ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಹೆಸರಿನಲ್ಲಿ ದೇಶದ ಪ್ರಜೆಗಳ ಮತದಾನದ ಹಕ್ಕನ್ನೇ ಕಸಿಯಲಾಗುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2002ರ ಮತದಾರರ ಪಟ್ಟಿಯೊಂದಿಗೆ ಹೆಸರು ಹೊಂದಾಣಿಕೆಯಾಗದೇ ಇರುವುದು ಸೇರಿದಂತೆ ಹಲವು ತಾಂತ್ರಿಕ ನೆಪಗಳನ್ನು ಒಡ್ಡಿ, ದೆಹಲಿ ಒಂದರಲ್ಲೇ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಪ್ರಮುಖ ವ್ಯಕ್ತಿಗಳು ಸೇರಿದಂತೆ ಬರೋಬ್ಬರಿ 32 ಲಕ್ಷಕ್ಕೂ ಹೆಚ್ಚು ಮಂದಿಗೆ ನೋಟಿಸ್ ಜಾರಿ ಮಾಡಿರುವುದನ್ನು ಕಾಂಗ್ರೆಸ್ ಉಗ್ರವಾಗಿ ಪ್ರಶ್ನಿಸಿದೆ.
ಆಯೋಗದ ಈ ಧೋರಣೆಯನ್ನು ತೀವ್ರವಾಗಿ ಆಕ್ಷೇಪಿಸಿರುವ ಖರ್ಗೆ, “ಬಿಹಾರದಿಂದ ಆರಂಭವಾದ ಈ ಎಸ್‌ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ದೋಷಪೂರಿತವಾಗಿದೆ. ಇದು ಕೇವಲ ಮತ ಕಳವಿನ ಅಥವಾ ಪ್ರಜಾಪ್ರಭುತ್ವವನ್ನು ಕೆಡವುವ ಬಿಜೆಪಿ ಅಸ್ತ್ರವಷ್ಟೇ ಅಲ್ಲ, ಬದಲಿಗೆ ಇದೀಗ ಸ್ವತಃ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ನುಂಗಿಹಾಕಲು ಹೊರಟಿರುವ ‘ಫ್ಯಾಂಕೆನ್‌ಸ್ಟೈನ್ ದೈತ್ಯ’ವಾಗಿ ಮಾರ್ಪಟ್ಟಿದೆ” ಎಂದು ಖಾರವಾಗಿ ವ್ಯಾಖ್ಯಾನಿಸಿದ್ದಾರೆ. ಭಾರತೀಯರ ಮೂಲಭೂತ ಹಾಗೂ ಸಾಂವಿಧಾನಿಕ ಹಕ್ಕನ್ನು ಕಸಿದುಕೊಳ್ಳುವ ಮೂಲಕ ಚುನಾವಣಾ ಆಯೋಗವು ಸಾರ್ವಜನಿಕರನ್ನು ಕತ್ತಲೆಗೆ ತಳ್ಳುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಅಷ್ಟೇ ಅಲ್ಲದೆ, ಪ್ರಮುಖ ವ್ಯಕ್ತಿಗಳಿಗೆ ನೋಟಿಸ್ ನೀಡಿದ ವಿಚಾರವಾಗಿ ಚುನಾವಣಾ ಆಯೋಗವು ಅಧಿಕೃತವಾಗಿ ‘ವಿಐಪಿ ಹಾಗೂ ಸಾಮಾನ್ಯ ಮತದಾರರು’ ಎಂಬ ಪದಬಳಕೆ ಮಾಡಿ ಪತ್ರಿಕಾ ಪ್ರಕಟಣೆ ಹೊರಡಿಸಿರುವುದನ್ನು ಖರ್ಗೆ ತೀವ್ರವಾಗಿ ತೊಳೆಯಲಿದ್ದಾರೆ. ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ ಇರುವ ಭಾರತದಲ್ಲಿ ಮತದಾರರ ನಡುವೆ ವಿಐಪಿ ಮತ್ತು ಸಾಮಾನ್ಯ ಎಂಬ ತಾರತಮ್ಯ ಹುಟ್ಟುಹಾಕುವುದು ಸಂವಿಧಾನದ ಮೂಲ ಆಶಯಕ್ಕೇ ಎಸೆದ ಸವಾಲಾಗಿದೆ. “ಒಬ್ಬ ವ್ಯಕ್ತಿ, ಒಂದು ಮತ, ಒಂದೇ ಮೌಲ್ಯ” ಎಂಬ ಸಂವಿಧಾನದ ಪವಿತ್ರ ತತ್ವವನ್ನು ಈ ಮೂಲಕ ಚುನಾವಣಾ ಆಯೋಗವೇ ಬಹಿರಂಗವಾಗಿ ಉಲ್ಲಂಘಿಸುತ್ತಿದೆಯೇ? ದೇಶದಲ್ಲಿ ಈಗ ವಿಐಪಿಗಳ ಮತಕ್ಕೆ ಹೆಚ್ಚಿನ ಮೌಲ್ಯ ಬಂದಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.


