ಮಹಾರಾಷ್ಟ್ರದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಪರಿಶಿಷ್ಟ ಪಂಗಡದ (ಎಸ್‌ಟಿ) ಅಭ್ಯರ್ಥಿಗಳಿಗೆ ಆದ್ಯತೆ ಹಾಗೂ ವಸತಿ ಶಾಲೆಗಳ ಮೂಲಸೌಕರ್ಯ ಸುಧಾರಣೆಗೆ ಆಗ್ರಹಿಸಿ ಕಳೆದ 16 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬುಡಕಟ್ಟು ವಿದ್ಯಾರ್ಥಿಗಳ ಸುದೀರ್ಘ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರವು ವಿದ್ಯಾರ್ಥಿಗಳ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಕೊಂಡಿದ್ದು, ಮುಷ್ಕರ ಅಂತ್ಯಗೊಳ್ಳಲಿದೆ ಎಂದು ಬುಡಕಟ್ಟು ಅಭಿವೃದ್ಧಿ ಸಚಿವ ಅಶೋಕ್ ಉಯ್ಕೆ ಶನಿವಾರ (ಆ.29) ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಗಡ್ಚಿರೋಲಿ ಜಿಲ್ಲೆಯ ವಸತಿ ಶಾಲೆಯೊಂದರಲ್ಲಿ ಇತ್ತೀಚೆಗೆ ಮೂವರು ಬುಡಕಟ್ಟು ವಿದ್ಯಾರ್ಥಿನಿಯರು ಹಾವು ಕಚ್ಚಿ ಮೃತಪಟ್ಟ ಘಟನೆಯ ಬಳಿಕ ಈ ಆಕ್ರೋಶ ಭುಗಿಲೆದ್ದಿತ್ತು. ಪುಣೆ, ನಾಗ್ಪುರ ಮತ್ತು ನಾಸಿಕ್ ನಗರಗಳಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು, ಹಾಸ್ಟೆಲ್‌ಗಳಲ್ಲಿ ಮೂಲಭೂತ ಸುರಕ್ಷತೆ, ವಿಮೆ, ಬೆಲೆ ಏರಿಕೆಗೆ ತಕ್ಕಂತೆ ಭತ್ಯೆ ಪರಿಷ್ಕರಣೆ, ನಿರ್ಬಂಧಿತ ನಿಯಮಗಳ ವಾಪಸಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳ ನೇಮಕಾತಿಗಾಗಿ ಆಗ್ರಹಿಸಿ ನಿರಂತರವಾಗಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದರು.
ವಿದ್ಯಾರ್ಥಿಗಳ ಪ್ರಮುಖ ಬೇಡಿಕೆಯಾಗಿದ್ದ 12,500 ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ, ಮುಂದಿನ ಮೂರು ತಿಂಗಳಲ್ಲಿ ಖಾಲಿ ಹುದ್ದೆಗಳನ್ನು ಗುರುತಿಸಿ ಕಾಲಮಿತಿಯೊಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ಒಪ್ಪಿದೆ. ಜೊತೆಗೆ, ನಕಲಿ ದಾಖಲೆಗಳ ಹಾವಳಿ ತಡೆಯಲು, ಜಾತಿ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸದೆ 2018 ರಿಂದ 2020ರ ಅವಧಿಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡವರ ವಿರುದ್ಧ ಭಾನುವಾರದಿಂದಲೇ ವಜಾದಂತಹ ಕಠಿಣ ಕಾನೂನು ಕ್ರಮ ಜರುಗಿಸಲು