ಕಾನೂನು ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ಗುರುವಾರ (ಸೆ.3) ಮಹತ್ವದ ತೀರ್ಪು ನೀಡಿದೆ. ಕಾನೂನು ವಿದ್ಯಾರ್ಥಿಗಳು ವಕೀಲರಾಗಿ ನೋಂದಾಯಿಸಿಕೊಂಡ ನಂತರವಷ್ಟೇ ಬಾರ್ ಕೌನ್ಸಿಲ್‌ಗಳು ಅವರ ಮೇಲೆ ಶಿಸ್ತಿನ ನಿಯಂತ್ರಣವನ್ನು ಹೊಂದುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವ ಅಧಿಕಾರವು ಕೇವಲ ಅವರು ಓದುತ್ತಿರುವ ಮಾತೃ ಸಂಸ್ಥೆಗೆ (parent institution) ಅಥವಾ ಆ ಸಂಸ್ಥೆಯನ್ನು ನಿಯಂತ್ರಿಸುವ ನಿಯಮಗಳು ಮತ್ತು ಬೈಲಾಗಳ (byelaws) ಅಡಿಯಲ್ಲಿ ಸೂಚಿಸಲಾದ ಅಧಿಕಾರಿಗೆ ಮಾತ್ರ ಇರುತ್ತದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಈ ಕಾನೂನು ನಿಲುವನ್ನು ಅನ್ವಯಿಸಿದ ಸುಪ್ರೀಂ ಕೋರ್ಟ್, ಹೈದರಾಬಾದ್‌ನ ನಲ್ಸಾರ್ (NALSAR) ಕಾನೂನು ವಿಶ್ವವಿದ್ಯಾಲಯದ 2026ರ ಪದವಿ ಬ್ಯಾಚ್‌ನ ವಿದ್ಯಾರ್ಥಿಗಳ ನೋಂದಣಿಯನ್ನು ತಡೆಯಲು ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿಗಳ (ಸಿಜೆಐ) ವಿರುದ್ಧ ಪ್ರತಿಭಟನೆ ನಡೆಸಿದಕ್ಕಾಗಿ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರ ವಿರುದ್ಧ ತನಿಖೆ ನಡೆಸಲು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ನೀಡಿದ್ದ ನಿರ್ದೇಶನಗಳು [ಇದನ್ನು ನಂತರ ಬಿಸಿಐ ಸ್ವತಃ ಹಿಂತೆಗೆದುಕೊಂಡಿತ್ತು] ಕಾನೂನುಬಾಹಿರ ಎಂದು ಘೋಷಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿ ಜಾಯ್‌ಮಾಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಆಗಸ್ಟ್ 13ರಂದು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು ನೀಡಿದ್ದ ನಿರ್ದೇಶನಗಳನ್ನು ಪ್ರಶ್ನಿಸಿ ನಲ್ಸಾರ್‌ನ ಇಬ್ಬರು ಹಳೆಯ ವಿದ್ಯಾರ್ಥಿಗಳಾದ ಮಿಹಿರ ಸೂದ್ ಮತ್ತು ಅಭಿಷೇಕ್ ತಿವಾರಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದೆ. ಸಾರ್ವಜನಿಕ ಆಕ್ರೋಶದ ನಂತರ, ಬಿಸಿಐ ಅಧ್ಯಕ್ಷರು ಈ ನಿರ್ದೇಶನಗಳನ್ನು ತಕ್ಷಣವೇ ಹಿಂತೆಗೆದುಕೊಂಡಿದ್ದರು.
ಆಗಸ್ಟ್ 14ರಂದು ಈ ರಿಟ್ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಬಿಸಿಐ ಅಧ್ಯಕ್ಷರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೆ, ಬಿಸಿಐ ಅಥವಾ ಯಾವುದೇ ರಾಜ್ಯ ಬಾರ್ ಕೌನ್ಸಿಲ್‌ಗಳ ಒತ್ತಾಯದ ಮೇರೆಗೆ ನಲ್ಸಾರ್ ಸಂಸ್ಥೆಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರ ವಿರುದ್ಧ ಯಾವುದೇ ದಂಡನಾತ್ಮಕ ಅಥವಾ ಶಿಸ್ತು ಕ್ರಮ ಕೈಗೊಳ್ಳದಂತೆ ರಕ್ಷಣೆ ನೀಡುವ ಮಧ್ಯಂತರ ಆದೇಶವನ್ನೂ ನ್ಯಾಯಾಲಯ ಹೊರಡಿಸಿತ್ತು.
