ಉತ್ತರ ಪ್ರದೆಶದ ಪ್ರತಾಪ್‌ಗಢದ ಪಟ್ಟಿ ಪೊಲೀಸ್ ಠಾಣೆಯ ತನಿಖಾ ಕೊಠಡಿಯ ಶೌಚಾಲಯದಲ್ಲಿ ಸೋಮವಾರ ಮುಂಜಾನೆ 22 ವರ್ಷದ ದಲಿತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರತಾಪ್‌ಗಢ ಎಸ್‌ಪಿ, ಕರ್ತವ್ಯಲೋಪದ ಆರೋಪದ ಮೇಲೆ ಪಟ್ಟಿ ಠಾಣಾಧಿಕಾರಿ ಆನಂದ್ ಪಾಲ್ ಸಿಂಗ್ ಮತ್ತು ಸಬ್‌ಇನ್ಸ್‌ಪೆಕ್ಟರ್ ಓಂಕಾರ್ ಸಿಂಗ್ ಅವರನ್ನು ಅಮಾನತುಗೊಳಿಸಿದ್ದಾರೆ.
ಅಪ್ರಾಪ್ತ ಬಾಲಕಿಯ ಅಪಹರಣ ಪ್ರಕರಣದಲ್ಲಿ ಬೇಕಾಗಿದ್ದ ಅರ್ಜುನ್ ಅಲಿಯಾಸ್ ಶೈಲೇಶ್‌ನನ್ನು ಭಾನುವಾರ ಬಂಧಿಸಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ಸೋಮವಾರ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿತ್ತು. ಮಾಹಿತಿ ತಿಳಿದ ತಕ್ಷಣ ಎಸ್‌ಪಿ (ಪ್ರತಾಪ್‌ಗಢ) ದೀಪಕ್ ಭುಕರ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ತಜ್ಞರು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು.
“ಆರೋಪಿಯು ಶೌಚಾಲಯಕ್ಕೆ ಹೋಗುವ ನೆಪದಲ್ಲಿ ಠಾಣೆಯ ಆವರಣದಲ್ಲಿದ್ದ ಶೌಚಾಲಯಕ್ಕೆ ತೆರಳಿ ನೇಣು ಬಿಗಿದುಕೊಂಡಿದ್ದಾನೆ” ಎಂದು ಹೆಚ್ಚುವರಿ ಎಸ್‌ಪಿ (ಪ್ರತಾಪ್‌ಗಢ ಪೂರ್ವ) ಅಲೋಕ್ ಕುಮಾರ್ ತಿಳಿಸಿದ್ದಾರೆ.
17 ವರ್ಷದ ತನ್ನ ತಂಗಿಯನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ ಸಹೋದರ ಜುಲೈ 11ರಂದು ಮೊಲ್ನಾಪುರ ನಿವಾಸಿ ಅರ್ಜುನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 137(2) ಮತ್ತು 87ರ ಅಡಿ ಮೊದಲ ಎಫ್‌ಐಆರ್ ದಾಖಲಿಸಿದ್ದನು ಎಂದು ಅವರು ಹೇಳಿದರು.
ಪೊಲೀಸರು ಬಾಲಕಿಯನ್ನು ಹೈದರಾಬಾದ್‌ನಲ್ಲಿ ಪತ್ತೆಹಚ್ಚಿದರು. ಕುಟುಂಬ ಸದಸ್ಯರು ಬೈದಿದ್ದರಿಂದ ತಾನು ಮನೆ ಬಿಟ್ಟು ಬಂದಿದ್ದಾಗಿ ಆಕೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಳು. ಈ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ಸಾಬೀತಾಗಿರಲಿಲ್ಲ.
ಆದರೂ, ಆಗಸ್ಟ್ 16ರಂದು ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಆರೋಪಿಸಿ ಬಾಲಕಿಯ ತಂದೆ ಆಗಸ್ಟ್ 17ರಂದು ಅರ್ಜುನ್ ವಿರುದ್ಧ ಬಿಎನ್‌ಎಸ್ ಸೆಕ್ಷನ್ 137(2)ರ ಅಡಿಯಲ್ಲಿ ಮತ್ತೊಂದು ಎಫ್‌ಐಆರ್ ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪಟ್ಟಿ ಪೊಲೀಸರ ತಂಡವು, ಘಾಜಿಯಾಬಾದ್‌ನಲ್ಲಿ ಅರ್ಜುನ್ ಮತ್ತು ಬಾಲಕಿಯನ್ನು ಪತ್ತೆಹಚ್ಚಿ ಭಾನುವಾರ ಪಟ್ಟಿ ಪೊಲೀಸ್ ಠಾಣೆಗೆ ಕರೆತಂದಿತ್ತು.
ಬಾಲಕಿಯನ್ನು ‘ಒನ್-ಸ್ಟಾಪ್ ಸೆಂಟರ್’ಗೆ ಕಳುಹಿಸಲಾಗಿತ್ತು, ಯುವಕನನ್ನು ತನಿಖಾ ಕೊಠಡಿಯಲ್ಲಿ ಇರಿಸಲಾಗಿತ್ತು.


