ಆರ್‌ಎಸ್‌ಎಸ್ (RSS) ಸಂಘಟನೆಯ ವಿರುದ್ಧ ನಿರ್ಬಂಧಗಳನ್ನು ವಿಧಿಸುವಂತೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಕುರಿತ ಸಲಹಾ ಮಂಡಳಿಯ (USCIRF) ಅಧಿಕಾರಿಗಳು ಅಮೆರಿಕ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಶೀಘ್ರದಲ್ಲೇ ಅಮೆರಿಕಕ್ಕೆ ಭೇಟಿ ನೀಡಲಿರುವ RSS ಸರಸಂಘಚಾಲಕ ಮೋಹನ್ ಭಾಗವತ್ ಸೇರಿದಂತೆ ಸಂಘದ ನಾಯಕರಿಗೆ ಯಾವುದೇ ರೀತಿಯ ರಾಜತಾಂತ್ರಿಕ ಮರ್ಯಾದೆಗಳನ್ನು ನೀಡಬಾರದು ಮತ್ತು ಅವರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಬಾರದು ಎಂದು ವರದಿಯಾಗಿದೆ. ‘ಅಮೆರಿಕನ್ ಹಿಂದೂಸ್ ಫಾರ್ ಎಂಗೇಜ್ಮೆಂಟ್ ಆ್ಯಂಡ್ ಡೈಲಾಗ್’ ಆಯೋಜಿಸಿರುವ ‘ವಿಶ್ವ ಏಕತಾ ಉತ್ಸವ’ದಲ್ಲಿ ಭಾಗವಹಿಸಲು ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು RSSನ ಸದಸ್ಯರಾಗಿದ್ದಾರೆ ಹಾಗೂ ಸಂಘ ಪರಿವಾರದ ಗುಂಪುಗಳು ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಿವೆ ಎಂದು ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕುರಿತ ಅಮೆರಿಕ ಆಯೋಗದ (USCIRF) ಅಧ್ಯಕ್ಷ ಆಸಿಫ್ ಮಹಮೂದ್ ಆರೋಪಿಸಿದ್ದಾರೆ.
RSS ನಾಯಕರು ಭಾರತ ಸರ್ಕಾರದೊಂದಿಗೆ ನಿಕಟವಾಗಿ ಗುರುತಿಸಿಕೊಂಡಿದ್ದರೂ, ಅವರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸಬಾರದು ಅಥವಾ ರಾಜತಾಂತ್ರಿಕ ಗೌರವಗಳನ್ನು ನೀಡಬಾರದು, ಬದಲಿಗೆ ಧಾರ್ಮಿಕ ಸ್ವಾತಂತ್ರ್ಯ ಉಲ್ಲಂಘನೆಗೆ ಕಾರಣರಾದ ಸಂಘದ ಸದಸ್ಯರ ಮೇಲೆ ನಿರ್ಬಂಧ ವಿಧಿಸುವತ್ತ ಅಮೆರಿಕ ಸರ್ಕಾರ ಗಮನ ಹರಿಸಬೇಕು ಎಂದು ಆಯೋಗದ ಕಮಿಷನರ್ ಜೀನ್ ಮಿಲ್ಸ್ ತಿಳಿಸಿದ್ದಾರೆ. ಈ ಕುರಿತು ಆಯೋಗವು ತನ್ನ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿಯೂ ಪೋಸ್ಟ್ ಹಂಚಿಕೊಂಡಿದೆ.
ಇನ್ನೊಂದೆಡೆ, ‘ಹಿಂದೂಸ್ ಫಾರ್ ಹ್ಯೂಮನ್ ರೈಟ್ಸ್’ ಸಂಘಟನೆಯು ಸಹ ಮೋಹನ್ ಭಾಗವತ್ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಿದ್ದು, ಅವರ ಪ್ರವಾಸವನ್ನು ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧದ ಹಿಂಸಾಚಾರದಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ, ಏಕತೆಯ ಹೆಸರಿನ ಆಚರಣೆಯು ಧಾರ್ಮಿಕ ಪ್ರಾಬಲ್ಯದ ರಾಜಕೀಯವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ ಎಂದು ಹೇಳಿದೆ.
ಈ ಹಿಂದೆ ಬಿಡುಗಡೆಯಾಗಿದ್ದ ಯುಎಸ್‌ಸಿಐಆರ್‌ಎಫ್ ವಾರ್ಷಿಕ ವರದಿಯಲ್ಲೂ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗಾಗಿ ಭಾರತವನ್ನು ಟೀಕಿಸಲಾಗಿತ್ತು ಹಾಗೂ RSS ಮತ್ತು ‘ರಾ’ (R&AW) ನಂತಹ ಸಂಸ್ಥೆಗಳ ವಿರುದ್ಧ ನಿರ್ಬಂಧಗಳಿಗೆ ಬೆಂಬಲ ವ್ಯಕ್ತಪಡಿಸಲಾಗಿತ್ತು. ಆದರೆ, ಈ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದ ಭಾರತ ಸರ್ಕಾರವು, ಅಮೆರಿಕವು ಭಾರತವನ್ನು ಆಯ್ದು ಟೀಕಿಸುವುದನ್ನು ಬಿಟ್ಟು ತನ್ನದೇ ದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ನಡೆಯುತ್ತಿರುವ ದಾಳಿಗಳು ಹಾಗೂ ಭಾರತೀಯ ಸಮುದಾಯಕ್ಕೆ ಎದುರಾಗಿರುವ ಬೆದರಿಕೆಗಳ ಕುರಿತು ಗಮನ ಹರಿಸಲಿ ಎಂದು ಹೇಳಿತ್ತು.


