ಸರ್ಕಾರಿ ಇಲಾಖೆಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರ ಹೊಸ ಕನಿಷ್ಠ ವೇತನವನ್ನು ತಡೆಹಿಡಿದಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೊಸ ವೇತನ ನೀಡುವುದನ್ನು ಅಮಾನತಿನಲ್ಲಿಟ್ಟಿದ್ದ ಸರ್ಕಾರದ ಮೂರು ಪ್ರಮುಖ ಸುತ್ತೋಲೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ಹೊರಡಿಸಿದೆ.
ರಾಜ್ಯ ಸರ್ಕಾರವು ಕಳೆದ ಮೇ 22, 2026 ರಂದು 83 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನವನ್ನು ಪರಿಷ್ಕರಿಸಿ ಅಧಿಸೂಚನೆ (KAEE 411 LDW 2023) ಹೊರಡಿಸಿತ್ತು. ಇದರ ಬೆನ್ನಲ್ಲೇ ಹಲವು ಸರ್ಕಾರಿ ಇಲಾಖೆಗಳು ಹೊಸ ದರದಂತೆ ವೇತನ ಪಾವತಿಸಲು ಆರಂಭಿಸಿದ್ದವು. ಆದರೆ, ಹಣಕಾಸು ಇಲಾಖೆಯು ಹೆಚ್ಚುವರಿ ಹಣಕಾಸಿನ ಹೊರೆಯ ನೆಪವೊಡ್ಡಿ ಜುಲೈ 15, 2026 ರಂದು ಆಕ್ಷೇಪಣೆ ಎತ್ತಿ, ಪರಿಷ್ಕೃತ ವೇತನ ಸ್ಥಗಿತಗೊಳಿಸಲು ಶಿಫಾರಸು ಮಾಡಿತ್ತು.
ಹಣಕಾಸು ಇಲಾಖೆಯ ಈ ಸೂಚನೆಯನ್ನೇ ನೆಪವಾಗಿಟ್ಟುಕೊಂಡು ಕರ್ನಾಟಕ ರಾಜ್ಯ ಲೆಕ್ಕಪರಿಶೋಧನೆ ಮತ್ತು ಲೆಕ್ಕ ಇಲಾಖೆ (ಜುಲೈ 29), ಪೌರಾಡಳಿತ ನಿರ್ದೇಶನಾಲಯ (ಆಗಸ್ಟ್ 10) ಹಾಗೂ ಪಂಚಾಯತ್ ರಾಜ್ ಇಲಾಖೆ (ಆಗಸ್ಟ್ 28) ತಮ್ಮ ವ್ಯಾಪ್ತಿಯ ದಿನಗೂಲಿ, ಹೊರಗುತ್ತಿಗೆ, ಪೌರಕಾರ್ಮಿಕರು ಹಾಗೂ ಗ್ರಾಮ ಪಂಚಾಯತಿ ನೌಕರರಿಗೆ ಹಳೆಯ ದರದಲ್ಲೇ ವೇತನ ನೀಡುವಂತೆ ಸುತ್ತೋಲೆ ಹೊರಡಿಸಿದ್ದವು.
ಕಾರ್ಮಿಕರ ಕಾನೂನಾತ್ಮಕ ಹಕ್ಕನ್ನು ಕಸಿದುಕೊಳ್ಳುವ ಈ ಸರ್ಕಾರದ ಸುತ್ತೋಲೆಗಳನ್ನು ಪ್ರಶ್ನಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ರಾಜ್ಯ ಸಮಿತಿ ಹಾಗೂ ಅದರ ಸಂಯೋಜಿತ ನಾಲ್ಕು ಕಾರ್ಮಿಕ ಸಂಘಟನೆಗಳು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ (WP 29564/2026) ದಾಖಲಿಸಿದ್ದವು. ಅರ್ಜಿದಾರರ ಪರವಾಗಿ ವಕೀಲ ಎಲ್. ಮುರಳೀಧರ ಪೇಶ್ವಾ ವಾದ ಮಂಡಿಸಿದ್ದರು.
