ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರು ಚುನಾವಣಾ ಆಯೋಗ ಮತ್ತು ಸರ್ಕಾರದ ವಿರುದ್ಧ ಕಟು ಶಬ್ದಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇದು ಲೂಟಿಕೋರರ ಆಯೋಗ’: ಯೂಸುಫ್ ಕನ್ನಿ ಆರೋಪ
ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಜಮಾತ್ ಎ ಇಸ್ಲಾಮಿ ಹಿಂದ್ (ಕರ್ನಾಟಕ) ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ ಅವರು ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, “ಇದು ಚುನಾವಣಾ ಆಯೋಗ ಅಲ್ಲ, ಇದು ಲೂಟಿಕೋರರ ಆಯೋಗ” ಎಂದು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳ ಕುರಿತು ಮಾತನಾಡಿದ ಅವರು, “ಕಳೆದ ಹಲವಾರು ತಿಂಗಳುಗಳಿಂದ ನಾವು ಎಸ್‌ಐಆರ್ ಕುರಿತು ರಾಜ್ಯಾದ್ಯಂತ ಜಾಗೃತಿ ಮೂಡಿಸುತ್ತಿದ್ದೇವೆ. ಪಟ್ಟಿಯಲ್ಲಿರುವ ಗಂಭೀರ ಲೋಪದೋಷಗಳ ಬಗ್ಗೆ ಚುನಾವಣಾ ಆಯೋಗದ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿ, ನೂರಾರು ಅರ್ಜಿಗಳನ್ನು ಸಲ್ಲಿಸಿದ್ದರೂ ಈವರೆಗೆ ನಮಗೆ ಒಂದೇ ಒಂದು ಅಧಿಕೃತ ಉತ್ತರವೂ ಬಂದಿಲ್ಲ,” ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಆಯೋಗದ ಅಂಕಿ-ಅಂಶಗಳನ್ನು ಪ್ರಶ್ನಿಸಿದ ಅವರು, “ಕರ್ನಾಟಕದಲ್ಲಿ 5.56 ಲಕ್ಷ ಮತದಾರರಿದ್ದಾರೆ ಎಂದು ಹೇಳಿರುವ ಆಯೋಗ, ಎಸ್‌ಐಆರ್ ಪ್ರಕ್ರಿಯೆಯ ಹೆಸರಿನಲ್ಲಿ 1.8 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕುತ್ತಿದ್ದೇವೆ ಎನ್ನುತ್ತಿದೆ. ಎಎಸ್‌ಡಿಒ (ಅಬ್ಸೆಂಟ್, ಶಿಫ್ಟೆಡ್, ಡೆಡ್, ಅದರ್ಸ್) ನೆಪದಲ್ಲಿ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ನಾಗರಿಕರು ಸ್ಥಳಾಂತರಗೊಳ್ಳಬಾರದೇ? ಗೈರಾಗಬಾರದೇ? ಈ ‘ಅದರ್ಸ್’ ಎನ್ನುವ ವರ್ಗದಲ್ಲಿ ಇರುವವರು ಯಾರು? ಎಂಬ ನೂರಾರು ಪ್ರಶ್ನೆಗಳನ್ನು ಕೇಳಿದರೂ ಆಯೋಗ ಮೌನಕ್ಕೆ ಶರಣಾಗಿದೆ. ಬಾಂಗ್ಲಾದೇಶದಿಂದ ನುಸುಳುಕೋರರು ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಅವರ ಬಳಿ ಈವರೆಗೆ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲ. ಬದಲಿಗೆ ದೇಶಾದ್ಯಂತ ಸುಮಾರು 8 ಕೋಟಿ ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಹೊರಹಾಕಲಾಗುತ್ತಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
“ಪಟ್ಟಿಯಿಂದ ಹೆಸರನ್ನು ಡಿಲೀಟ್ ಮಾಡಿ, ಮತ್ತೆ ಸೇರ್ಪಡೆಗೊಳ್ಳಲು ಫಾರಂ 6 ನೀಡಿ ಎಂದು ಹೇಳುತ್ತಿದ್ದಾರೆ. ನಾವು ಹೊಸ ಮತದಾರರಲ್ಲ, ಈಗಾಗಲೇ ಮತ ಚಲಾಯಿಸಿದ ಮೂಲ ನಾಗರಿಕರು. ನಾವೇಕೆ ಫಾರಂ 6 ನೀಡಬೇಕು? ನಮಗೆ ಫಾರಂ 8 ಸಲ್ಲಿಸುವ ಹಕ್ಕಿದೆ. ಈ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ. ನಮ್ಮನ್ನು ಬಂಧಿಸಿದರೂ ಅಥವಾ ಹೊಡೆದರೂ ನಾವು ಎದೆಗುಂದುವುದಿಲ್ಲ,” ಎಂದು ಯೂಸುಫ್ ಕನ್ನಿ ಎಚ್ಚರಿಕೆ ನೀಡಿದರು.
