ಮಹಿಳೆಯರು ಮನೆಯಲ್ಲೇ ಇರಬೇಕು ಮತ್ತು ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶಿಸಬಾರದು ಎಂದು ಕೇರಳದ ಪ್ರಭಾವಿ ಮುಸ್ಲಿಂ ಧರ್ಮಗುರು ಶೇಖ್ ಅಬೂಬಕರ್ ಅಹ್ಮದ್ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.
ಕೊಚ್ಚಿಯಲ್ಲಿ ನಡೆದ ‘ಹುಬ್ಬುಲ್ ರಸೂಲ್’ ಸಮ್ಮೇಳನದಲ್ಲಿ ಮಾತನಾಡಿದ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಎಂದೇ ಪರಿಚಿತರಾಗಿರುವ ಅವರು, ಮಹಿಳೆಯರ ಗೌರವ ಮತ್ತು ಭದ್ರತೆಯನ್ನು ಕಾಪಾಡುವ ಉದ್ದೇಶದಿಂದಲೇ ಇಸ್ಲಾಂ ಧರ್ಮದಲ್ಲಿ ಪರ್ದಾ ಪದ್ಧತಿಯನ್ನು ಸೂಚಿಸಲಾಗಿದೆ ಎಂದು ವಾದಿಸಿದ್ದಾರೆ. “ಮಹಿಳೆಯರು ತಮ್ಮ ಮನೆಗಳಲ್ಲೇ ಇರಬೇಕು, ಅವರು ಸಾರ್ವಜನಿಕ ಕ್ಷೇತ್ರಕ್ಕೆ ಬರಬಾರದು. ಪವಿತ್ರ ಕುರಾನ್ ಕೂಡ ಇದನ್ನೇ ಹೇಳುತ್ತದೆ,” ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
‘ಮಹಿಳೆಯರು ಚಿನ್ನದ ಆಭರಣದಂತೆ’: ಆಕ್ಷೇಪಾರ್ಹ ಹೋಲಿಕೆ
ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಕಾಂತಪುರಂ ಅವರು ಮಹಿಳೆಯರನ್ನು ಚಿನ್ನದ ಹಾರಕ್ಕೆ ಹೋಲಿಸಿ ಮಾತನಾಡಿದ್ದಾರೆ. ಒಬ್ಬ ವ್ಯಕ್ತಿ ಆಭರಣದ ಅಂಗಡಿಯಿಂದ ಚಿನ್ನದ ಹಾರ ಖರೀದಿಸಿದಾಗ, ಅದನ್ನು ಅತ್ಯಂತ ಜಾಗರೂಕತೆಯಿಂದ ಪೆಟ್ಟಿಗೆಯಲ್ಲಿಟ್ಟು ಬೀರುವಿನೊಳಗೆ ಇರಿಸಲಾಗುತ್ತದೆ. ಆದರೆ ರಸ್ತೆ ಬದಿಯಲ್ಲಿ ಮಾರಾಟಕ್ಕಿಡುವ ಕಲ್ಲಿನ ಒರಳು ಅಥವಾ ಗ್ರೈಂಡರ್‌ಗಳನ್ನು ಜನ ತುಳಿಯಬಹುದು ಅಥವಾ ಮುಟ್ಟಬಹುದು. ಅದೇ ರೀತಿ ಚಿನ್ನದ ಹಾರ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬೇಕಾದರೆ ಅದನ್ನು ಪೆಟ್ಟಿಗೆಯೊಳಗೇ ಸುರಕ್ಷಿತವಾಗಿಡಬೇಕು. ಮಹಿಳೆಯರನ್ನು ಈ ರೀತಿಯಾಗಿ ಸಾರ್ವಜನಿಕ ಕ್ಷೇತ್ರಕ್ಕೆ ಕರೆತಂದರೆ ಅದು ದೊಡ್ಡ ವಿನಾಶಕ್ಕೆ ಕಾರಣವಾಗುತ್ತದೆ, ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಸಮಸ್ತ ಕೇರಳ ಜಮಿಯ್ಯತುಲ್ ಉಲಮಾ ಕಳೆದ 100 ವರ್ಷಗಳಿಂದ ಇದೇ ತತ್ವವನ್ನು ಬೋಧಿಸುತ್ತಾ ಬಂದಿದ್ದು, ಇದರಿಂದ ಮಹಿಳೆಯರು ತಮ್ಮ ಗೌರವವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
‘ಧರ್ಮದ ಬಗ್ಗೆ ಮಾತನಾಡುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’
ಇದೇ ವೇಳೆ ಇಸ್ಲಾಂ ಐತಿಹಾಸಿಕವಾಗಿ ಮಹಿಳೆಯರ ಸ್ಥಾನಮಾನವನ್ನು ಎತ್ತಿಹಿಡಿದಿದೆ ಎಂದಿರುವ ಕಾಂತಪುರಂ, ಇಸ್ಲಾಂ ಪೂರ್ವದ ಅರೇಬಿಯಾದಲ್ಲಿ ಹೆಣ್ಣು ಮಕ್ಕಳ ಹತ್ಯೆಯಂತಹ ಕ್ರೂರ ಪದ್ಧತಿ ಇತ್ತು. ಇಸ್ಲಾಂ ಅದನ್ನು ನಿಷೇಧಿಸಿತು ಹಾಗೂ ಮಹಿಳೆಯರಿಗೆ ಆಸ್ತಿ ಹಕ್ಕು ಮತ್ತು ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲನ್ನು ನೀಡಿತು, ಎಂದು ಹೇಳಿದ್ದಾರೆ.
ತಮ್ಮ ಪ್ರಚೋದನಾತ್ಮಕ ಹೇಳಿಕೆಗಳನ್ನು ಪ್ರಶ್ನಿಸುವ ಸಂಘಟನೆಗಳ ವಿರುದ್ಧ ಹರಿಹಾಯ್ದ ಅವರು, ನಾವು ಧರ್ಮವನ್ನು ಕೂಲಂಕುಷವಾಗಿ ಅಧ್ಯಯನ ಮಾಡಿದ್ದೇವೆ. ಹೀಗಾಗಿ ಸಮುದಾಯಕ್ಕೆ ಧರ್ಮದ ಬಗ್ಗೆ ಮಾರ್ಗದರ್ಶನ ನೀಡುವುದು ನಮ್ಮ ಕರ್ತವ್ಯ. ನಾವು ಈ ಬಗ್ಗೆ ಮಾತನಾಡುತ್ತೇವೆ ಮತ್ತು ಮುಂದೆಯೂ ಮಾತನಾಡುತ್ತೇವೆ. ಯಾರಿಂದಲೂ ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಎಂದು ಸವಾಲು ಎಸೆದಿದ್ದಾರೆ.
ಮಹಿಳೆಯರನ್ನು ಮನೆಯಿಂದ ಹೊರಬರದಂತೆ ಕಟ್ಟಿಹಾಕುವ ಮತ್ತು ಆಭರಣದಂತಹ ವಸ್ತುಗಳಿಗೆ ಹೋಲಿಸುವ ಇಂತಹ ಹೇಳಿಕೆಗಳು ಲಿಂಗ ಸಮಾನತೆ ಮತ್ತು ಮಾನವ ಹಕ್ಕುಗಳ ವಿರುದ್ಧವಾಗಿವೆ ಎಂದು ಪ್ರಗತಿಪರ ಚಿಂತಕರು ಹಾಗೂ ಹಕ್ಕುಗಳ ಹೋರಾಟಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.


