ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ.
ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ ಗ್ರಾಮದ ಕೆಲ ಯುವಕರು ದೊಣ್ಣೆ ಹಾಗೂ ಕಲ್ಲುಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿಯಲ್ಲಿ 10ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಜಾತಿ ನಿಂದನೆ ಹಾಗೂ ಕೊಲೆಯತ್ನ ಸೇರಿದಂತೆ ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಆರೋಪಿಗಳನ್ನೂ ಕೂಡಲೇ ಬಂಧಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಮುಖಂಡರಾದ ಮರುಳಸಿದ್ದಪ್ಪ ನಾಯ್ಕಲ್ ಮಾತನಾಡಿ, “ಮಾದಿಗ ಸಮುದಾಯದ ಹೆಣ್ಣು ಮಕ್ಕಳು ಸೇರಿದಂತೆ 10 ರಿಂದ 15 ಜನರ ಮೇಲೆ ಹಲ್ಲೆ ನಡೆಸಲಾಗಿದೆ. ‘ಮೊದಲಿನಿಂದಲೂ ನಮ್ಮ ಮನೆ ದೇವರು, ನೀವು ಬರಲು ಅವಕಾಶ ಇಲ್ಲ’ ಎಂದು ಕಬ್ಬಲಿಗ ಯುವಕರ ಗುಂಪು ನಮ್ಮ ಸಮುದಾಯದ ಜನರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಸ್ತುತ ಯಾದಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹೇಳಿದರು.