ನರಸಿಂಹಯ್ಯ ಕಾಲೋನಿಯಲ್ಲಿ ಸಂವಾದ ನಡೆಸಿ ಸಂತ್ರಸ್ತರೊಂದಿಗೆ ಪ್ರತಿಭಟನೆಗೆ ಧುಮುಕಿದ ಪ್ರಕಾಶ್ ರಾಜ್
ಮತ್ತೊಂದೆಡೆ, ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಅವರು ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿದ್ದ ‘ಚುನಾವಣಾ ಆಯೋಗ ಚಲೋ’ ಕಾರ್ಯಕ್ರಮಕ್ಕೆ ಆಗಮಿಸುವ ಮೊದಲು, ಬೆಂಗಳೂರಿನ ನರಸಿಂಹಯ್ಯ ಕಾಲೋನಿ ಹಾಗೂ ಬಾಪೂಜಿನಗರ ಭಾಗಗಳಲ್ಲಿ ‘ಶಾಶ್ವತ ಸ್ಥಳಾಂತರ’ ಮತ್ತು ಎಸ್‌ಐಆರ್ ನೆಪದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಆಗಿರುವ ಸಂತ್ರಸ್ತ ಮತದಾರರೊಂದಿಗೆ ನೇರ ಸಂವಾದ ನಡೆಸಿದರು. ಸಂತ್ರಸ್ತರ ಅಳಲನ್ನು ಆಲಿಸಿದ ಅವರು, ಬಳಿಕ ಆ ಸಂತ್ರಸ್ತ ಮತದಾರರೊಂದಿಗೇ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಸಂವಾದ ಹಾಗೂ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರಾಜ್, “ನಾವು ಈ ದೇಶದ ಮೂಲ ನಿವಾಸಿಗಳು ಮತ್ತು ನಾಗರಿಕರು, ನಾವೇನೂ ಕಳ್ಳರಲ್ಲ. ಆಧಾರ್ ಕಾರ್ಡ್ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳನ್ನು ಹೊಂದಿದ್ದರೂ ಜನರನ್ನು ಅನುಮಾನದಿಂದ ನೋಡುವುದು ಅವರ ಸ್ವಾಭಿಮಾನ ಮತ್ತು ಗೌರವಕ್ಕೆ ತರುವ ಧಕ್ಕೆಯಾಗಿದೆ. ಮೋಸ ಮಾಡಿ ವೋಟರ್ ಕಾರ್ಡ್ ಪಡೆದುಕೊಂಡಿದ್ದೇವೆ ಎಂಬಂತೆ ನಮ್ಮನ್ನು ನಡೆಸಿಕೊಳ್ಳಲಾಗುತ್ತಿದೆ. ಭಾರತ ನಮ್ಮ ಮನೆ, ನಾವು ಇಲ್ಲೇ ಹುಟ್ಟಿದವರು. ಆದರೂ ಈಗ ನಾವೇ ಈ ದೇಶದವರು ಎಂದು ಸಾಬೀತುಪಡಿಸಿಕೊಳ್ಳಬೇಕಾದ ದುಸ್ಥಿತಿ ಬಂದಿದೆ,” ಎಂದು ಬೇಸರ ವ್ಯಕ್ತಪಡಿಸಿದರು.
“ಅಕ್ರಮ ಮತದಾರರನ್ನು ತೆಗೆಯುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ದಶಕಗಳಿಂದ ಇಲ್ಲೇ ವಾಸಿಸುತ್ತಿರುವ ಅರ್ಹ ನಾಗರಿಕರನ್ನು ಯಾಕೆ ಪಟ್ಟಿಯಿಂದ ಹೊರಗಿಡಬೇಕು? ದೇಶದಲ್ಲಿ ಒಂದೂವರೆ ಕೋಟಿ ಸಂತ್ರಸ್ತರಿದ್ದು, ನಾನೂ ಅದರಲ್ಲಿ ಒಬ್ಬನಾಗಿದ್ದೇನೆ. ಈಗಾಗಲೇ ಮತದಾರರಾಗಿರುವವರನ್ನೇ ಮತ್ತೆ ತಾವು ಮತದಾರರೆಂದು ಸಾಬೀತುಪಡಿಸಲು ಒತ್ತಾಯಿಸುತ್ತಿರುವುದು ಏತಕ್ಕೆ?” ಎಂದು ಅವರು ಪ್ರಶ್ನಿಸಿದರು.
ಒಟ್ಟಿನಲ್ಲಿ, ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ನಾಗರಿಕರ ಹಕ್ಕು ಕಸಿಯಲಾಗುತ್ತಿದೆ ಎಂಬ ಆರೋಪದೊಂದಿಗೆ ಆಯೋಗಕ್ಕೆ ಮುತ್ತಿಗೆ ಹಾಕಲು ಸಂಘಟನೆಗಳು ನಿರ್ಧರಿಸಿದ್ದು, ಎಸ್‌ಐಆರ್ ವಿರುದ್ಧದ ಈ ಹೋರಾಟವು ರಾಜ್ಯದಲ್ಲಿ ಬಹುದೊಡ್ಡ ಮಟ್ಟದ ಜನಾಕ್ರೋಶಕ್ಕೆ ಕಾರಣವಾಗಿದೆ.


