ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಸಂಕಷ್ಟದಲ್ಲಿರುವ ನೈಜ ಆರ್ಥಿಕತೆಯನ್ನು ಮರೆಮಾಚಲು ಕೇಂದ್ರ ಸರ್ಕಾರವು ‘ಸಂಖ್ಯಾಶಾಸ್ತ್ರೀಯ ವಿಧಾನಗಳನ್ನು ತಿರುಚುತ್ತಿದೆ’ ಎಂದು ನ್ಯಾಷನಲ್ ಕಾಂಗ್ರೆಸ್ ಪಾರ್ಟಿ (ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಆರೋಪಿಸಿದ್ದಾರೆ.
“ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇಕಡಾ 7.8 ರಷ್ಟು ಜಿಡಿಪಿ ಅಭಿವೃದ್ಧಿ ದರ ದಾಖಲಾಗಿದೆ. ಇದು ಬಲವಾದ ಆರ್ಥಿಕ ಸ್ಥಿತಿಯ ಸಂಕೇತವಾಗಿದೆ” ಎಂದು ಒಕ್ಕೂಟ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ವರದಿಯ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪವಾರ್ ಈ ಹೇಳಿಕೆ ನೀಡಿದ್ದಾರೆ.
“ಆಡಳಿತಾರೂಢ ಸರ್ಕಾರವು ದೇಶದ ಆರ್ಥಿಕ ಸ್ಥಿರತೆಯ ಬಗ್ಗೆ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದೆ” ಎಂದು ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಪವಾರ್ ತೀವ್ರವಾಗಿ ಟೀಕಿಸಿದರು.
“ಆರ್ಥಿಕತೆಯ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸಿ, ದೇಶದ ಆರ್ಥಿಕ ಸ್ಥಿತಿ ಅತ್ಯಂತ ಸದೃಢವಾಗಿದೆ ಎಂದು ಬಿಂಬಿಸಲು ಪ್ರಧಾನಿ ಮತ್ತು ಹಣಕಾಸು ಸಚಿವರು ಯತ್ನಿಸುತ್ತಿದ್ದಾರೆ. ಆದರೆ ಆರ್ಥಿಕತೆಯು ವಾಸ್ತವವಾಗಿ ಮಂದಗತಿಯಲ್ಲ ಸಾಗುತ್ತಿದೆ ಎಂಬುದನ್ನು ಅವರು ಗ್ರಹಿಸಲು ವಿಫಲರಾಗಿದ್ದಾರೆ” ಎಂದು ಪವಾರ್ ಹೇಳಿದರು.
“ಹೆಚ್ಚುತ್ತಿರುವ ಹಣದುಬ್ಬರ ಮತ್ತು ಕುಸಿಯುತ್ತಿರುವ ಗೃಹಬಳಕೆಯ ಉಳಿತಾಯದಂತಹ ಆಂತರಿಕ ಸಮಸ್ಯೆಗಳಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸೆಳೆಯಲು ಪ್ರಧಾನಿಯವರು ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಬಳಸಿಕೊಳ್ಳುತ್ತಿದ್ದಾರೆ” ಎಂದೂ ಅವರು ಆರೋಪಿಸಿದರು.
ಹಲವಾರು ಪ್ರಾದೇಶಿಕ ಮತ್ತು ಕೃಷಿ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಹ ಪವಾರ್ ಕಳವಳ ವ್ಯಕ್ತಪಡಿಸಿದರು.
ಸಕ್ಕರೆ ಬೆಲೆ ಏರಿಕೆಯ ಕುರಿತು ಮಾತನಾಡಿದ ಪವಾರ್, “ಉತ್ಪಾದನಾ ವೆಚ್ಚ ಹೆಚ್ಚಾಗಿದ್ದರೂ ಅದರ ಲಾಭ ರೈತರಿಗೆ ತಲುಪುತ್ತಿಲ್ಲ. ಸಕ್ಕರೆ ಆಮದಿನ ಪರಿಣಾಮ ಅಸ್ಪಷ್ಟವಾಗಿರುವುದರಿಂದ ಅದರಿಂದ ಹಿಂದೆ ಸರಿಯಬೇಕು” ಎಂದರು.
ಮಹಾರಾಷ್ಟ್ರದ ಎಫ್‌ಡಿಎ ಆಯುಕ್ತ ತುಕಾರಾಂ ಮುಂಡೆ ಅವರು ಡೈರಿ ಕ್ಷೇತ್ರದಲ್ಲಿ ಕೈಗೊಂಡಿರುವ ನಕಲಿ ಹಾಲಿನ ವಿರುದ್ಧದ ಕಟ್ಟುನಿಟ್ಟಿನ ಕಾರ್ಯಾಚರಣೆಯನ್ನು ಪವಾರ್ ಸ್ವಾಗತಿಸಿದರು. ಹಾಲಿನ ಬೆಲೆ ಲೀಟರ್‌ಗೆ 60 ರೂ. ನಿಂದ 80 ರೂ. ಗೆ ಏರಿಕೆಯಾಗಿದ್ದರೂ, ಉತ್ತಮ ಗುಣಮಟ್ಟಕ್ಕಾಗಿ ಗ್ರಾಹಕರು ಹಣ ನೀಡಲು ಸಿದ್ಧರಿದ್ದಾರೆ; ಇದು ಅಂತಿಮವಾಗಿ ಉತ್ಪಾದಕರಿಗೆ ಅನುಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಮಹಾರಾಷ್ಟ್ರದಾದ್ಯಂತ ತೀವ್ರ ಮಳೆ ಕೊರತೆಯನ್ನು ಉಲ್ಲೇಖಿಸಿದ ಪವಾರ್, ಕುಡಿಯುವ ನೀರು ಮತ್ತು ಬಿತ್ತನೆ ಕಾರ್ಯಾಚರಣೆಗೆ ದೊಡ್ಡ ಬಿಕ್ಕಟ್ಟು ಎದುರಾಗಲಿದೆ ಎಂದು ಎಚ್ಚರಿಸಿ, ಸಾಮೂಹಿಕ ಪರಿಹಾರ ಕಾರ್ಯಗಳಿಗೆ ಕರೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 16 ರ ಸುಮಾರಿಗೆ ಬಾರಾಮತಿಗೆ ಭೇಟಿ ನೀಡುವ ಸಾಧ್ಯತೆಯಿದ್ದು, ಅಲ್ಲಿನ ಸ್ಥಳೀಯ ಯೋಜನೆಗಳ ಕುರಿತು ಅವರಿಗೆ ವಿವರಣೆ ನೀಡಲಾಗುವುದು ಎಂದು ಪವಾರ್ ಸುಳಿವು ನೀಡಿದರು.


