ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯ ಹೊಸ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ವರದಿಗೆ ತೆರಳಿದ್ದ ‘4PM ನ್ಯೂಸ್ ನೆಟ್‌ವರ್ಕ್’ನ ಮುಸ್ಲಿಂ ಮಹಿಳಾ ಪತ್ರಕರ್ತೆಯರಾದ ಶಾಹೀನ್ ಖಾನ್ ಮತ್ತು ನಫೀಸಾ ಖಾನ್ ಅವರ ಮೇಲೆ ದಿಲ್ಲಿ ಪೊಲೀಸರು ಹಲ್ಲೆ ನಡೆಸಿ, ಠಾಣೆಯಲ್ಲಿ ಬಂಧಿಸಿಟ್ಟಿದ್ದಾರೆ ಎಂದು ಆರೋಪಿಸಿ ತಡರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗಿದೆ. ಹಲ್ಲೆ ನಡೆಸಿದ ಪೊಲೀಸ್ ಅಧಿಕಾರಿಗಳು ಹಾಗೂ ಎಸ್‌ಎಚ್‌ಒ (SHO) ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾಕೇತ್ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ಭುಗಿಲೆದ್ದಿದೆ.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ (AAP), ಎಐಎಂಐಎಂ (AIMIM), ಎಡಪಕ್ಷಗಳ ಕಾರ್ಯಕರ್ತರು ಸೇರಿದಂತೆ ಹಲವು ನಾಗರಿಕ ಹಕ್ಕು ಹೋರಾಟಗಾರರು ಭಾಗವಹಿಸಿದ್ದರು. ಸಾಕೇತ್ ಠಾಣೆಯ ಆವರಣದಲ್ಲೇ ಕುಳಿತು ಮಧ್ಯರಾತ್ರಿ 3 ಗಂಟೆಯ ನಂತರವೂ ಧರಣಿ ಮುಂದುವರಿಸಿದ ಪ್ರತಿಭಟನಾಕಾರರು, ಪೋಲಿಸ್ ದೌರ್ಜನ್ಯ ಮತ್ತು ದ್ವೇಷದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಘಟನೆಯ ಹಿನ್ನೆಲೆ
ಗುರುವಾರ ದಕ್ಷಿಣ ದೆಹಲಿಯ ಸಾಕೇತ್ ಮ್ಯಾಕ್ಸ್ ಆಸ್ಪತ್ರೆಯಲ್ಲಿ ನೂತನ ವಿಭಾಗದ ಉದ್ಘಾಟನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಭಾಗವಹಿಸಿದ್ದ ಈ ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತೆಯರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತಮ್ಮ ದೇಹದ ಮೇಲಿರುವ ಗಾಯದ ಕಲೆಗಳನ್ನು ತೋರಿಸಿರುವ ಪತ್ರಕರ್ತೆ ಶಾಹೀನ್ ಖಾನ್ ಹಾಗೂ ನಫೀಸಾ ಖಾನ್, “ನಮ್ಮನ್ನು ಪೊಲೀಸ್ ಠಾಣೆಯ ಪ್ರತ್ಯೇಕ ಕೊಠಡಿಗೆ ಕರೆದೊಯ್ದು ಲಾಠಿಗಳಿಂದ ಹೊಡೆಯಲಾಯಿತು. ದೆಹಲಿ ಸರ್ಕಾರದ ವಿರುದ್ಧ ಪ್ರಶ್ನೆ ಕೇಳಿದ್ದಕ್ಕೆ ಈ ರೀತಿ ದೌರ್ಜನ್ಯ ಎಸಗಲಾಗಿದೆ” ಎಂದು ಕಣ್ಣೀರಿಟ್ಟಿದ್ದಾರೆ.