ನಿರ್ಧರಿಸಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಶೈಕ್ಷಣಿಕ ಮತ್ತು ಸಾಂಸ್ಥಿಕ ಸುಧಾರಣೆಗಳಿಗೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳ ಬೇಡಿಕೆಯಂತೆ ನೇರ ನಗದು ವರ್ಗಾವಣೆ (ಡಿಬಿಟಿ) ಯೋಜನೆಯನ್ನು ಶನಿವಾರವೇ ರದ್ದುಗೊಳಿಸಲಾಗಿದೆ. ಹಾಸ್ಟೆಲ್‌ಗಳಲ್ಲಿನ ಕೇಂದ್ರೀಕೃತ ಅಡುಗೆಮನೆ (ಸೆಂಟ್ರಲ್ ಕಿಚನ್) ವ್ಯವಸ್ಥೆ ಪರಿಶೀಲಿಸಲು ತಜ್ಞರ ಸಮಿತಿ ರಚಿಸಲಾಗಿದ್ದು, 15 ದಿನಗಳೊಳಗೆ ವರದಿ ಬಂದ ಕೂಡಲೇ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಜೊತೆಗೆ, ಅನುದಾನಿತ ಹಾಗೂ ಸರ್ಕಾರಿ ವಸತಿ ಶಾಲೆಗಳ ನೈಜ ಲೋಪಗಳನ್ನು ಪತ್ತೆಹಚ್ಚಲು ಮೂರನೇ ವ್ಯಕ್ತಿಯಿಂದ ಲೆಕ್ಕಪರಿಶೋಧನೆ ನಡೆಸಲು ಆದೇಶಿಸಲಾಗಿದೆ.
ವಿದ್ಯಾರ್ಥಿಗಳ ಈ ಪ್ರತಿಭಟನೆಯ ವಿಚಾರದಲ್ಲಿ ಬಾಂಬೆ ಹೈಕೋರ್ಟ್‌ನ ಮಧ್ಯಪ್ರವೇಶವು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿತು. ಶನಿವಾರ ಬೆಳಿಗ್ಗೆ ಪ್ರಕರಣದ ವಿಚಾರಣೆ ನಡೆಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರವೀಂದ್ರ ಘುಗೆ ಹಾಗೂ ನ್ಯಾ. ಗೌತಮ್ ಅನ್ಖಾದ್ ಅವರಿದ್ದ ವಿಭಾಗೀಯ ಪೀಠವು, ‘ಉಪವಾಸ ನಿರತ ಯುವ ವಿದ್ಯಾರ್ಥಿಗಳ ಆರೋಗ್ಯ ಕಾಪಾಡುವುದು ಸರ್ಕಾರದ ಜವಾಬ್ದಾರಿ, ಯಾವುದೇ ಯುವಜೀವ ಬಲಿಯಾಗುವುದು ನಮಗೆ ಇಷ್ಟವಿಲ್ಲ’ ಎಂದು ಸರ್ಕಾರಕ್ಕೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿತ್ತು.
ಮುಖ್ಯಮಂತ್ರಿಯ ಜೊತೆಗಿನ ಸಭೆಯ ಬಳಿಕ, ಸರ್ಕಾರದ ಸ್ಪಷ್ಟ ಮತ್ತು ಲಿಖಿತ ಭರವಸೆಗಳಿಂದ ತೃಪ್ತರಾಗಿರುವ ವಿದ್ಯಾರ್ಥಿಗಳು ತಮ್ಮ ಮುಷ್ಕರ ಕೈಬಿಡಲು ಒಪ್ಪಿದ್ದಾರೆ. ತಮ್ಮ ಈ 16 ದಿನಗಳ ಸುದೀರ್ಘ ಹೋರಾಟಕ್ಕೆ ವೇದಿಕೆ ಒದಗಿಸಿ, ರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಲು ಬೆಂಬಲವಾಗಿ ನಿಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ರೋಹಿತ್ ಪವಾರ್, ಯಶೋಮತಿ ಠಾಕೂರ್ ಹಾಗೂ ಎನ್‌ಎಸ್‌ಯುಐ ಸಂಘಟನೆಗೆ ವಿದ್ಯಾರ್ಥಿ ಪ್ರತಿನಿಧಿಗಳು ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ.


