ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ.
ಸಮುದಾಯ ಸಂಘಟನೆಯ ಧಾರವಾಡದ ಅಧ್ಯಕ್ಷ ಬಿ.ಐ ಇಳಿಗೇರ ಅವರು ಟೌನ್ ಪೊಲೀಸ್ ಠಾಣೆಗೆ ಸೋಮವಾರ (ಆ.31) ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಬಿಜೆಪಿ-ಸಂಘಪರಿವಾರದವರು ಎನ್ನಲಾದ ವ್ಯಕ್ತಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ಧ ಅತಿಥಿಗಳನ್ನು ಅಪಮಾನಿಸಲು ಮತ್ತು ಅವರ ಮೇಲೆ ಹಲ್ಲೆ ನಡೆಸಲು ಸಂಚು ರೂಪಿಸಿ, ಗುಂಪು ಕಟ್ಟಿಕೊಂಡು ಬಂದು ಗಲಾಟೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಾರ್ಯಕ್ರಮದ ಪ್ರಾರಂಭದಲ್ಲಿ ಅತಿಥಿಗಳ ಆಗಮನದ ಸಮಯಕ್ಕೆ ವಿದ್ಯಾವರ್ಧಕ ಸಂಘದ ಗೇಟ್ ಎದುರುಗಡೆ ಘೋಷಣೆ ಕೂಗುತ್ತಾ ಗಲಾಟೆ ಮಾಡುತ್ತಾ ಕಾರ್ಯಕ್ರಮ ನಡೆಯದಂತೆ ಮಾಡಲು ಪ್ರಯತ್ನಿಸಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ಧ ಸಾಹಿತಿಗಳು, ಬರಹಗಾರರು, ಕವಿಗಳು ಹಾಗೂ ಉಪನ್ಯಾಸಕರು ಬಿಜೆಪಿ ಮತ್ತು ಸಂಘಪರಿವಾರದ ದುಷ್ಟ ಕೂಟದ ಕೃತ್ಯವನ್ನು ಬಲವಾಗಿ ವಿರೋಧಿಸಿ ಅತಿಥಿಗಳನ್ನು ಕಾರ್ಯಕ್ರಮದ ಸಭಾಂಗಣದೊಳಗೆ ಕರೆದುಕೊಂಡು ಹೋದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮುಂದುವರಿದು, ಕಾರ್ಯಕ್ರಮ ಅತ್ಯಂತ ಸರಳವಾಗಿ ನಡೆದು ಕೊನೆಯಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ರವರ ಕುರಿತು ಒಬ್ಬ ವ್ಯಕ್ತಿ ಸಭಾಂಗಣದಲ್ಲಿ ವೇದಿಕೆ ಮುಂಭಾಗಕ್ಕೆ ಆಗಮಿಸಿ ಗಲಾಟೆ ಮಾಡುತ್ತಾ ಕಾರ್ಯಕ್ರಮಕ್ಕೆ ತೊಂದರೆ ಮಾಡಲು ಬಂದಾಗ, ಅವರನ್ನು ಕೂಡ ಅತ್ಯಂತ ತಾಳ್ಮೆ ಮತ್ತು ಸಂಯಮದಿಂದ ಪೊಲೀಸರ ಸಹಕಾರದಿಂದ ಸಭಾಂಗಣದಿಂದ ಹೊರಗೆ ಕಳಿಸುವ ಪ್ರಯತ್ನ ಮಾಡಲಾಯಿತು ಎಂದು ಹೇಳಲಾಗಿದೆ.
ಕಾರ್ಯಕ್ರಮದ ಕೊನೆಯಲ್ಲಿ ಬಂದ ಅತಿಥಿಗಳು ಮರಳಿ ಸಭಾಂಗಣದಿಂದ ಹೊರಡಬೇಕು ಅನ್ನುವ ಸಂದರ್ಭದಲ್ಲಿ ಸಭಾಂಗಣದ ಹೊರಗಡೆ ಕರ್ನಾಟಕ ವಿದ್ಯಾವರ್ಧಕ ಸಂಘದ ಗೇಟ್ ಬಳಿ ಹಾಕಲಾದ ಪ್ರಕಾಶ್ ರಾಜ್ ಅವರ ಪೋಸ್ಟರ್ಗಳಿಗೆ ಎಬಿವಿಪಿ ಸದಸ್ಯರು ಎನ್ನಲಾದ ಕೆಲವರು ಮಸಿ ಬಳಿದು ಪೋಸ್ಟರ್, ಫ್ಲೆಕ್ಸ್ ಬ್ಯಾನರ್ಗಳನ್ನು ಹರಿದು ಹಾಕಿದರು. ಅಲ್ಲದೆ, ಪ್ರಕಾಶ್ ರಾಜ್ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಅವರ ಮೇಲೆ ಹಲ್ಲೆ ನಡೆಸುವ ಸಂಚು ರೂಪಿಸಿದ್ದರು. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಆರೋಪಿಗಳ ನಡೆಯನ್ನು ಖಂಡಿಸಿದರು ಮತ್ತು ಅವರನ್ನು ಬಂಧಿಸುವಂತೆ ಪೊಲೀಸರಿಗೆ ಒತ್ತಾಯಿಸಿದರು. ನಂತರ ಪೊಲೀಸರು ಅವರನ್ನು ತಮ್ಮ ವಾಹನದಲ್ಲಿ ಕರೆದೊಯ್ದರು ಎಂದು ವಿವರಿಸಲಾಗಿದೆ.
ದೂರು ನೀಡುವ ವೇಳೆ ಎದ್ದೇಳು ಕರ್ನಾಟಕ ಸಂಘಟನೆಯ ಡಾ ಇಸಬೆಲ್ ಝೇವಿಯರ್ ಸೇರಿದಂತೆ ಮುಖಂಡರು ಹಾಜರಿದ್ದರು.


