ರಾಜಕೀಯ ಪಕ್ಷಗಳ ಬೂತ್ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ ಎಣಿಕೆ ನಮೂನೆಗಳಲ್ಲಿರುವ (ಎನ್ಯುಮರೇಷನ್ ಫಾರಂ) ಎಲ್ಲ ವಿವರಗಳನ್ನು ಪರಿಶೀಲಿಸಲು ಜವಾಬ್ದಾರರಲ್ಲ ಎಂದು ದೆಹಲಿ ಹೈಕೋರ್ಟ್ ಗುರುವಾರ (ಸೆ.3) ನೀಡಿರುವ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಜನತಾ ಪ್ರಾತಿನಿಧ್ಯ ಕಾಯ್ದೆಯ ಕಲಂ 31ರಡಿ ಬಿಎಲ್‌ಎಗಳು ಮತದಾರರ ಭಾವಚಿತ್ರದಂತಹ ಪರಿಶೀಲಿಸಬಹುದಾದ ಮಾಹಿತಿಗೆ ಮಾತ್ರ ಹೊಣೆಗಾರರಾಗಿರುತ್ತಾರೆ ಎಂದು ನ್ಯಾಯಮೂರ್ತಿ ಅಮಿತ್ ಬನ್ಸಾಲ್ ಹೇಳಿದ್ದಾರೆ.
ಕಾಯ್ದೆಯ ಕಲಂ 31ರ ಪ್ರಕಾರ, ಚುನಾವಣಾ ಪಟ್ಟಿಗಳ ಸಿದ್ಧತೆ, ಪರಿಷ್ಕರಣೆ ಅಥವಾ ತಿದ್ದುಪಡಿಗೆ ಸಂಬಂಧಿಸಿದಂತೆ ತಪ್ಪು ಘೋಷಣೆಗಳನ್ನು ನೀಡುವುದು ಅಪರಾಧವಾಗಿದ್ದು, ಒಂದು ವರ್ಷದವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಹಾಗಾಗಿ, ಗಣತಿ ನಮೂನೆಗಳ ಎಲ್ಲಾ ಮಾಹಿತಿಗಳಿಗೂ ಬಿಎಲ್‌ಎಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಏಕೆಂದರೆ ಆ ಎಲ್ಲಾ ಮಾಹಿತಿಯನ್ನು ಪರಿಶೀಲಿಸುವ ಸ್ಥಿತಿಯಲ್ಲಿ ಬಿಎಲ್‌ಎ ಇರುವುದಿಲ್ಲ. ಅಂತಹ ಮಾಹಿತಿಯು ಕೇವಲ ಸಂಬಂಧಪಟ್ಟ ಮತದಾರನಿಗೆ ಮಾತ್ರ ಪ್ರತ್ಯೇಕವಾಗಿ ತಿಳಿದಿರುತ್ತದೆ ಎಂದು ನ್ಯಾಯಾಲಯವು ಹೇಳಿದೆ.
ಭಾರತೀಯ ಚುನಾವಣಾ ಆಯೋಗ (ಇಸಿಐ) ತನ್ನ ಪ್ರತಿ ಅಫಿಡವಿಟ್‌ನಲ್ಲಿ, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಅಥವಾ ಕೈಬಿಡುವ ಯಾವುದೇ ಶಾಸನಬದ್ಧ ಪರಿಶೀಲನೆ ಅಥವಾ ಇತರ ಶಾಸನಬದ್ಧ ಪ್ರಕ್ರಿಯೆಗಳಲ್ಲಿ ಬಿಎಲ್‌ಎಗಳು ಭಾಗವಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವುದನ್ನು ನ್ಯಾಯಾಲಯವು ಗಮನಿಸಿದೆ. ಮಾಹಿತಿಯನ್ನು ಪರಿಶೀಲಿಸುವುದು ಕೇವಲ ಬಿಎಲ್‌ಒ ಅವರ ಕೆಲಸವಾಗಿದೆ ಮತ್ತು ಅವರೇ ಮನೆ ಮನೆಗೆ ಭೇಟಿ ನೀಡಿ ಈ ಪರಿಶೀಲನೆ ನಡೆಸುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.
