ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ ಎಂದು ವರದಿಯಾಗಿದೆ.
“ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಬಣದ ರೆಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಭ್ಯರ್ಥಿಯಾದ ರಬಿಯುಲ್ ಆಲಂ ಚೌಧರಿ ಅವರು ತಮ್ಮ ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.”
“ಪಕ್ಷದ ಸಾಂಪ್ರದಾಯಿಕ ಮತ್ತು ಅಧಿಕೃತ ಚುನಾವಣಾ ಚಿಹ್ನೆಯಾದ ‘ಜೋಡಾ ಘಾಸ್ ಫುಲ್’ (ಹುಲ್ಲಿನ ಮೇಲಿನ ಜೋಡಿ ಹೂವುಗಳು) ಅನ್ನು ಪಡೆಯಲು ಸಾಧ್ಯವಾಗದಿರುವುದೇ ತಾವು ಹಿಂದೆ ಸರಿಯಲು ಮುಖ್ಯ ಕಾರಣ ಎಂದು ಅವರು ಉಲ್ಲೇಖಿಸಿದ್ದಾರೆ” ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ಕಾರ್ಯಕರ್ತರಿಗೆ ಮುಕ್ತವಾಗಿ ಮನೆಮನೆ ಪ್ರಚಾರ ಮಾಡಲು ಬಿಡುತ್ತಿಲ್ಲ ಮತ್ತು ಅವರ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ, ಅಷ್ಟೇ ಅಲ್ಲದೆ ಈಗಾಗಲೇ ಹಲವು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ರಬಿಯುಲ್ ಆಲಂ ಚೌಧರಿ ಅವರು ಆರೋಪಿಸಿದ್ದಾರೆ ಎಂದು newindianexpress.com ವರದಿ ಉಲ್ಲೇಖಿಸಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಣದ ನಂದಿಗ್ರಾಮ ಉಪಚುನಾವಣೆಯ ಅಭ್ಯರ್ಥಿ ಸಂಚಿತಾ ಪ್ರಧಾನ್ ಡೇ ಅವರು ಶುಕ್ರವಾರ (ಸೆ.18) ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದರು. ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರ ಕೈಗೊಂಡಿದ್ದರು. ಈ ಘಟನೆ ನಡೆದ ಮರುದಿನವೇ ಚೌಧರಿ ಅವರು ಕೂಡ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಶಿಕ್ಷಕಿಯಾಗಿರುವ ಸಂಚಿತಾ ಪ್ರಧಾನ್ ಡೇ ಅವರು ತಮ್ಮ ಪತಿ ಸತ್ಯಜಿತ್ ಅವರೊಂದಿಗೆ ಶುಕ್ರವಾರ ಮಧ್ಯಾಹ್ನ ರಾಜ್ಯ ಸಚಿವಾಲಯವಾದ ನಬನ್ನಾದಲ್ಲಿ ಮುಖ್ಯಮಂತ್ರಿ ಅಧಿಕಾರಿ ಅವರನ್ನು ಭೇಟಿ ಮಾಡಿದ್ದರು ವರದಿಯಾಗಿದೆ. ಈ ಭೇಟಿಯ ಬೆನ್ನಲ್ಲೇ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದು, ಇದರಿಂದಾಗಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ಗೆ ಯಾವುದೇ ಅಭ್ಯರ್ಥಿಯಿ ಇಲ್ಲದಂತಾಗಿದೆ.
ತನ್ನ ಪಕ್ಷದ ಅಭ್ಯರ್ಥಿ ಇಲ್ಲದ ಹಿನ್ನೆಲೆ, ಮಮತಾ ಬ್ಯಾನರ್ಜಿ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರಿಗೆ ಬೆಂಬಲ ಘೋಷಿಸಿತ್ತು. ಈ ಬೆನ್ನಲ್ಲೇ, ಹಳೆಯ ಕೊಲೆ ಪ್ರಕರಣವೊಂದರಲ್ಲಿ ಮಿಲನ್ ಪ್ರಧಾನ್ ಅವರನ್ನು ಬಂಧಿಸಲಾಗಿದ ಎಂದು ವರದಿಯಾಗಿದೆ.
ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್‌ನ ಎರಡೂ ಪ್ರತಿಸ್ಪರ್ಧಿ ಬಣಗಳು ‘ಅಖಿಲ ಭಾರತ ತೃಣಮೂಲ ಕಾಂಗ್ರೆಸ್’ ಎಂಬ ಹೆಸರನ್ನು ಹಾಗೂ ಪಕ್ಷದ ಸಾಂಪ್ರದಾಯಿಕ ‘ಹುಲ್ಲಿನ ಮೇಲಿನ ಜೋಡಿ ಹೂವು’ (ಜೋಡಾ ಘಾಸ್ ಫುಲ್) ಚಿಹ್ನೆಯನ್ನು ಬಳಸದಂತೆ ನಿಷೇಧಿಸಿದ ನಂತರ, ನಂದಿಗ್ರಾಮ ಚುನಾವಣಾ ಕಣವು ನಾಟಕೀಯವಾಗಿ ಬದಲಾಗುತ್ತಿರುವ ನಡುವೆಯೇ ಈ ಮಹತ್ವದ ಬೆಳವಣಿಗೆ ನಡೆದಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಚುನಾವಣಾ ಆಯೋಗವು ಶುಕ್ರವಾರ “ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್” ಎಂಬ ಹೆಸರು ಹಾಗೂ ‘ಫುಟ್‌ಬಾಲ್ ಆಟಗಾರ’ನ ಹೊಸ ಚಿಹ್ನೆಯನ್ನು ಮಂಜೂರು ಮಾಡಿದೆ. ಇದೇ ವೇಳೆ, ಪ್ರತಿಸ್ಪರ್ಧಿ ಬಣಕ್ಕೆ “ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್” ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆಯನ್ನು ಹಂಚಿಕೆ ಮಾಡಲಾಗಿದೆ.


