ಭಾರತೀಯ ಚುನಾವಣಾ ಆಯೋಗವು (ಇಸಿಐ) ದೇಶಾದ್ಯಂತ ಕೈಗೊಂಡಿರುವ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಯು ಶಾಸನಾತ್ಮಕವಾಗಿ ಕಾನೂನುಬದ್ಧವಾಗಿದ್ದರೂ, ನೈತಿಕವಾಗಿ ನ್ಯಾಯಸಮ್ಮತವಾಗಿಲ್ಲ ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಎಸ್‌ಐಆರ್ ಪ್ರಕ್ರಿಯೆಯಿಂದಾಗಿ ದೇಶದ ಕೋಟ್ಯಂತರ ಮತದಾರರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸಲಾಗುತ್ತಿದ್ದು, ಇದರಿಂದ ಸಾಮಾನ್ಯ ನಾಗರಿಕರ ಮೂಲಭೂತ ಹಕ್ಕು ಕಸಿದುಕೊಂಡಂತಾಗಿದೆ ಎಂದು ಪ್ರತಿಪಾದಿಸಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ದೆಹಲಿಯಲ್ಲಿ ಆಯೋಜಿಸಿದ್ದ ಪ್ರಥಮ ‘ಪ್ರೊ. ಜಗ್ದೀಪ್ ಸಿಂಗ್ ಛೋಕರ್ ಸ್ಮಾರಕ ಉಪನ್ಯಾಸ’ ಕಾರ್ಯಕ್ರಮದಲ್ಲಿ ನಾಯಕತ್ವ, ನೈತಿಕತೆ ಮತ್ತು ಸಾರ್ವಜನಿಕ ಸೇವೆ ಎಂಬ ವಿಷಯದ ಕುರಿತು ಮಾತನಾಡುವ ವೇಳೆ ಲಾವಾಸ ಈ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
‘ಬಲವುಳ್ಳದ್ದೇ ಸರಿ ಎನ್ನುವುದು ಮಧ್ಯಕಾಲೀನ ಮನಸ್ಥಿತಿ’
ಪ್ರಸ್ತುತ ವ್ಯವಸ್ಥೆಯ ಕಾರ್ಯವೈಖರಿಯನ್ನು ತೀವ್ರವಾಗಿ ಟೀಕಿಸಿದ ಲಾವಾಸ, ನಮ್ಮ ದೇಶದ ಸಂವಿಧಾನಾತ್ಮಕ ಮತ್ತು ಶಾಸನಬದ್ಧ ಸಂಸ್ಥೆಗಳು ಹಾಗೂ ಸರ್ಕಾರಗಳು ‘ಬಲವುಳ್ಳದ್ದೇ ಸರಿ’ (Might is Right) ಎಂಬ ಮಧ್ಯಕಾಲೀನ ಕಾಲಘಟ್ಟದ ಮನಸ್ಥಿತಿಯಲ್ಲಿ ವರ್ತಿಸುತ್ತಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ನ್ಯಾಯಾಂಗವು ಈ ಎಸ್‌ಐಆರ್ ಪ್ರಕ್ರಿಯೆಯನ್ನು ಕಾನೂನುಬದ್ಧ ಎಂದು ಎತ್ತಿಹಿಡಿದಿರಬಹುದು. ಹೌದು, ಇದು ಶಾಸನಬದ್ಧವಾಗಿ ಕಾನೂನುಬದ್ಧವಾಗಿರಬಹುದು, ಆದರೆ ಇದು ನಿಜವಾಗಿಯೂ ನ್ಯಾಯಸಮ್ಮತವಾಗಿದೆಯೇ? ನ್ಯಾಯ ಎನ್ನುವುದು ಕೇವಲ ಕಾನೂನಿನ ಅಕ್ಷರಗಳನ್ನು ಯಾಂತ್ರಿಕವಾಗಿ ಜಾರಿಗೊಳಿಸುವುದಷ್ಟೇ ಅಲ್ಲ, ಅದರ ಆಶಯ ಮತ್ತು ಆತ್ಮವನ್ನು ಎತ್ತಿಹಿಡಿಯುವುದಾಗಿದೆ ಎಂದು ಅವರು ಪ್ರತಿಪಾದಿಸಿದರು.