ಅಷ್ಟೇ ಅಲ್ಲದೆ, “ನಮ್ಮ ಮೊಬೈಲ್ ಕಸಿದುಕೊಂಡ ಪೊಲೀಸರು, ನಮ್ಮ ಹೆಸರಿನಲ್ಲಿ ‘ಖಾನ್’ (ಮುಸ್ಲಿಂ ಗುರುತು) ಎಂದಿರುವುದನ್ನು ನೋಡಿ, ಕೋಮುದ್ವೇಷದ ಮಾತುಗಳನ್ನಾಡುತ್ತಾ ಗಂಭೀರವಾಗಿ ಹಲ್ಲೆ ನಡೆಸಿದರು” ಎಂದು ಪತ್ರಕರ್ತೆಯರು ಆರೋಪ ಮಾಡಿದ್ದಾರೆ.
ಮಾಧ್ಯಮ ಸಂಘಟನೆಗಳಿಂದ ಖಂಡನೆ
ಪ್ರೆಸ್ ಕ್ಲಬ್ ಆಫ್ ಇಂಡಿಯಾ (PCI), ಇಂಡಿಯನ್ ವುಮೆನ್ಸ್ ಪ್ರೆಸ್ ಕಾರ್ಪ್ಸ್ (IWPC), ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ಸ್ (DUJ) ಸೇರಿದಂತೆ ಪ್ರಮುಖ ಮಾಧ್ಯಮ ಸಂಘಟನೆಗಳು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿವೆ. ಸಾಕೇತ್ ಠಾಣೆಯ ಎಸ್‌ಎಚ್‌ಒ ಸೇರಿದಂತೆ ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಕೈಗೊಳ್ಳಬೇಕು ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈ ಪ್ರಕರಣವನ್ನು ಸ್ವಯಂಪ್ರೇರಿತವಾಗಿ (Suo Motu) ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿವೆ.
ಪೊಲೀಸರ ಸ್ಪಷ್ಟನೆ
ಮತ್ತೊಂದೆಡೆ, ದೆಹಲಿ ಪೊಲೀಸರು ಈ ಎಲ್ಲಾ ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ದಕ್ಷಿಣ ದೆಹಲಿ ಡಿಸಿಪಿ ನೀಡಿರುವ ಸ್ಪಷ್ಟನೆಯಲ್ಲಿ, “ವಿವಿಐಪಿ (VVIP) ಸಂಚಾರ ಮಾರ್ಗದಲ್ಲಿ ಸ್ಕೂಟರ್ ಪಾರ್ಕ್ ಮಾಡಿ ರಸ್ತೆ ತಡೆ ಉಂಟುಮಾಡಿದ್ದರಿಂದ ಮತ್ತು ಪದೇ ಪದೇ ಹೇಳಿದರೂ ವಾಹನ ತೆರವುಗೊಳಿಸದ ಕಾರಣ ಅವರನ್ನು ವಿಚಾರಣೆಗೆ ಠಾಣೆಗೆ ಕರೆತರಲಾಗಿತ್ತು. ಹಲ್ಲೆ ನಡೆಸಲಾಗಿದೆ ಎಂಬ ಆರೋಪಗಳು ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದವು” ಎಂದು ಹೇಳಿದ್ದಾರೆ.
ಆದರೆ, “ಕೇವಲ ಪಾರ್ಕಿಂಗ್ ಸಮಸ್ಯೆಗೆ ಮಹಿಳಾ ಪತ್ರಕರ್ತೆಯರ ಮೇಲೆ ಲಾಠಿ ಪ್ರಹಾರ ನಡೆಸುವುದು ಮತ್ತು ಕೋಮು ನಿಂದನೆ ಮಾಡುವುದು ಎಷ್ಟರ ಮಟ್ಟಿಗೆ ಸರಿ?” ಎಂದು ಮಾಧ್ಯಮ ಒಕ್ಕೂಟಗಳು ಮತ್ತು ಹಕ್ಕುಗಳ ಹೋರಾಟಗಾರರು ಪ್ರಶ್ನಿಸಿದ್ದಾರೆ.


