ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ರೆಜಿನಗರ ಕ್ಷೇತ್ರಗಳ ಮುಂಬರುವ ಉಪಚುನಾವಣೆಯನ್ನು ಅಲ್ಪಸಂಖ್ಯಾತರಿಗೆ ಒಂದು ‘ಪರೀಕ್ಷೆ’ ಎಂದು ಕರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ವಿವಾದ ಹಾಗೂ ಕಳವಳಕ್ಕೆ ಕಾರಣವಾಗಿದೆ.
ನಂದಿಗ್ರಾಮ ಕ್ಷೇತ್ರದಲ್ಲಿ ಶೇಕಡಾ 26ರಷ್ಟು ಮತ್ತು ರೆಜಿನಗರ ಕ್ಷೇತ್ರದಲ್ಲಿ ಶೇಕಡಾ 65ರಷ್ಟು ಬೃಹತ್ ಪ್ರಮಾಣದ ಮುಸ್ಲಿಂ ಜನಸಂಖ್ಯೆಯಿದೆ. ಈ ವರ್ಷದ ಆರಂಭದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಸುವೇಂದು ಅಧಿಕಾರಿ (ನಂದಿಗ್ರಾಮ ಮತ್ತು ಭವಾನಿಪುರ) ಹಾಗೂ ಆಮ್ ಜನತಾ ಉನ್ನಯನ್ ಪಾರ್ಟಿ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್ (ರೆಜಿನಗರ ಮತ್ತು ನೌದಾ) ಅವರು ತಲಾ ಒಂದೊಂದು ಕ್ಷೇತ್ರಗಳನ್ನು ತೆರವುಗೊಳಿಸಿದ್ದರಿಂದ ಅಕ್ಟೋಬರ್ 6 ರಂದು ಈ ಉಪಚುನಾವಣೆ ಎದುರಾಗಿದೆ. ಸುವೇಂದು ಅಧಿಕಾರಿ ಕೊಲ್ಕತ್ತಾದ ಭವಾನಿಪುರ ಕ್ಷೇತ್ರವನ್ನು ಹಾಗೂ ಕಬೀರ್ ಮುರ್ಷಿದಾಬಾದ್ನ ನೌದಾ ಕ್ಷೇತ್ರವನ್ನು ಉಳಿಸಿಕೊಂಡಿದ್ದಾರೆ.
ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಹಸಿರಾಣಿ ರಥ್ ಅವರು, ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ತಾಯಿಯಾಗಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದ ಎರಡೇ ದಿನಗಳಲ್ಲಿ ಅಂದರೆ ಮೇ 6 ರಂದು ಮಧ್ಯಮಗ್ರಾಮದಲ್ಲಿ ಚಂದ್ರನಾಥ್ ಅವರನ್ನು ಹತ್ಯೆ ಮಾಡಲಾಗಿತ್ತು, ಈ ಕೊಲೆಗೆ ಸಂಬಂಧಿಸಿದಂತೆ ಸಿಬಿಐ 11 ಜನರ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಸೆಪ್ಟೆಂಬರ್ 15 ಮಂಗಳವಾರದಂದು ಹಲ್ದಿಯಾದಲ್ಲಿ ಹಸಿರಾಣಿ ರಥ್ ಅವರ ನಾಮಪತ್ರ ಸಲ್ಲಿಕೆ ವೇಳೆ ಸುವೇಂದು ಅಧಿಕಾರಿ ನಾಯಕತ್ವದಲ್ಲಿ ಬೃಹತ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಅಧಿಕಾರಿ, “ನಂದಿಗ್ರಾಮ ಮತ್ತು ರೆಜಿನಗರದ ಅಲ್ಪಸಂಖ್ಯಾತರಿಗೆ ಒಂದು ವಿನಂತಿಯೊಂದಿಗೆ ಮುಗಿಸುತ್ತೇನೆ. ನಿಮ್ಮ ಮುಂದೆ ಒಂದು ಆಯ್ಕೆಯಿದೆ, ನೀವು ಸರ್ಕಾರದ ಜೊತೆ ಇರಲು ಬಯಸುತ್ತೀರೋ ಇಲ್ಲವೋ? ಸರ್ಕಾರದ ಜೊತೆಗಿದ್ದು ಮುಖ್ಯಮಂತ್ರಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಲು ಬಯಸುವುದಾದರೆ ಅಕ್ಟೋಬರ್ 6 ರಂದು ನಿಮಗೆ ಪರೀಕ್ಷೆಯಿದೆ. ಈ ಪರೀಕ್ಷೆಯಲ್ಲಿ ನೀವು ಪಾಸ್ ಆಗುತ್ತೀರೋ ಅಥವಾ ಫೇಲ್ ಆಗುತ್ತೀರೋ ಎಂಬುದು ಸಂಪೂರ್ಣ ನಿಮಗೆ ಸೇರಿದ್ದು. ನಾವಂತೂ ಈಗಾಗಲೇ ಗೆಲ್ಲುತ್ತಿದ್ದೇವೆ, ಮುಂದೆ ಗೆಲ್ಲುತ್ತೇವೆ, ಆತಂಕದ ಅಗತ್ಯವಿಲ್ಲ” ಎಂದು ಹೇಳಿದ್ದರು.