ಇಂದು (ಗುರುವಾರ, ಸೆ.3) ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಖಾಯಂಗೊಳಿಸುವ ಮೂಲಕ ಅರ್ಜಿಯನ್ನು ಇತ್ಯರ್ಥಪಡಿಸಿದೆ.
ವಿಚಾರಣೆಯ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ. ಪರಮೇಶ್ವರ್ ಅವರು, ಬಿಸಿಐ ಅಧ್ಯಕ್ಷರ ನಿರ್ದೇಶನಗಳನ್ನು ಹಿಂತೆಗೆದುಕೊಳ್ಳಲಾಗಿದ್ದರೂ, ಅವುಗಳನ್ನು ಹೊರಡಿಸಿದ ವಿಧಾನದ ಬಗ್ಗೆ ತನಿಖೆಯಾಗಬೇಕಿದೆ ಎಂದು ಆಗ್ರಹಿಸಿದ್ದಾರೆ. ಈ ಕಾರಣಕ್ಕಾಗಿ ಅರ್ಜಿ ಇನ್ನೂ ವಿಚಾರಣೆಯಲ್ಲಿದೆ ಎಂದು ತಿಳಿಸಿದ್ದಾರೆ.
“ಇದು ವಿಶ್ವವಿದ್ಯಾಲಯದಲ್ಲಿನ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಯಾಗಿದೆ. ಇದು ಕೇವಲ ಒಬ್ಬ ವಿದ್ಯಾರ್ಥಿಗೆ ಸಂಬಂಧಿಸಿದ್ದಲ್ಲ. ಇಡೀ ವಿಶ್ವವಿದ್ಯಾಲಯದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಷೇಧಿಸುವ ವಿಷಯವಾಗಿದೆ” ಎಂದು ಅವರು ನ್ಯಾಯಾಲಯಕ್ಕೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಸಿಐ ಅಧ್ಯಕ್ಷ ಹಾಗೂ ಹಿರಿಯ ವಕೀಲ ಮನನ್ ಕುಮಾರ್ ಮಿಶ್ರಾ ಅವರು, ಆಕ್ಷೇಪಾರ್ಹ ನಿರ್ದೇಶನಗಳನ್ನು ಹೊರಡಿಸಿದ ಒಂದು ಗಂಟೆಯೊಳಗೇ ಹಿಂತೆಗೆದುಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದ್ದಾರೆ.
ಈ ವೇಳೆ ವಕೀಲ ಕೆ. ಪರಮೇಶ್ವರ್ ಅವರು ಬಿಸಿಐ ಮೇಲಿನ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದು, “ಈ ಆದೇಶಗಳನ್ನು ಯಾವ ಸಂದರ್ಭಗಳಲ್ಲಿ ಹೊರಡಿಸಲಾಯಿತು ಮತ್ತು ಈ ಬಗ್ಗೆ ಸಭೆಗಳನ್ನು ನಡೆಸಲಾಗಿದೆಯೇ ಎಂಬುದನ್ನು ನಾವು ತಿಳಿಯಲು ಬಯಸುತ್ತೇವೆ. ಏಕೆಂದರೆ, ಇದು ಕಾನೂನು ಶಿಕ್ಷಣ ಮತ್ತು ಕಾನೂನು ವೃತ್ತಿಯನ್ನು ನಿಯಂತ್ರಿಸುವ ಜವಾಬ್ದಾರಿಯುತ ಶಾಸನಬದ್ಧ ಪ್ರಾಧಿಕಾರವಾಗಿದೆ… ಅವರು ಈಗ ಪತ್ರಗಳನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ವಿಷಯ ಅದಲ್ಲ, ಇಡೀ ಬ್ಯಾಚ್‌ನ ವಿದ್ಯಾರ್ಥಿಗಳನ್ನು ನೋಂದಣಿ ಮಾಡಿಕೊಳ್ಳುವುದಿಲ್ಲ ಎಂದು ಅವರು ಆರಂಭದಲ್ಲಿ ಹೇಳಿದ್ದರು… ಈ ಸಭೆಗಳು ಹೇಗೆ ನಡೆದವು, ಯಾರು ಈ ನಿರ್ಧಾರವನ್ನು ತೆಗೆದುಕೊಂಡರು ಮತ್ತು ಕಾನೂನಿನ ಯಾವ ನಿಬಂಧನೆಯ ಅಡಿಯಲ್ಲಿ ಇದನ್ನು ಮಾಡಲಾಯಿತು ಎಂಬುದನ್ನು ನಾವು ಬಾರ್ ಕೌನ್ಸಿಲ್‌ನಿಂದ ತಿಳಿಯಲು ಬಯಸುತ್ತೇವೆ. ಅವರ ಮೇಲೆ ಯಾವುದಾದರೊಂದು ರೀತಿಯಲ್ಲಿ ಹೊಣೆಗಾರಿಕೆಯನ್ನು ನಿಗದಿಪಡಿಸಲೇಬೇಕು…. ಇಂತಹ ಅನಿಯಂತ್ರಿತ ಮತ್ತು ಹಠಾತ್ ಧೋರಣೆಯ ಕ್ರಮಕ್ಕೆ ಉತ್ತರಿಸಲು ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು” ಎಂದು ವಾದಿಸಿದ್ದಾರೆ. ಮುಂದುವರಿದು, ಕಾನೂನು ವಿದ್ಯಾರ್ಥಿಗಳ ಮೇಲೆ ಬಿಸಿಐಗೆ ಯಾವುದೇ ವ್ಯಾಪ್ತಿ ಅಥವಾ ಅಧಿಕಾರವಿಲ್ಲ ಮತ್ತು ವಿದ್ಯಾರ್ಥಿಗಳು ವಕೀಲರಾಗಿ ನೋಂದಾಯಿಸಿಕೊಂಡ ನಂತರವಷ್ಟೇ ಅವರ ನಡವಳಿಕೆಯನ್ನು ನಿಯಂತ್ರಿಸಲು ಸಾಧ್ಯ ಎಂದು ಅವರು ತಿಳಿಸಿದ್ದಾರೆ.
