ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿ, ಮುಖ್ಯ ಚುನಾವಣಾ ಆಯುಕ್ತ (CEC) ಗ್ಯಾನೇಶ್ ಕುಮಾರ್ ಅವರ ವಿರುದ್ಧ ಶಿಸ್ತು ಹಾಗೂ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ.
ಆಯೋಗದ ಮೂವರು ಸದಸ್ಯರ ಪೈಕಿ ಇಬ್ಬರು ಚುನಾವಣಾ ಆಯುಕ್ತರಾದ ಡಾ. ಸುಖಬೀರ್ ಸಿಂಗ್ ಸಂಧು ಮತ್ತು ಡಾ. ವಿವೇಕ್ ಜೋಶಿ ಅವರು ಎಸ್‌ಐಆರ್ ಪ್ರಕ್ರಿಯೆಯ ಹಲವು ನಿರ್ಧಾರಗಳಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೂ, ಅವರ ಬಹುಮತದ ಒಪ್ಪಿಗೆಯಿಲ್ಲದೆ ಏಕಪಕ್ಷೀಯವಾಗಿ ನಿರ್ಧಾರಗಳನ್ನು ಜಾರಿಗೊಳಿಸಲಾಗಿದೆ ಎಂದು ಅರ್ಜಿಯಲ್ಲಿ ನೇರವಾಗಿ ಆರೋಪಿಸಲಾಗಿದೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದಿನಪತ್ರಿಕೆಯು ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಕಳೆದ 10 ತಿಂಗಳಲ್ಲಿ ಕನಿಷ್ಠ 14 ಬಾರಿ ಆಯೋಗದ ನಿರ್ಧಾರಗಳ ವಿರುದ್ಧ ಅಧಿಕೃತವಾಗಿ ಲಿಖಿತ ಆಕ್ಷೇಪಣೆ ದಾಖಲಿಸಿದ್ದರು ಎಂದು ವರದಿ ಮಾಡಿದ ಕೆಲವೇ ದಿನಗಳಲ್ಲಿ ಈ ಪ್ರಮುಖ ಕಾನೂನು ಹೋರಾಟ ಆರಂಭಗೊಂಡಿದೆ.
ಅಸಂವಿಧಾನಿಕ ನಿರ್ಧಾರಗಳನ್ನು ವಜಾಗೊಳಿಸಲು ಮನವಿ:
‘barandbench.com’ ವರದಿಯ ಪ್ರಕಾರ, ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ವಕೀಲ ಚಂದ್ ಖುರೇಷಿ ಅವರ ಮೂಲಕ ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ‘ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ ಕಾಯಿದೆ, 2023’ರ ಸೆಕ್ಷನ್ 18 ಅನ್ನು ಅರ್ಜಿಯಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿದೆ.
ಆಯೋಗದ ಸಂಪೂರ್ಣ ಅನುಮೋದನೆ ಇಲ್ಲದೆ ಅಥವಾ ಆಯುಕ್ತರ ಬಹುಮತದ ಅಭಿಪ್ರಾಯಕ್ಕೆ ವಿರುದ್ಧವಾಗಿ ಸಿಇಸಿ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ಜಾರಿಗೆ ತರಲಾದ ಎಲ್ಲಾ ನಿರ್ಧಾರಗಳು, ಮಾರ್ಗಸೂಚಿಗಳು, ನಿರ್ದೇಶನಗಳು ಮತ್ತು ಸಾಫ್ಟ್‌ವೇರ್ ಬದಲಾವಣೆಗಳನ್ನು ‘ಅಸಂವಿಧಾನಿಕ’ ಮತ್ತು ‘ಅಧಿಕಾರ ವ್ಯಾಪ್ತಿಯನ್ನು ಮೀರಿದ ಕ್ರಮಗಳು’ ಎಂದು ಘೋಷಿಸಿ, ಆರಂಭದಿಂದಲೇ ಅಸಿಂಧುಗೊಳಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ:
ಸಿಇಸಿ ಗ್ಯಾನೇಶ್ ಕುಮಾರ್, ಹಿರಿಯ ಉಪ ಚುನಾವಣಾ ಆಯುಕ್ತ ಮನೀಶ್ ಗಾರ್ಗ್ ಮತ್ತು ಇಸಿಐಯ ಐಟಿ ವಿಭಾಗದ ಮಹಾನಿರ್ದೇಶಕಿ ಸೀಮಾ ಖನ್ನಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ತಮ್ಮ ಅಧಿಕೃತ ಕರ್ತವ್ಯವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿರುವುದು ಕಂಡುಬಂದರೆ, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ‘ಜನಪ್ರತಿನಿಧಿ ಕಾಯಿದೆ, 1950’ರ ಸೆಕ್ಷನ್ 32ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಶಾಸನಬದ್ಧ ಪ್ರಾಧಿಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಲಾಗಿದೆ.
