ಇನ್ಫೋಸಿಸ್ ಸಹ-ಸಂಸ್ಥಾಪಕ, ಕೇಂದ್ರ ಸರ್ಕಾರದ ‘ಪರೀಕ್ಷಾ ಸುಧಾರಣಾ ಉನ್ನತ ಮಟ್ಟದ ಕಾರ್ಯಪಡೆ’ ಮುಕ್ಯಸ್ಥ ನಂದನ್ ನಿಲೇಕಣಿ ಹಾಗೂ ಅವರ ಇಡೀ ಕುಟುಂಬವು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ಚುನಾವಣಾ ಆಯೋಗದ ಅಸ್ಪಷ್ಟತೆ (Discrepancy List) ಪಟ್ಟಿಯಲ್ಲಿದೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಪ್ರಕಾರ, ನಿಲೇಕಣಿ, ಅವರ ಪತ್ನಿ ರೋಹಿಣಿ ನಿಲೇಕಣಿ ಮತ್ತು ಮಕ್ಕಳಾದ ಜಾನ್ವಿ ನಂದನ್ ನಿಲೇಕಣಿ ಹಾಗೂ ನಿಹಾರ್ ನಿಲೇಕಣಿ ಅವರನ್ನು ಈ ಪಟ್ಟಿಯಲ್ಲಿ “ಹಿಂದಿನ ಎಸ್‌ಐಆರ್‌ನೊಂದಿಗೆ ಮ್ಯಾಪ್ ಆಗದ” ಎಂದು ವರ್ಗೀಕರಿಸಲಾಗಿದೆ.
ಯಾವ ಮತದಾರರ ಹೆಸರುಗಳನ್ನು 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪ್ ಮಾಡಲು ಸಾಧ್ಯವಾಗಿಲ್ಲವೋ, ಅವರಿಗೆ ಈ ವರ್ಗೀಕರಣ ಅನ್ವಯಿಸುತ್ತದೆ ಎಂದು ವರದಿ ತಿಳಿಸಿದೆ.
ನಿಲೇಕಣಿ ಕುಟುಂಬವು ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿದೆ. ಕೋರಮಂಗಲದ 3ನೇ ಬ್ಲಾಕ್‌ನಲ್ಲಿರುವ ರೆಡ್ಡಿ ಜನಸಂಘ ಪ್ರೌಢಶಾಲೆಯಲ್ಲಿ ಈವರೆಗೆ ಮತ ಚಲಾಯಿಸಿದ್ದಾರೆ.
ದಾಖಲೆಗಳ ಪರಿಶೀಲನಾ ಹಂತದಲ್ಲಿ ಈ ಕುಟುಂಬಕ್ಕೆ ನೋಟುಗಳನ್ನು ಜಾರಿಗೊಳಿಸುವ ನಿರೀಕ್ಷೆಯಿದೆ. ಅಕ್ಟೋಬರ್ 27 ರಂದು ಪ್ರಕಟವಾಗಲಿರುವ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರಿಸಿಕೊಳ್ಳಲು ಅವರು ಚುನಾವಣಾ ಆಯೋಗ (ಇಸಿಐ) ಅನುಮೋದಿಸಿರುವ 11 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕಾಗುತ್ತದೆ.
ಉದ್ಯಮಿ ನಿಖಿಲ್ ಕಾಮತ್, ನಟ ಶಿವರಾಜ್‌ಕುಮಾರ್‌ಗೂ ನೋಟಿಸ್?
ವರದಿಗಳ ಪ್ರಕಾರ, ಯುವ ಉದ್ಯಮಿ ನಿಖಿಲ್ ಕಾಮತ್ ಮತ್ತು ಹಿರಿಯ ನಟ ಶಿವರಾಜ್‌ಕುಮಾರ್ ಅವರ ಚುನಾವಣಾ ದಾಖಲೆಗಳಲ್ಲಿದ್ದ ವ್ಯತ್ಯಾಸಗಳ ಕಾರಣದಿಂದ ಅವರಿಗೆ ನೋಟಿಸ್‌ಗಳನ್ನು ನೀಡಲಾಗಿದೆ.
ನಟ ಶಿವರಾಜ್‌ಕುಮಾರ್ ಅವರು ಚುನಾವಣಾ ಕಚೇರಿಗೆ ಪ್ರಯಾಣಿಸದಂತೆ ಅವರ ಪ್ರಕರಣವನ್ನು ಬಗೆಹರಿಸಲಾಗಿದೆ. ಪ್ರಮುಖ ಮತದಾರರಿಗೆ ಇಂತಹ ವ್ಯವಸ್ಥೆ ಲಭ್ಯವಿದೆ ಎಂದು ಚುನಾವಣಾ ಆಯೋಗ ತಿಳಿಸಿದ್ದು, ಅಧಿಕಾರಿಗಳು ಅವರ ನಿವಾಸದಲ್ಲೇ ಪರಿಶೀಲನೆ ನಡೆಸಿದ್ದಾರೆ.