ದಲಿತ, ಅಲ್ಪಸಂಖ್ಯಾತ ಮತದಾರರಿಗೆ ಕಂಟಕ
ಹೊಸ ಪರಿಷ್ಕರಣಾ ವಿಧಾನವು ದೇಶದ ಲಕ್ಷಾಂತರ ಬಡ ಮತ್ತು ಶೋಷಿತ ವರ್ಗದ ಮತದಾರರಲ್ಲಿ ತಮ್ಮ ಹಕ್ಕಿನ ಕುರಿತು ಆತಂಕ ಮೂಡಿಸಿದೆ ಎಂದು ಲಾವಾಸ ಕಳವಳ ವ್ಯಕ್ತಪಡಿಸಿದರು. ದಾಖಲೆಗಳನ್ನು ಒದಗಿಸಲಾಗದೆ ಗ್ರಾಮೀಣ ಭಾಗದ ಬಡ ವೃದ್ಧೆ ಅಥವಾ ದುರ್ಬಲ ವರ್ಗದವರು ಮತದಾನದ ಹಕ್ಕಿನಿಂದಲೇ ವಂಚಿತರಾಗುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ದೇಶದಲ್ಲಿ ಶೇಕಡಾ 33ರಷ್ಟು ಜನ ಮತದಾನದಿಂದ ಹೊರಗುಳಿಯುತ್ತಿದ್ದಾರೆ. ಇಂತಹ ಸಂಕೀರ್ಣ ನಿಯಮಗಳಿಂದ ಪ್ರಜಾಪ್ರಭುತ್ವದ ಮೇಲೆಯೇ ಜನರಿಗೆ ವಿಶ್ವಾಸ ಪೂರ್ಣವಾಗಿ ಕುಸಿಯಲಿದೆ ಎಂದು ಎಚ್ಚರಿಸಿದರು.
ವರದಿಗಳ ಪ್ರಕಾರ, ಈವರೆಗೆ ಜಾರಿಯಾದ ಪರಿಷ್ಕರಣೆಯಿಂದ ಮತದಾನದ ಹಕ್ಕು ಕಳೆದುಕೊಂಡವರಲ್ಲಿ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ಹಾಗೂ ವಲಸೆ ಕಾರ್ಮಿಕರೇ ಹೆಚ್ಚಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ದೇಶಾದ್ಯಂತ ಜನಾಕ್ರೋಶ ವ್ಯಕ್ತವಾಗಿದೆ.
‘ಪಕ್ಷ ಮತ್ತು ಸರ್ಕಾರ ಒಂದೇ ಎಂಬಂತೆ ಬಿಂಬಿಸಲಾಗುತ್ತಿದೆ’
ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷ ಹಾಗೂ ಸರ್ಕಾರ ಎಂಬ ಎರಡೂ ಪ್ರತ್ಯೇಕ ಸಂಸ್ಥೆಗಳನ್ನು ಒಂದೇ ಎನ್ನುವಂತೆ ಬಿಂಬಿಸುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ ಎಂದು ಲಾವಾಸ ಕಳವಳ ವ್ಯಕ್ತಪಡಿಸಿದರು. ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅನುಕಂಪ, ಪಾರದರ್ಶಕತೆ ಮತ್ತು ನೈತಿಕತೆಯನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಪ್ರಜಾಪ್ರಭುತ್ವದ ಕಟ್ಟಕಡೆಯ ವ್ಯಕ್ತಿಯ ಧ್ವನಿಗೆ ಕಿವಿಗೊಡಬೇಕು ಎಂದು ಕರೆ ನೀಡಿದರು.


