ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ.
ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ರಜತ್ ವರ್ಮಾ ಅವರು ಈ ಆದೇಶವನ್ನು ಹೊರಡಿಸಿದ್ದು, ಸೆಪ್ಟೆಂಬರ್ 21 ರಂದು ಪ್ರಕರಣದ ವಿಚಾರಣೆ ನಡೆಸಲಿದ್ದಾರೆ ಎಂದು ಆರೋಪಿಗಳ ಪರ ವಕೀಲರಾದ ಕುಲ್ ಶೇಖರ್ ಸಿಂಗ್ ತಿಳಿಸಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಅಲ್ಲದೆ, ಮುಂದಿನ ವಿಚಾರಣೆಯಂದು ಪ್ರಕರಣದ ಡೈರಿ ಹಾಗೂ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸರಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಸಿಂಗ್ ತಿಳಿಸಿದ್ದಾರೆ.
ದೇಣಿಗೆ ಎಣಿಕೆ ಪ್ರಕ್ರಿಯೆಯೊಂದಿಗೆ ಗುರುತಿಸಿಕೊಂಡಿದ್ದ ಎಂಟು ಆರೋಪಿಗಳನ್ನು, ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಪ್ರಾಥಮಿಕ ವರದಿಯ ಆಧಾರದ ಮೇಲೆ ಜೂನ್ 25 ರಂದು ಎಫ್‌ಐಆರ್ ದಾಖಲಿಸಿದ ನಂತರ ಬಂಧಿಸಲಾಗಿತ್ತು.
ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮ್ ಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಅಲಿಯಾಸ್ ಟಿನ್ನು ಯಾದವ್ ಬಂಧಿತ ಆರೋಪಿಗಳಾಗಿದ್ದಾರೆ.
ಅಧಿಕಾರಿಗಳು ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ವಿಫಲರಾದ ಕಾರಣ, ಆರೋಪಿಗಳ ಜಾಮೀನು ಅರ್ಜಿಗಳ ವಿಚಾರಣೆಯನ್ನು ಪದೇ ಪದೇ ಮುಂದೂಡಲಾಗಿದೆ ಎಂದು ಸಿಂಗ್ ತಿಳಿಸಿದರು. ಈಗ ತನಿಖಾಧಿಕಾರಿಗಳು ಪ್ರಕರಣದ ಡೈರಿಯೊಂದಿಗೆ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ.
ಮುಂದಿನ ವಿಚಾರಣೆಯಂದು ಪೊಲೀಸರು ಕೇಸ್ ಡೈರಿ ಹಾಜರುಪಡಿಸಲು ವಿಫಲವಾದರೆ, ಆರೋಪಿಗಳಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸುವುದಾಗಿ ಸಿಂಗ್ ಹೇಳಿದರು.
ರಾಮಮಂದಿರದಲ್ಲಿ ಭಕ್ತರು ಅರ್ಪಿಸಿದ ನಗದು ಮತ್ತು ಬೆಲೆಬಾಳುವ ವಸ್ತುಗಳ ದುರುಪಯೋಗಕ್ಕೆ ಸಂಬಂಧಿಸಿದ್ದಾಗಿದೆ ಈ ಪ್ರಕರಣ. ತನಿಖಾಧಿಕಾರಿಗಳು ಇದುವರೆಗೆ 79.85 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.
ಆರೋಪಿಗಳಲ್ಲಿ ಹೆಚ್ಚಿನವರು ದೇವಸ್ಥಾನದಲ್ಲಿ ನಗದು ದೇಣಿಗೆ ಎಣಿಕೆಗಾಗಿ ನಿಯೋಜಿಸಲ್ಪಟ್ಟ ಬ್ಯಾಂಕ್ ಉದ್ಯೋಗಿಗಳಾಗಿದ್ದರೆ, ಶ್ರೀವಾಸ್ತವ ಅವರು ದೇಣಿಗೆ ಎಣಿಕೆ ಪ್ರಕ್ರಿಯೆಯ ಉಸ್ತುವಾರಿಯಾಗಿದ್ದರು. ಟಿನ್ನು ಯಾದವ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು.
ತಮ್ಮ ಜಾಮೀನು ಅರ್ಜಿಯಲ್ಲಿ, ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಶ್ರೀವಾಸ್ತವ ತಿಳಿಸಿದ್ದು, ದೇಣಿಗೆ ಎಣಿಕೆ ಪ್ರಕ್ರಿಯೆಯ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಬಂಧಿತ ಎಂಟು ಆರೋಪಿಗಳಲ್ಲದೆ, ಎಣಿಕೆ ಪ್ರಕ್ರಿಯೆಯಲ್ಲಿ ಇತರ ಹಲವರು ಭಾಗಿಯಾಗಿದ್ದಾರೆ ಎಂದು ಅವರು ವಾದಿಸಿದ್ದಾರೆ ಎಂದು ಅವರ ವಕೀಲರು ತಿಳಿಸಿದ್ದಾರೆ.