“ವಿಐಪಿಗಳು ವಿಚಾರಣೆಗೆ ಖುದ್ದು ಹಾಜರಾಗದೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನಮ್ಮ ಬಳಿ ವ್ಯವಸ್ಥೆಯಿದೆ” ಎಂದು ಇಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ. ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ) ಮತದಾರರ ಮನೆ ಬಾಗಿಲಿಗೆ ತೆರಳಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಸಿ.ಎನ್.ಆರ್. ರಾವ್ ಅವರ ಹೆಸರೂ ಸಹ ಪಟ್ಟಿಯಲ್ಲಿ ಸೇರ್ಪಡೆ
ಭಾರತ ರತ್ನ ಪ್ರಶಸ್ತಿ ಪುರಸ್ಕೃತರು ಮತ್ತು ಖ್ಯಾತ ವಿಜ್ಞಾನಿ ಪ್ರೊಫೆಸರ್ ಸಿ.ಎನ್.ಆರ್. ರಾವ್ ಅವರ ಹೆಸರು ಕೂಡ ಅಸ್ಪಷ್ಟತೆ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಎಸ್‌ಐಆರ್ ನೋಟಿಸ್ ನೀಡಲಾಗಿದೆಯೇ ಎಂಬ ಗೊಂದಲಕ್ಕೆ ಕಾರಣವಾಗಿತ್ತು.
ಆದರೆ, ರಾವ್ ಅವರಿಗೆ ಯಾವುದೇ ನೋಟಿಸ್ ನೀಡಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ ರಾವ್ ಅವರು, ರಾವ್ ಅವರ ಚುನಾವಣಾ ದಾಖಲೆಯಲ್ಲಿ ವ್ಯತ್ಯಾಸ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ ಯಾವುದೇ ನೋಟಿಸ್ ನೀಡದೆ ಅಂತಿಮ ಮತದಾರರ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸುವಂತೆ ಮತಗಟ್ಟೆ ಅಧಿಕಾರಿ ಶಿಫಾರಸು ಮಾಡಿದ್ದಾರೆ.
ಈ ವ್ಯತ್ಯಾಸವು ಪ್ರಸ್ತುತ ಮತ್ತು 2002ರ ಚುನಾವಣಾ ದಾಖಲೆಗಳಲ್ಲಿ ಅವರ ಹೆಸರಿಗೆ ಸಂಬಂಧಿಸಿದ್ದಾಗಿದೆ. ಪ್ರಸ್ತುತ ದಾಖಲೆ ಮತ್ತು ಹಳೆಯ ಪಟ್ಟಿಯಲ್ಲಿ ಅವರ ಹೆಸರಿನಲ್ಲಿ ವ್ಯತ್ಯಾಸವಿತ್ತು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬಾ ಕೂಡ ಅಸ್ಪಷ್ಟತೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಿ.ಎನ್.ಆರ್. ರಾವ್ ಅವರಂತೆ ಅಲ್ಲದೆ, ಹರೇಕಳ ಹಾಜಬ್ಬಾ ಅವರಿಗೆ ಹೆಸರಿನ ವ್ಯತ್ಯಾಸದ ಕಾರಣದಿಂದ ನೋಟಿಸ್ ಜಾರಿಗೊಳಿಸಲಾಗಿತ್ತು. ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿಯಾದ ಬಳಿಕ ಅವರಿಗೆ ನೀಡಲಾಗಿದ್ದ ನೋಟಿಸ್ ಹಿಂಪಡೆಯಲಾಗಿದೆ.
43.81 ಲಕ್ಷ ಮತದಾರರಿಗೆ ನೋಟಿಸ್
ಕರ್ನಾಟಕದಲ್ಲಿ 43.81 ಲಕ್ಷ ಮತದಾರರಿಗೆ ನೋಟಿಸ್‌ಗಳನ್ನು ನೀಡಲಾಗಿದೆ. ಅಕ್ಟೋಬರ್ 22 ರವರೆಗೆ ಮುಂದುವರಿಯುವ ನೋಟಿಸ್ ಹಂತದಲ್ಲಿ ಈ ಮತದಾರರು ಸಂಬಂಧಪಟ್ಟ ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.
ಈ ಪ್ರಕ್ರಿಯೆಯು ಸಾಮಾನ್ಯ ಮತದಾರರಿಗೂ ತೊಂದರೆಯನ್ನುಂಟು ಮಾಡಿದೆ. ಹೆಸರುಗಳು, ಪೋಷಕರ ವಿವರಗಳು ಹಾಗೂ ಇಂಗ್ಲಿಷ್ ಮತ್ತು ಕನ್ನಡ ದಾಖಲೆಗಳ ನಡುವಿನ ಭಾಷಾಂ ತರದಲ್ಲಿನ ಸಣ್ಣಪುಟ್ಟ ವ್ಯತ್ಯಾಸಗಳಿಗೂ ನೋಟಿಸ್‌ಗಳನ್ನು ನೀಡಿರುವ ಬಗ್ಗೆ ವರದಿಗಳಾಗಿವೆ.
ಸಂಬಂಧಪಟ್ಟ ಮತಗಟ್ಟೆ ಅಧಿಕಾರಿ ಅಥವಾ ಚುನಾವಣಾ ನೋಂದಣಾಧಿಕಾರಿಯನ್ನು ಗುರುತಿಸಲು ಹಾಗೂ ವಿಚಾರಣೆಯ ದಿನಾಂಕ ಮತ್ತು ಸ್ಥಳದ ಸಂಪೂರ್ಣ ವಿವರಗಳನ್ನು ಪಡೆಯಲು ಕೆಲವು ಮತದಾರರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಒಟ್ಟು 4.46 ಕೋಟಿ ಮತದಾರರ ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 27 ರಂದು ಪ್ರಕಟವಾಗಲಿದೆ.


