ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ (ಬುದ್ಧಿಜೀವಿ ನಕ್ಸಲರು) ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ರೀತಿಯಾಗಿದೆ ಎಂದು ಪ್ರಸಿದ್ಧ ಹವಾಮಾನ ಕಾರ್ಯಕರ್ತ ಮತ್ತು ಶಿಕ್ಷಣ ತಜ್ಞ ಸೋನಂ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಅಂಗಮೋ ಗುರುವಾರ ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, “ಭಾರತದ ಶಿಕ್ಷಣ, ವಿಜ್ಞಾನ ಮತ್ತು ಬೌದ್ಧಿಕ ಚೌಕಟ್ಟುಗಳ ಸಮೀಪನದಲ್ಲಿ ‘ದಾಸ್ಯ ಮನೋಭಾವ’ ಇದೆ. ದೇಶವು ತನ್ನದೇ ಆದ ಬೌದ್ಧಿಕ ಪರಂಪರೆಯನ್ನು ಸರಿಯಾಗಿ ಪರಿಶೀಲಿಸದೆ ವಿದೇಶಗಳಲ್ಲಿ ಅಭಿವೃದ್ಧಿಪಡಿಸಿದ ವ್ಯವಸ್ಥೆಗಳನ್ನೇ ಮುಂದುವರಿಸಿಕೊಂಡು ಹೋಗುತ್ತಿದೆ” ಎಂದು ಅವರು ಹೇಳಿದರು.
“ಖಂಡಿತವಾಗಿಯೂ ನಮ್ಮಲ್ಲಿ ದಾಸ್ಯ ಮನೋಭಾವವಿದೆ. ಏಕೆಂದರೆ ನಮ್ಮ ಎಲ್ಲಾ ಆರ್ಥಿಕ, ಶೈಕ್ಷಣಿಕ ಚೌಕಟ್ಟುಗಳು, ಭೌತಶಾಸ್ತ್ರ, ಗಣಿತ ಹೀಗೆ ಎಲ್ಲಾ ಸಿದ್ಧಾಂತಗಳ ಹೆಸರುಗಳನ್ನು ಗಮನಿಸಿ. 16 ಮತ್ತು 17ನೇ ಶತಮಾನದಲ್ಲಿ ಯುರೋಪ್‌ನಲ್ಲಿ ನವೋದಯ ಸಂಭವಿಸಿದಾಗ, ಅಲ್ಲಿನ ವಿಜ್ಞಾನಿಗಳು, ಭೌತಶಾಸ್ತ್ರಜ್ಞರು ಮತ್ತು ತತ್ವಜ್ಞಾನಿಗಳು ಮಂಡಿಸಿದ ಅದೇ ಚೌಕಟ್ಟುಗಳನ್ನು ಭಾರತ ಇಂದು ಅನುಸರಿಸುತ್ತಿದೆ” ಎಂದು ಅವರು ಹೇಳಿದರು.
“ಯುರೋಪ್‌ನಲ್ಲಿ ನವೋದಯ ಕಾಲದಲ್ಲಿದ್ದ ಪ್ರತಿಯೊಂದು ವಿಶ್ವವಿದ್ಯಾನಿಲಯದಲ್ಲೂ ಜನರು ಸಂಸ್ಕೃತ ಭಾಷೆಯನ್ನು ಅಧ್ಯಯನ ಮಾಡುತ್ತಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ” ಎಂದು ಅವರು ಹೇಳಿದರು.
ಪಾಶ್ಚಿಮಾತ್ಯದ ಪ್ರಮುಖ ಚಿಂತಕರು ಮತ್ತು ವಿಜ್ಞಾನಿಗಳು ಭಾರತೀಯ ತತ್ವಶಾಸ್ತ್ರದ ಗ್ರಂಥಗಳನ್ನು ಅಧ್ಯಯನ ಮಾಡಿದ್ದರು ಎಂದ ಅಂಗಮೋ, ಭಾರತೀಯರು ಮೂಲ ಆಕರಗಳನ್ನು ನೇರವಾಗಿ ಅಧ್ಯಯನ ಮಾಡುವ ಬದಲು ಇತರರು ನೀಡಿದ ವ್ಯಾಖ್ಯಾನಗಳನ್ನು ಅನುಸರಿಸುತ್ತಿದ್ದಾರೆ ಎಂದು ವಾದಿಸಿದರು.