ನಿರ್ದೇಶನಗಳನ್ನು ಈಗಾಗಲೇ ಹಿಂತೆಗೆದುಕೊಳ್ಳಲಾಗಿದೆ ಎಂಬುದನ್ನು ಪುನರುಚ್ಚರಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರು, ಈ ವಿಷಯಕ್ಕೆ ಇಲ್ಲಿಗೇ “ಮಂಗಳ ಹಾಡಬೇಕು” ಎಂದು ವಿನಂತಿಸಿದ್ದಾರೆ. “ಎಲ್ಲವನ್ನೂ ಈಗಾಗಲೇ ಪರಿಹರಿಸಲಾಗಿದೆ. ಕೌನ್ಸಿಲ್ ತನ್ನ ಸಭೆಯಲ್ಲಿ, ಇನ್ನು ಮುಂದೆ ಏನೂ ಬಾಕಿ ಉಳಿದಿಲ್ಲ ಮತ್ತು ಎಲ್ಲವನ್ನೂ ಬಗೆಹರಿಸಲಾಗಿದೆ ಎಂದು ಹೇಳಿದೆ. ಆ ಪತ್ರವನ್ನು ತಕ್ಷಣವೇ ಹಿಂತೆಗೆದುಕೊಳ್ಳಲಾಗಿತ್ತು” ಎಂದು ಮಿಶ್ರಾ ಹೇಳಿದ್ದಾರೆ.
ವಕೀಲ ಕೆ. ಪರಮೇಶ್ವರ್ ಅವರ ವಾದವನ್ನು ಪುರಸ್ಕರಿಸಿದ ಮುಖ್ಯ ನ್ಯಾಯಮೂರ್ತಿಗಳು, “ಮಿಸ್ಟರ್ ಪರಮೇಶ್ವರ್ ಅವರ ವಾದ ಸರಿಯಾಗಿದೆ ಎಂದೇ ತೋರುತ್ತದೆ. ಕಾನೂನು ವಿದ್ಯಾರ್ಥಿಗಳ ಮೇಲೆ ಬಿಸಿಐಗೆ ಯಾವುದೇ ಅಧಿಕಾರ ವ್ಯಾಪ್ತಿ ಇಲ್ಲ. ಯಾರಾದರೂ ಕಾನೂನು ಶಿಕ್ಷಣ ಮುಗಿಸಿ ಹೊರಬಂದ ನಂತರ, ಅಂದರೆ ಒಬ್ಬ ಕಾನೂನು ಪದವೀಧರ ವಕೀಲರಾಗಿ ನೋಂದಾಯಿಸಿಕೊಂಡ ನಂತರವಷ್ಟೇ ಅವರ ನಡವಳಿಕೆಯನ್ನು ನಿಯಂತ್ರಿಸಲು ಬಿಸಿಐ ಶಾಸನಬದ್ಧ ಪ್ರಾಧಿಕಾರವಾಗುತ್ತದೆ. ಆದರೆ ವಿದ್ಯಾರ್ಥಿಗಳ ಮೇಲಲ್ಲ” ಎಂದು ಮುಖ್ಯ ನ್ಯಾಯಮೂರ್ತಿಗಳು ಸ್ಪಷ್ಟಪಡಿಸಿದ್ದಾರೆ.
Courtesy : livelaw.in