ಶುಕ್ರವಾರ (ಸೆಪ್ಟೆಂಬರ್ 18, 2026) ಈ ಅರ್ಜಿಯ ವಿಚಾರಣೆ ನಡೆಸಿದ ಮಾನ್ಯ ನ್ಯಾಯಮೂರ್ತಿ ಎಚ್.ಟಿ. ನರೇಂದ್ರ ಪ್ರಸಾದ್ ಅವರ ಪೀಠವು, ಕನಿಷ್ಠ ವೇತನ ತಡೆಹಿಡಿದಿದ್ದ ಮೂರೂ ಇಲಾಖೆಗಳ ಸುತ್ತೋಲೆಗಳಿಗೆ ತಡೆಯಾಜ್ಞೆ ನೀಡಿದೆ. ಈ ಮಹತ್ವದ ಮಧ್ಯಂತರ ಆದೇಶದಿಂದಾಗಿ ಸರ್ಕಾರದ ಮೂರು ಇಲಾಖೆಗಳ ಸುತ್ತೋಲೆಗಳಿಗೆ ತಡೆ ಬಿದ್ದಿದ್ದು, ಮೇ 22ರ ಅಧಿಸೂಚನೆಗೊಳಪಡುವ ಎಲ್ಲಾ ಕಾರ್ಮಿಕರು ಪರಿಷ್ಕೃತ ಹೊಸ ಕನಿಷ್ಠ ವೇತನ ಪಡೆಯಲು ಅರ್ಹರಾಗಿದ್ದಾರೆ.
ಇತ್ತೀಚೆಗಷ್ಟೇ, ಅಂದರೆ ಸೆಪ್ಟೆಂಬರ್ 8, 2026ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ (ವಿಧಾನಸೌಧ ಚಲೋ) ಯಶಸ್ವಿಯಾಗಿ ನಡೆದಿತ್ತು. ಈ ಬೃಹತ್ ಜನಾಂದೋಲನದಲ್ಲಿ ಅಂಗನವಾಡಿ, ಆಶಾ, ಬಿಸಿಯೂಟ ಯೋಜನೆಗಳ ಕಾರ್ಯಕರ್ತೆಯರು ಸೇರಿದಂತೆ ಸಂಘಟಿತ ಮತ್ತು ಅಸಂಘಟಿತ ವಲಯದ ಸುಮಾರು 20,000ಕ್ಕೂ ಹೆಚ್ಚು ಕಾರ್ಮಿಕರು ಬೀದಿಗಿಳಿದು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು.

ತಮ್ಮ ನ್ಯಾಯಯುತ ಕನಿಷ್ಠ ವೇತನಕ್ಕಾಗಿ ಬೀದಿಗಿಳಿದು ಹೋರಾಡಿದ್ದ ಕಾರ್ಮಿಕರಿಗೆ, ಇದೀಗ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆಯಾಜ್ಞೆಯ ಆದೇಶವು ಹೊಸ ಭರವಸೆಯ ಬೆಳಕನ್ನು ನೀಡಿದೆ. ಸರ್ಕಾರದ ಮೂರು ಸುತ್ತೋಲೆಗಳಿಗೆ ಹೈಕೋರ್ಟ್ ತಡೆ ನೀಡಿರುವುದು ಕಾರ್ಮಿಕ ಸಂಘಟನೆಗಳ ಕಾನೂನು ಹೋರಾಟಕ್ಕೆ ಸಿಕ್ಕ ಮೊದಲ ಜಯವಾಗಿದೆ. ಆದಾಗ್ಯೂ, ಸೆಪ್ಟೆಂಬರ್ 21 ರಂದು ನಡೆಯಲಿರುವ ಮುಂದಿನ ವಿಚಾರಣೆಯಲ್ಲಿ ಹೈಕೋರ್ಟ್ ಯಾವ ಅಂತಿಮ ನಿರ್ಧಾರ ತಳೆಯಲಿದೆ ಹಾಗೂ ಈ ಆದೇಶದ ಬೆನ್ನಲ್ಲೇ ರಾಜ್ಯ ಸರ್ಕಾರ ಕಾರ್ಮಿಕರ ಬೇಡಿಕೆಗಳಿಗೆ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.


