲಭೂತ ಸ್ವರೂಪದ ಕೆಲಸಗಳನ್ನು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲೇ ನಿರ್ವಹಿಸಲಾಗುತ್ತಿದೆ. ಅನೇಕ ಕಾರ್ಮಿಕರು ಒಂದೇ ಸಂಸ್ಥೆಯಲ್ಲಿ 10, 20, 25 ಹಾಗೂ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಅವರಿಗೆ ಖಾಯಂ ಉದ್ಯೋಗ, ಉದ್ಯೋಗ ಭದ್ರತೆ ಹಾಗೂ ಸೂಕ್ತ ಸಾಮಾಜಿಕ ಭದ್ರತೆ ಸಿಗುತ್ತಿಲ್ಲ. ನಿಯಮಿತ ನೌಕರರಷ್ಟೇ ಕೆಲಸ ಮಾಡುವ ಈ ಕಾರ್ಮಿಕರಿಗೆ ಸಮಾನ ವೇತನ ಹಾಗೂ ಕಾನೂನುಬದ್ಧ ಸೌಲಭ್ಯಗಳನ್ನು ನಿರಾಕರಿಸುವ ಈ ಶೋಷಣಾತ್ಮಕ ವ್ಯವಸ್ಥೆ ಕೂಡಲೇ ಕೊನೆಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾತನಾಡಿದ ಎಐಸಿಸಿಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೈತ್ರಿ ಕೃಷ್ಣನ್ ಅವರು, 2026ರ ಮೇ 22ರಂದು ಸರ್ಕಾರ ಅಧಿಸೂಚಿಸಿರುವ ಪರಿಷ್ಕೃತ ಕನಿಷ್ಠ ವೇತನ ಜಾರಿಯನ್ನು ಯಾವುದೇ ಕಾರಣಕ್ಕೂ ತಡೆಹಿಡಿಯಬಾರದು ಅಥವಾ ವಿಳಂಬಗೊಳಿಸಬಾರದು ಎಂದರು. ಅಧಿಸೂಚಿತ ವೇತನಕ್ಕಿಂತ ಕಡಿಮೆ ನೀಡುವ ಉದ್ಯೋಗದಾತರ ವಿರುದ್ಧ ಕಾರ್ಮಿಕ ಇಲಾಖೆ ತಕ್ಷಣ ತಪಾಸಣೆ ನಡೆಸಿ, ಬಾಕಿ ವೇತನ ವಸೂಲಿ ಮಾಡಿಸಬೇಕು. ನಿಯಮ ಉಲ್ಲಂಘಿಸುವ ಉದ್ಯೋಗದಾತರ ವಿರುದ್ಧ ದೋಷಾರೋಪಣೆ ಸೇರಿದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ನಿರಂತರವಾಗಿ ಏರುತ್ತಿರುವ ಜೀವನ ವೆಚ್ಚಕ್ಕೆ ಅನುಗುಣವಾಗಿ ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ 42,000 ರೂಪಾಯಿಗೆ ಪರಿಷ್ಕರಿಸಬೇಕು ಎಂದು ಪಟ್ಟುಹಿಡಿದರು.
ಇಎಸ್‌ಐ ವೇತನ ಮಿತಿ ಪರಿಷ್ಕರಣೆಯ ಮಹತ್ವವನ್ನು ಒತ್ತಿಹೇಳಿದ ಒಕ್ಕೂಟವು, 2016ರಲ್ಲಿ 15,000 ರೂಪಾಯಿಯಿಂದ 21,000 ರೂಪಾಯಿಗೆ ಹೆಚ್ಚಿಸಲಾಗಿದ್ದ ಈ ಮಿತಿಯನ್ನು ಹಲವು ವರ್ಷಗಳಿಂದ ಪರಿಷ್ಕರಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿತು. ಪ್ರಸ್ತುತ ಕೆಲವು ಅನುಸೂಚಿತ ಉದ್ಯೋಗಗಳಲ್ಲಿ ಕಾನೂನುಬದ್ಧ ಕನಿಷ್ಠ ವೇತನವೇ 21,000 ರೂಪಾಯಿಗಿಂತ ಹೆಚ್ಚಿರುವುದರಿಂದ ಕಾರ್ಮಿಕರು ಇಎಸ್‌ಐ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ, ಕರ್ನಾಟಕ ಹೈಕೋರ್ಟ್‌ನ W.P. No.18258 of 2026 (L-ESI) ಪ್ರಕರಣದಲ್ಲಿ 2026ರ ಆಗಸ್ಟ್ 4ರಂದು ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಪ್ರಸ್ತುತ ವೇತನ ಹಾಗೂ ಜೀವನ ವೆಚ್ಚಕ್ಕೆ ತಕ್ಕಂತೆ ಇಎಸ್‌ಐ ಮಿತಿ ಹೆಚ್ಚಿಸಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ತಕ್ಷಣ ಪತ್ರ ಬರೆದು ಒತ್ತಡ ಹೇರಬೇಕು ಎಂದು ಆಗ್ರಹಿಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಾಘು ಹಾಗೂ ಕಾರ್ಮಿಕ ಆಯುಕ್ತರಾದ ರಾಗಪ್ರಿಯ ಅವರು ಸರ್ಕಾರದ ಪರವಾಗಿ ಮನವಿ ಸ್ವೀಕರಿಸಿದರು. ಈ ವೇಳೆ ನೌಕರರು ಎದುರಿಸುತ್ತಿರುವ ಕನಿಷ್ಠ ವೇತನ, ನೇರ ವೇತನ ಪಾವತಿ, ಉದ್ಯೋಗ ಭದ್ರತೆ, ಇಎಸ್‌ಐ ಹಾಗೂ ಸಾಮಾಜಿಕ ಭದ್ರತೆಯಂತಹ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲಾಯಿತು. ಮನವಿಯನ್ನು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾರ್ಮಿಕ ಸಚಿವರ ಗಮನಕ್ಕೆ ತಂದು, ಕಾಲಮಿತಿಯೊಳಗೆ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಹೋರಾಟದಲ್ಲಿ ಮೂಲಭೂತ ಹಾಗೂ ನಿರಂತರ ಕೆಲಸಗಳಲ್ಲಿ ಗುತ್ತಿಗೆ/ಹೊರಗುತ್ತಿಗೆ/ದಿನಗೂಲಿ ಪದ್ಧತಿ ರದ್ದುಪಡಿಸಿ ದೀರ್ಘಕಾಲದ ನೌಕರರನ್ನು ಖಾಯಂಗೊಳಿಸುವುದು, ನೇರ ವೇತನ ಪಾವತಿ ಜಾರಿಗೊಳಿಸುವುದು, 22.05.2026ರ ಕನಿಷ್ಠ ವೇತನ ಅಧಿಸೂಚನೆ ಜಾರಿ, ಕಡಿಮೆ ವೇತನ ನೀಡುವವರ ವಿರುದ್ಧ ಕ್ರಮ, ಇಎಸ್‌ಐ ಸೌಲಭ್ಯ ವಿಸ್ತರಣೆ, ಉದ್ಯೋಗಕ್ಕೆ ಸೇರಿದ ಮೊದಲ ದಿನದಿಂದಲೇ ಭದ್ರತೆ, ಆರೋಗ್ಯ, ಹೆರಿಗೆ, ಪಿಂಚಣಿ ಸೇರಿ ಸಮಗ್ರ ಸಾಮಾಜಿಕ ಭದ್ರತೆ, ಮಹಿಳಾ ಕಾರ್ಮಿಕರಿಗೆ ಸುರಕ್ಷಿತ ಹಾಗೂ ಕಿರುಕುಳಮುಕ್ತ ವಾತಾವರಣ, ಕಾರ್ಮಿಕರ ಸಂಘಟನೆ ಮತ್ತು ಹೋರಾಟದ ಹಕ್ಕುಗಳ ರಕ್ಷಣೆ ಹಾಗೂ ಕನಿಷ್ಠ ವೇತನವನ್ನು 42,000 ರೂಪಾಯಿಗೆ ಹೆಚ್ಚಿಸುವ ಪ್ರಮುಖ 10 ಬೇಡಿಕೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಅಪ್ಪಣ್ಣ (ರಾಜ್ಯಾಧ್ಯಕ್ಷರು), ನಿರ್ಮಲಾ, ನಾಗರಾಜ ಪೂಜಾರ್, ಮೋಹನ್, ರಾಮಣ್ಣ ವಿಟ್ಲ ಮಾತನಾಡಿದರು. ಪ್ರತಿಭಟನೆಯಲ್ಲಿ ಕೆ. ನಾಗಲಿಂಗಸ್ವಾಮಿ, ಅಜೀಜ್ ಜಾಗೀದಾರ್, ಕೇಶವ ನಾಯಕ್, ಅಶೋಕಗೌಡ, ಮಾಯಮ್ಮ, ಪರಶುರಾಮ, ಉಮಾ, ಭಾನುಪ್ರಕಾಶ್, ಬಸವರಾಜ ಎಂ., ಗೌರಿ, ಚಂದ್ರಶೇಖರ್ ಶಿರುಗುಪ್ಪಿ ಸೇರಿದಂತೆ ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಮಿಕರು ಭಾಗವಹಿಸಿದ್ದರು. ಕಾರ್ಮಿಕರ ಈ ನ್ಯಾಯಯುತ ಬೇಡಿಕೆಗಳಿಗೆ ಸರ್ಕಾರ ಕಾಲಮಿತಿಯೊಳಗೆ ಸ್ಪಂದಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಐಸಿಸಿಟಿಯು ಎಚ್ಚರಿಕೆ ನೀಡಿದೆ.