ಪರಿಶೀಲನೆ ಮತ್ತು ದೃಢೀಕರಣದ ಜವಾಬ್ದಾರಿಯನ್ನು ಬಿಎಲ್‌ಒಗಳಿಗೆ ವಹಿಸಿದ ನಂತರ, ಗಣತಿ ನಮೂನೆ ವಿವರಗಳ ನಿಖರತೆಯನ್ನು ಪ್ರಮಾಣೀಕರಿಸುವ ವೈಯಕ್ತಿಕ ಮುಚ್ಚಳಿಕೆಯನ್ನು ನೀಡುವಂತೆ ಬಿಎಲ್‌ಎಗಳಿಗೆ ಒತ್ತಾಯಿಸಲು ಯಾವುದೇ ಸಮರ್ಥನೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
ಆದ್ದರಿಂದ, ಈ ನಮೂನೆಯಲ್ಲಿರುವ ಮಾಹಿತಿಯ ಸತ್ಯಾಸತ್ಯತೆಗೆ ಸಂಬಂಧಿಸಿದಂತೆ ಬಿಎಲ್‌ಎ ಮುಚ್ಚಳಿಕೆಯನ್ನು ನೀಡಬೇಕೆಂಬ ಅಗತ್ಯತೆಯು ಅನಿಯಂತ್ರಿತ ಮತ್ತು ಅಸಮಂಜಸವಾಗಿದೆ. ಬಿಎಲ್‌ಎ ಹೆಚ್ಚೆಂದರೆ, ಈ ನಮೂನೆಯನ್ನು ಸಲ್ಲಿಸುವ ವ್ಯಕ್ತಿಯ ಗುರುತನ್ನು ಮತ್ತು ನಮೂನೆಯಲ್ಲಿ ಅಂಟಿಸಲಾದ ಭಾವಚಿತ್ರವು ಅದೇ ವ್ಯಕ್ತಿಯದ್ದೇ ಎಂಬುದನ್ನು ಮಾತ್ರ ಪರಿಶೀಲಿಸಿ ಮುಚ್ಚಳಿಕೆ ನೀಡಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಭಾರತೀಯ ಚುನಾವಣಾ ಆಯೋಗವು (ಇಸಿಐ) ಹೊರಡಿಸಿದ್ದ ಮಾರ್ಗಸೂಚಿಗಳನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ನಿರ್ಧಾರದ ಸಂದರ್ಭದಲ್ಲಿ ನ್ಯಾಯಾಲಯ ಈ ತೀರ್ಪನ್ನು ನೀಡಿದೆ. ಆ ಮಾರ್ಗಸೂಚಿಗಳಲ್ಲಿ, ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ಬಿಎಲ್‌ಎಗಳು ತಾವು ಗಣತಿ ನಮೂನೆಯಲ್ಲಿರುವ ಎಲ್ಲಾ ವಿವರಗಳನ್ನು ವೈಯಕ್ತಿಕವಾಗಿ ಪರಿಶೀಲಿಸಿದ್ದೇವೆ ಎಂದು ಪ್ರಮಾಣೀಕರಿಸುವ ವೈಯಕ್ತಿಕ ಮುಚ್ಚಳಿಕೆಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿತ್ತು.
ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ (ಡಿಪಿಸಿಸಿ) ಅಧ್ಯಕ್ಷ ದೇವೇಂದರ್ ಯಾದವ್ ಮತ್ತು ಇನ್ನೊಬ್ಬರು ವ್ಯಕ್ತಿ ಈ ಅರ್ಜಿ ಸಲ್ಲಿಸಿದ್ದರು.