“ಆಪನ್‌ಹೈಮರ್ ಗೀತೆಯನ್ನು ಓದಿದ್ದರು, ಐನ್‌ಸ್ಟೈನ್ ಉಪನಿಷತ್ತುಗಳನ್ನು ಓದಿದ್ದರು ಹಾಗೂ ಪ್ಲೇಟೋ ಸೇರಿದಂತೆ ಅನೇಕ ಪಾಶ್ಚಿಮಾತ್ಯ ತತ್ವಜ್ಞಾನಿಗಳು ಮತ್ತು ವಿಜ್ಞಾನಿಗಳು ಭಾರತೀಯ ಗ್ರಂಥಗಳನ್ನು ಓದಿ ಅವುಗಳಿಂದ ಆಲೋಚನೆಗಳನ್ನು ಪಡೆದುಕೊಂಡಿದ್ದರು ಎಂಬುದು ನಮಗೆ ಗೊತ್ತು. ಆದರೆ ಹಲವು ಬಾರಿ ಅವರು ಅವುಗಳನ್ನು ತಮ್ಮದೇ ಆದ ಸಿದ್ಧಾಂತಗಳೆಂದು ಮಂಡಿಸಿದರು, ನಾವು ಆ ಎರವಲು ಪಡೆದ ಆವೃತ್ತಿಯನ್ನೇ ಸ್ವೀಕರಿಸಿದೆವು” ಎಂದು ಅವರು ಪ್ರತಿಪಾದಿಸಿದರು.
‘ದಿಮಾಗಿ ನಕ್ಸಲ್’ ಪದದ ಬಳಕೆಯ ಕುರಿತು ಮಾತನಾಡಿದ ಅಂಗಮೋ, ಪ್ರಶ್ನಿಸುವುದು ಭಾರತೀಯ ತತ್ವಶಾಸ್ತ್ರ ಮತ್ತು ಶಿಕ್ಷಣದ ಪ್ರಮುಖ ಭಾಗವಾಗಿದೆ ಎಂದರು.
“ನನ್ನ ಪ್ರಕಾರ, ಪ್ರಶ್ನೆ ಕೇಳುವ ವ್ಯಕ್ತಿಯನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುವುದು ಅತ್ಯಂತ ಸೂಕ್ಷ್ಮತೆಯಿಲ್ಲದ ನಡವಳಿಕೆಯಾಗಿದೆ. ನಮ್ಮ ಪರಂಪರೆಯಲ್ಲಿ ಪ್ರಶ್ನಿಸುವುದನ್ನು ಎಂದಿಗೂ ನಕಾರಾತ್ಮಕವಾಗಿ ನೋಡಿಲ್ಲ. ಉಪನಿಷತ್ತುಗಳಲ್ಲೂ ಪ್ರಶ್ನಿಸುವ ನಿರಂತರ ಪರಂಪರೆಯಿದೆ. ನಚಿಕೇತ ಯಮನನ್ನು ಪ್ರಶ್ನಿಸುತ್ತಾನೆ. ಭಗವದ್ಗೀತೆಯುದ್ದಕ್ಕೂ ಅರ್ಜುನ ಕೃಷ್ಣನನ್ನು ಪ್ರಶ್ನಿಸುತ್ತಾನೆ. ಕೆಲವು ಸಮಯಗಳಲ್ಲಿ ಅರ್ಜುನ ಕೃಷ್ಣನ ಅಭಿಪ್ರಾಯಗಳನ್ನು ಒಪ್ಪುವುದಿಲ್ಲ. ಹಾಗಾದರೆ ನಾವು ಅರ್ಜುನನನ್ನು ‘ದಿಮಾಗಿ ನಕ್ಸಲ್’ ಎಂದು ಕರೆಯುತ್ತೇವೆಯೇ? ಇಲ್ಲ” ಎಂದು ಅವರು ಹೇಳಿದರು.
“ಏಕೆಂದರೆ ಪ್ರಶ್ನಿಸುವುದು ನಮ್ಮ ಶಿಕ್ಷಣ ವ್ಯವಸ್ಥೆಯ ಭಾಗವಾಗಿತ್ತು. ಪ್ರಶ್ನೆಗಳನ್ನು ಕೇಳುವುದು ಒಳ್ಳೆಯ ವಿಷಯ. ಆದರೆ ಉದ್ದೇಶ ಮುಖ್ಯ. ಕೆಲವು ಮಕ್ಕಳು ಕುತೂಹಲದಿಂದ ಪ್ರಶ್ನೆಗಳನ್ನು ಕೇಳಿದರೆ, ಇನ್ನು ಕೆಲವರು ಬೇರೆ ಉದ್ದೇಶದಿಂದ ಕೇಳಬಹುದು. ಆದ್ದರಿಂದ ಪ್ರಶ್ನೆ ಕೇಳುವುದು ತಪ್ಪಲ್ಲ; ಪ್ರಶ್ನೆಯ ಹಿಂದಿನ ಉದ್ದೇಶವನ್ನು ನಾವು ಗಮನಿಸಬೇಕು” ಎಂದು ಅವರು ತಿಳಿಸಿದರು.
ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯ ಮೇಲೆ ನಿಂತು ಸ್ವಾತಂತ್ರ್ಯ ದಿನಾಚರಣೆಯ ಭಾಷಣ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ‘ದಿಮಾಗಿ ನಕ್ಸಲ್’ ಎಂಬ ಹೊಸ ಪದವನ್ನು ಬಳಸಿದ್ದರು.