ಮುಖ್ಯಮಂತ್ರಿಯೊಬ್ಬರಿಂದ ಬಂದಿರುವ ಈ ಹೇಳಿಕೆಯು ಸಾಂವಿಧಾನಿಕವಾಗಿ ಅತ್ಯಂತ ಕಳವಳಕಾರಿಯಾಗಿದೆ. ಸಂವಿಧಾನದ ಪ್ರಕಾರ ಸರ್ಕಾರ ಮತ್ತು ಮುಖ್ಯಮಂತ್ರಿ ತಮಗೆ ಮತ ಹಾಕಲಿ ಅಥವಾ ಹಾಕದಿರಲಿ ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾಗಿ ಸೇವೆ ಸಲ್ಲಿಸಬೇಕಾಗುತ್ತದೆ. ಆದರೆ ಇಲ್ಲಿ ಸುವೇಂದು ಅಧಿಕಾರಿ ಅಲ್ಪಸಂಖ್ಯಾತರನ್ನು ಪ್ರತ್ಯೇಕ ಗುಂಪಾಗಿ ಬಿಂಬಿಸಿ, ಸರ್ಕಾರದ ಜೊತೆ ಇರಬೇಕಾದರೆ ‘ಪರೀಕ್ಷೆ’ಯಲ್ಲಿ ಉತ್ತೀರ್ಣರಾಗಬೇಕು ಎಂಬ ಷರತ್ತು ವಿಧಿಸಿದ್ದಾರೆ. ಇದು ಸರ್ಕಾರದ ಬೆಂಬಲ ಎಂಬುದು ಪ್ರತಿಯೊಬ್ಬ ನಾಗರಿಕನ ಹಕ್ಕು ಎಂಬುದಕ್ಕಿಂತ ಹೆಚ್ಚಾಗಿ, ನಿರ್ದಿಷ್ಟ ಪಕ್ಷಕ್ಕೆ ಮತ ಹಾಕಿದ್ದಕ್ಕೆ ಸಿಗುವ ‘ಬಹುಮಾನ’ ಅಥವಾ ರಾಜಕೀಯ ವಿಧೇಯತೆಗೆ ನೀಡುವ ‘ಕಾಣಿಕೆ’ ಎನ್ನುವಂತೆ ಬಿಂಬಿಸುತ್ತದೆ.
ಅಷ್ಟೇ ಅಲ್ಲದೆ, ‘ಪಾಸ್ ಅಥವಾ ಫೇಲ್ ಆಗುವುದು ನಿಮಗೆ ಸೇರಿದ್ದು’ ಎನ್ನುವುದು ನೇರ ಬೆದರಿಕೆಯಂತೆ ಕೇಳಿಸುತ್ತಿದ್ದು, ಧ್ರುವೀಕರಣವನ್ನು ಮತ್ತಷ್ಟು ಹೆಚ್ಚಿಸುವ ಅಪಾಯವಿದೆ. ಇದು ಅಲ್ಪಸಂಖ್ಯಾತರ ನಿಷ್ಠೆಯನ್ನು ಸಾಬೀತುಪಡಿಸಬೇಕಾದ ಸ್ಥಿತಿಗೆ ತಳ್ಳುತ್ತದೆ ಮತ್ತು ಇತರರು ಅವರನ್ನು ಸಂಶಯದಿಂದ ನೋಡುವಂತೆ ಪ್ರಚೋದಿಸುತ್ತದೆ. ತಮ್ಮ ಮತದ ಆಧಾರದ ಮೇಲೆಯೇ ತಮ್ಮ ಭವಿಷ್ಯ ನಿಂತಿದೆ ಎಂದು ಸಮುದಾಯಕ್ಕೆ ಹೇಳಿದಾಗ, ಮುಖ್ಯಮಂತ್ರಿಯ ಅಡಿಯಲ್ಲಿ ಕೆಲಸ ಮಾಡುವ ಪೊಲೀಸ್ ಮತ್ತು ಆಡಳಿತ ಯಂತ್ರವು ನಾಳೆ ತಮ್ಮನ್ನು ಭಿನ್ನವಾಗಿ ನಡೆಸಿಕೊಳ್ಳಬಹುದು ಎಂಬ ಭೀತಿ ಅವರಲ್ಲಿ ಉಂಟಾಗುವುದು ಸಹಜ.