10 ತಿಂಗಳಲ್ಲಿ 14 ಆಕ್ಷೇಪಣೆಗಳು & 13 ಕೋಟಿ ಮತದಾರರ ಹೆಸರು ಡಿಲಿಟ್:
ಅರ್ಜಿಯಲ್ಲಿನ ಮಾಹಿತಿಯಂತೆ, 2025ರ ನವೆಂಬರ್‌ನಿಂದ 2026ರ ಆಗಸ್ಟ್‌ವರೆಗಿನ 10 ತಿಂಗಳ ಅವಧಿಯಲ್ಲಿ ಚುನಾವಣಾ ಆಯುಕ್ತರಾದ ಸಂಧು ಮತ್ತು ಜೋಶಿ ಅವರು ಕನಿಷ್ಠ 14 ಬಾರಿ ಲಿಖಿತವಾಗಿ ಭಿನ್ನಾಭಿಪ್ರಾಯ ದಾಖಲಿಸಿದ್ದಾರೆ. ಆಯೋಗದ ಅಧಿಕೃತ ಅನುಮತಿಯಿಲ್ಲದೆ ಕೆಲವು ನಿರ್ಧಾರಗಳನ್ನು ಜಾರಿಗೊಳಿಸಿದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ. ವಿಶೇಷವೆಂದರೆ, ಈ 14 ಆಕ್ಷೇಪಣೆಗಳ ಪೈಕಿ ನಾಲ್ಕು ಆಕ್ಷೇಪಣೆಗಳನ್ನು ಒಂದೇ ದಿನದಲ್ಲಿ ದಾಖಲಿಸಲಾಗಿತ್ತು.
ಅಷ್ಟೇ ಅಲ್ಲದೆ, ಈ ವಿವಾದಾತ್ಮಕ ಎಸ್‌ಐಆರ್ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ದೇಶಾದ್ಯಂತ ಬರೋಬ್ಬರಿ 13 ಕೋಟಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿಹಾಕಲಾಗಿದೆ ಎಂಬ ಸ್ಫೋಟಕ ಆರೋಪವನ್ನು ಅರ್ಜಿಯಲ್ಲಿ ಮಾಡಲಾಗಿದೆ. ಈ ಆಡಳಿತಾತ್ಮಕ ಅಕ್ರಮದ ಬಗ್ಗೆ ನ್ಯಾಯಾಂಗ ತನಿಖಾ ಆಯೋಗ ಅಥವಾ ವಿಶೇಷ ತನಿಖಾ ತಂಡದ (SIT) ಮೂಲಕ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಜೊತೆಗೆ, 1960ರ ಮತದಾರರ ನೋಂದಣಿ ನಿಯಮಗಳ ಅಡಿಯಲ್ಲಿ ಇರುವ ಮೂಲ ಶಾಸನಬದ್ಧ ‘ನಮೂನೆ 6’ (Form 6) ಅನ್ನು ತಕ್ಷಣವೇ ಪುನಃಸ್ಥಾಪಿಸಬೇಕು ಮತ್ತು ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಹರಾಗಿರುವ ಪ್ರತಿಯೊಬ್ಬ ನಾಗರಿಕನಿಗೂ ಮೂಲ ನಿಯಮಾವಳಿಗಳ ಆಧಾರದಲ್ಲೇ ಸರಳವಾಗಿ ನೋಂದಣಿಗೆ ಅವಕಾಶ ಕಲ್ಪಿಸಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.


