ಜನಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ನೀಡಿದ್ದಾರೆನ್ನಲಾದ ಹೇಳಿಕೆಯೊಂದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಸಚಿವರ ವಿರುದ್ಧ ಹಾಸನ ಜಿಲ್ಲಾ ಲೋಕಾಯುಕ್ತ ಕಚೇರಿಗೆ ವಕೀಲರು ದೂರು ಸಲ್ಲಿಸಿದ್ದಾರೆ.
ವಕೀಲ ಎಂ.ಡಿ. ಗೋಪಾಲಗೌಡ ನೇತೃತ್ವದ ನಿಯೋಗವು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಸಚಿವರು ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡುವಂತೆ ಸಾರ್ವಜನಿಕವಾಗಿ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿದೆ. ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸುವ ಹಾಗೂ ಲಂಚ ಪಡೆಯುವುದನ್ನು ಸಮರ್ಥಿಸುವ ರೀತಿಯಲ್ಲಿ ಸಚಿವರು ಮಾತನಾಡಿದ್ದು, ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಕೀಲರು ಒತ್ತಾಯಿಸಿದ್ದಾರೆ.
ಸಕಲೇಶಪುರದಲ್ಲಿ ನಡೆದ ಜನಸೇವಾ ಆಂದೋಲನ ಸಭೆಯಲ್ಲಿ ಮಾತನಾಡಿದ್ದ ಸಚಿವ ಶಿವಲಿಂಗೇಗೌಡ, “ಅಧಿಕಾರಿಗಳು ಬಲವಂತವಾಗಿ ಲಂಚ ವಸೂಲಿ ಮಾಡುವುದು ತಪ್ಪು, ಆದರೆ ಕೆಲಸ ಮಾಡಿಕೊಟ್ಟ ಅಧಿಕಾರಿಗಳಿಗೆ ಸಾರ್ವಜನಿಕರು ಗೌರವದಿಂದ ಏನಾದರೂ ನೀಡುವುದು ಅವರ ಕರ್ತವ್ಯ” ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಸಚಿವರ ಈ ಮಾತಿನ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಹಾಗೂ ಚರ್ಚೆಗೆ ಗ್ರಾಸವಾಗಿದೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರಿಗೆ ದೂರು ಸಲ್ಲಿಸಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ, 1988ರ ಸೆಕ್ಷನ್ 7, 8 ಮತ್ತು 12ರ ಅಡಿಯಲ್ಲಿ ಸಚಿವರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಕೈಗೊಂಡು, ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ.
ಆದರೆ ತಮ್ಮ ಹೇಳಿಕೆ ವಿವಾದಕ್ಕೆ ಈಡಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸಚಿವ ಕೆ.ಎಂ. ಶಿವಲಿಂಗೇಗೌಡ, “ನಾನು ಸಾರ್ವಜನಿಕರಿಗೆ ಅಥವಾ ರೈತರಿಗೆ ಅಧಿಕಾರಿಗಳಿಗೆ ಲಂಚ ನೀಡುವಂತೆ ಎಲ್ಲೂ ಹೇಳಿಲ್ಲ. ರೈತರು ಮತ್ತು ಅಧಿಕಾರಿಗಳ ನಡುವಿನ ಚರ್ಚೆಯ ಸಂದರ್ಭದಲ್ಲಿ, ಸರ್ಕಾರಿ ಅಧಿಕಾರಿಗಳನ್ನು ಗೌರವದಿಂದ ಕಾಣಬೇಕು ಎಂದಷ್ಟೇ ಹೇಳಿದ್ದೇನೆ ಹೊರತು ಲಂಚ ನೀಡಲು ಯಾವುದೇ ರೀತಿಯ ಪ್ರಚೋದನೆ ನೀಡಿಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ.