‘ಗಾಜಾ ಮಾದರಿಯ ಪಾಠ’ ಕಳಿಸುವುದರಿಂದ ಹಿಡಿದು ‘ಎಲ್ಲರ ಮುಖ್ಯಮಂತ್ರಿ’ ಎಂಬವರೆಗಿನ ಸುವೇಂದು ಅವರ ಈ ಹೇಳಿಕೆಯು, ಏಪ್ರಿಲ್ ಚುನಾವಣೆಗೆ ಮೊದಲು ಮತ್ತು ಗೆಲುವಿನ ನಂತರ ಅವರು ನೀಡಿದ್ದ ಧ್ರುವೀಕರಣದ ಭಾಷಣಗಳಿಗೇ ಮುಂದುವರಿದ ಭಾಗವಾಗಿದೆ. ಡಿಸೆಂಬರ್ 2025ರಲ್ಲೇ ಅಧಿಕಾರಿ, “ಮುಸ್ಲಿಮರು ನೌಶಾದ್ ಸಿದ್ದಿಕಿ ಮತ್ತು ಹುಮಾಯೂನ್ ಕಬೀರ್ ಪರವಾಗಿದ್ದಾರೆ, ಹಿಂದೂಗಳು ಮತ್ತು ಆದಿವಾಸಿಗಳು ಮೋದಿಜಿಯವರ ಪರವಾಗಿದ್ದಾರೆ” ಎಂದು ಧಾರ್ಮಿಕ ಗುರುತಿನ ಆಧಾರದಲ್ಲೇ ಮತದಾರರನ್ನು ವಿಭಾಗಿಸಿದ್ದರು.
ಅಷ್ಟೇ ಅಲ್ಲದೆ, ಮೂರು ಬಾರಿಯ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ಭವಾನಿಪುರ ಕ್ಷೇತ್ರದ ಗೆಲುವಿನ ಪ್ರಮಾಣಪತ್ರ ಸ್ವೀಕರಿಸಿದ ನಂತರವೂ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸುವೇಂದು ಅಧಿಕಾರಿ, ಇದನ್ನು ಕೋಮುವಾದಿ ಚೌಕಟ್ಟಿನಲ್ಲೇ ಬಿಂಬಿಸಿದ್ದರು. ಭವಾನಿಪುರದ ಮುಸ್ಲಿಮರು ತಮಗೆ ಮತ ಹಾಕದೆ “ಹಿಜಾಬಿ ಮಮತಾ” ಪರ ನಿಂತರು ಎಂದಿದ್ದ ಅವರು; ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರು ತಮ್ಮ ಗೆಲುವನ್ನು ಖಚಿತಪಡಿಸಿದ್ದು, ಇದು “ಹಿಂದುತ್ವದ ಗೆಲುವು” ಎಂದು ಕರೆದಿದ್ದರು.