ಜನತಾ ಪ್ರಾತಿನಿಧ್ಯ ಕಾಯ್ದೆ ಅಥವಾ ಮತದಾರರ ನೊಂದಣಿ ನಿಯಮಗಳು—ಇವೆರಡರಲ್ಲೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಇಂತಹ ಮುಚ್ಚಳಿಕೆಯನ್ನು ಕೇಳಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡುವ ಯಾವುದೇ ನಿಬಂಧನೆಗಳಿಲ್ಲ ಎಂಬುದು ಯಾದವ್ ಅವರ ವಾದವಾಗಿತ್ತು.
ಜನತಾ ಪ್ರಾತಿನಿಧ್ಯ ಕಾಯ್ದೆ 1950ರ ಸೆಕ್ಷನ್ 23ರ ಅಡಿಯಲ್ಲಿ ಸೂಚಿಸಲಾದ ಶಾಸನಬದ್ಧ ಪರಿಶೀಲನಾ ವ್ಯವಸ್ಥೆಗೆ ಬಿಎಲ್‌ಎಗಳಿಂದ ವೈಯಕ್ತಿಕ ಮುಚ್ಚಳಿಕೆಯನ್ನು ಕೇಳುವುದು ನೇರ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ, ಮತದಾರರ ಪಟ್ಟಿಗೆ ಯಾವುದೇ ಹೆಸರನ್ನು ಸೇರಿಸುವ ಮೊದಲು ಚುನಾವಣಾ ನೋಂದಣಿ ಅಧಿಕಾರಿಯು ನಿಗದಿತ ನಿಯಮಗಳ ಪ್ರಕಾರ ಸತ್ಯಾಸತ್ಯತೆಗಳ ಸೂಕ್ತ ಪರಿಶೀಲನೆ ನಡೆಸುವುದನ್ನು ಕಡ್ಡಾಯಗೊಳಿಸಲಾಗಿದೆ.
ನಿಯಮಗಳ ಪ್ರಕಾರ ನಿಗದಿತ ಪರಿಶೀಲನಾ ವಿಧಾನವನ್ನು ಶಾಸನಬದ್ಧ ಅಧಿಕಾರಿಗಳು ನಿರ್ವಹಿಸಬೇಕೇ ಹೊರತು, ಖಾಸಗಿ ವ್ಯಕ್ತಿಗಳು ಅಥವಾ ರಾಜಕೀಯ ಪಕ್ಷಗಳ ಪ್ರತಿನಿಧಿಗಳಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ಬಿಎಲ್‌ಎಗಳ ಮೇಲೆ ವೈಯಕ್ತಿಕ ಪರಿಶೀಲನೆಯ ಮುಚ್ಚಳಿಕೆಯನ್ನು ಹೇರುವುದು ಶಾಸನಬದ್ಧ ಕಾರ್ಯವನ್ನು ಖಾಸಗಿ ವ್ಯಕ್ತಿಗಳಿಗೆ ಕಾನೂನುಬಾಹಿರವಾಗಿ ನಿಯೋಜಿಸಿದಂತಾಗುತ್ತದೆ ಎಂದು ಹೇಳಲಾಗಿತ್ತು.
ರಾಷ್ಟ್ರ ರಾಜಧಾನಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ಜಾರಿಗೊಳಿಸುವ ಮುನ್ನ, ಅರ್ಜಿದಾರರ ಬಿಎಲ್‌ಎಗಳು ಈ ಪ್ರಕ್ರಿಯೆಯಲ್ಲಿ ಪರಿಣಾಮಕಾರಿಯಾಗಿ ಸಹಾಯ ಮಾಡಲು ಅನುಕೂಲವಾಗುವಂತೆ, 2002ರ ಮತದಾರರ ಪಟ್ಟಿಯ ಮುದ್ರಿತ ಮತ್ತು ಸಾಫ್ಟ್ ಪ್ರತಿಗಳನ್ನು ಹಾಗೂ ‘ಫ್ರೋಜನ್ ಫೋಟೋ ಮತದಾರರ ಪಟ್ಟಿ’ಯನ್ನು ತಮಗೆ ಒದಗಿಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಮತ್ತು ಎಸ್‌ಐಆರ್ ಮಾರ್ಗಸೂಚಿಗಳನ್ನು ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
Courtesy : livelaw.in