ಇನ್ನು ಜುಲೈ 2025ರಲ್ಲೇ ಕೊಲ್ಕತ್ತಾದ ಬಿಜೆಪಿ ಸಭೆಯಲ್ಲಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾವನ್ನು ವಿಸರ್ಜಿಸಬೇಕೆಂದು ಕರೆ ನೀಡಿದ್ದ ಅಂದಿನ ನಂದಿಗ್ರಾಮ ಶಾಸಕ ಸುವೇಂದು, ಪ್ರಧಾನಿ ಮೋದಿಯವರ ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಘೋಷಣೆಯನ್ನು ಖಂಡಿಸಿ, ‘ಜೋ ಹಮಾರೇ ಸಾಥ್, ಹುಮ್ ಉನ್ಕೆ ಸಾಥ್’ (ಯಾರು ನಮ್ಮ ಜೊತೆ ಇರುತ್ತಾರೋ, ನಾವು ಅವರ ಜೊತೆ ಮಾತ್ರ) ಎಂದು ಘೋಷಣೆ ಕೂಗಿದ್ದರು.
ಆದರೆ, ಪ್ರಮಾಣವಚನ ಸ್ವೀಕಾರದ ದಿನದಂದು ಬಂಗಾಳದ 9ನೇ ಮುಖ್ಯಮಂತ್ರಿಯಾಗಿ ಜೋರಾಸಂಕೋ ಠಾಕೂರ್ಬಾರಿಗೆ ಭೇಟಿ ನೀಡಿ ರವೀಂದ್ರನಾಥ ಟ್ಯಾಗೋರ್ ಅವರ 166ನೇ ಜಯಂತಿಗೆ ಗೌರವ ಸಲ್ಲಿಸಿದ್ದ ಅವರು, “ನಾನು ಎಲ್ಲರಿಗೂ ಸೇರಿದವನು” ಎಂದು ಎಲ್ಲರನ್ನೂ ಒಳಗೊಳ್ಳುವ ಸಂದೇಶ ನೀಡಲು ಯತ್ನಿಸಿದ್ದರು. ಆದರೆ ವಾಸ್ತವ ಸ್ಥಿತಿ ಭಿನ್ನವಾಗಿದೆ; ಕೊಲ್ಕತ್ತಾದ ಮುಸ್ಲಿಂ ಬಾಹುಳ್ಯದ ಚಿತ್ಪುರ ಜ್ಯೋತಿನಗರ ಕಾಲೋನಿಯಲ್ಲಿ ಕಳೆದ 50 ದಿನಗಳಿಂದ ಕುಡಿಯುವ ನೀರಿನ ಪೂರೈಕೆಯೇ ಇಲ್ಲದಂತಾಗಿದೆ.
ಕಾಸೀಪುರ-ಬೆಳಗಾಚಿಯಾ ಕ್ಷೇತ್ರದ ಬಿಜೆಪಿ ಶಾಸಕ ರಿತೇಶ್ ತಿವಾರಿ, “ನನಗೆ ಮತ ಹಾಕಿದವರಿಗೆ ಮಾತ್ರ ನನ್ನ ಮೇಲೆ ಹಕ್ಕಿದೆ, ನಮಗೆ ಮತ ಹಾಕದವರ ಬಳಿ ನಾವು ಕೆಲಸ ಮಾಡಲು ಹೋಗುವುದಿಲ್ಲ” ಎಂದು ಬಹಿರಂಗವಾಗಿಯೇ ಪ್ರಕಟಿಸಿದ್ದರು. 2026ರ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿ ಒಂದೇ ಒಂದು ಮುಸ್ಲಿಂ ಅಭ್ಯರ್ಥಿಗೂ ಟಿಕೆಟ್ ನೀಡಿರಲಿಲ್ಲ, ಹೀಗಾಗಿ ಆ ಪಕ್ಷದಿಂದ ಯಾವುದೇ ಮುಸ್ಲಿಂ ಶಾಸಕರೂ ಆಯ್ಕೆಯಾಗಿಲ್ಲ. ಪ್ರಸ್ತುತ ಬಿಜೆಪಿಗೆ ದೇಶಾದ್ಯಂತ ಒಬ್ಬನೇ ಒಬ್ಬ ಮುಸ್ಲಿಂ ಸಂಸದನಿಲ್ಲ ಹಾಗೂ ಇಡೀ ದೇಶದಲ್ಲೇ ಕೇವಲ ಇಬ್ಬರು ಮುಸ್ಲಿಂ ಶಾಸಕರಿದ್ದಾರೆ (ಮಣಿಪುರದ ಅಚಾಬ್ ಉದ್ದೀನ್ ಮತ್ತು ತ್ರಿಪುರಾದ ತಫಜ್ಜಲ್ ಹುಸೇನ್).


