ಕರ್ನಾಟಕದಲ್ಲಿ ಎಸ್‌ಐಆರ್ ವಿರುದ್ಧ ಧ್ವನಿ ಎತ್ತಿದ ವಿದ್ಯಾರ್ಥಿಗಳು ಮತ್ತು ಯುವಕರನ್ನು ಪೊಲೀಸರು ಬಲವಂತವಾಗಿ ವಶಕ್ಕೆ ಪಡೆದಿರುವುದು ಕಾಂಗ್ರೆಸ್ ಸರ್ಕಾರದ ಪ್ರಜಾಸತ್ತಾತ್ಮಕ ಮುಖವಾಡವನ್ನು ಬಯಲುಮಾಡಿದೆ ಎಂದು ಎಐಎಸ್‌ಎ ಕರ್ನಾಟಕ ತೀವ್ರವಾಗಿ ಖಂಡಿಸಿದೆ. ಬಿಜೆಪಿಯ ದಮನಕಾರಿ ಆಡಳಿತಕ್ಕೆ ಪರ್ಯಾಯ ಎಂದು ಹೇಳಿಕೊಳ್ಳುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಅದೇ ದಮನದ ಹಾದಿ ಹಿಡಿದಿದೆ. ಪ್ರತಿಭಟನೆಯ ಹಕ್ಕಿನ ಬಗ್ಗೆ ಮಾತನಾಡುವ ಕಾಂಗ್ರೆಸ್, ಜನರು ಬೀದಿಗಿಳಿದು ಪ್ರಶ್ನಿಸಿದಾಗ ಪೊಲೀಸರನ್ನು ಮುಂದೆ ನಿಲ್ಲಿಸಿ ಧ್ವನಿ ಅಡಗಿಸಲು ಹೊರಟಿದೆ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಎಐಎಸ್‌ಎ, ಎಸ್‌ಎಫ್‌ಐ, ಎಐಡಿಎಸ್‌ಒ ಮತ್ತು ಎಐಎಸ್‌ಎಫ್ ಸೇರಿದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆಗೆ ಕರೆ ನೀಡಿದ್ದವು. ಆದರೆ, ಚುನಾವಣಾ ಆಯೋಗದ ಕಚೇರಿಗೆ ಪ್ರತಿಭಟನಾಕಾರರು ತಲುಪದಂತೆ ತಡೆಯಲು ನೂರಾರು ಪೊಲೀಸರನ್ನು ನಿಯೋಜಿಸಿ, ರಸ್ತೆಯ ಎರಡೂ ಬದಿಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಯಿತು. ಕಚೇರಿಯಿಂದ ಕೆಲವೇ ನೂರು ಮೀಟರ್‌ಗಳ ದೂರದಲ್ಲೇ ಪ್ರತಿಭಟನೆಯನ್ನು ತಡೆಯುವ ಮೂಲಕ ಜನರ ಪ್ರತಿಭಟನೆಯ ಹಕ್ಕಿಗೆ ಅಡ್ಡಿಪಡಿಸಲಾಯಿತು.
ಸಮವಸ್ತ್ರದಲ್ಲಿದ್ದ ಪೊಲೀಸರ ಜೊತೆಗೆ ನಾಗರಿಕ ಉಡುಪಿನಲ್ಲಿದ್ದ ವ್ಯಕ್ತಿಗಳೂ ಪ್ರತಿಭಟನಾಕಾರರನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಪೊಲೀಸರು ಪ್ರತಿಭಟನಾಕಾರರನ್ನು ಬಲವಂತವಾಗಿ ನಿಭಾಯಿಸಿದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ ಎಂದು ಎಐಎಸ್‌ಎ ಕರ್ನಾಟಕ ಆರೋಪಿಸಿದೆ. ಎಸ್‌ಐಆರ್‌ನಂತಹ ಗಂಭೀರ ಚುನಾವಣಾ ಪ್ರಕ್ರಿಯೆಯನ್ನು ಪ್ರಶ್ನಿಸುವವರನ್ನು ಬಂಧಿಸಿ, ಅವರ ಧ್ವನಿಯನ್ನು ಅಡಗಿಸುವ ಪ್ರಯತ್ನ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ನೇರ ದಾಳಿಯಾಗಿದೆ ಎಂದು ಸಂಘಟನೆ ಕಿಡಿಕಾರಿದೆ.
ದೆಹಲಿಯಲ್ಲಿ ಪ್ರತಿಭಟನೆಯ ಹಕ್ಕಿನ ಮಾತು, ಕರ್ನಾಟಕದಲ್ಲಿ ಬ್ಯಾರಿಕೇಡ್‌ಗಳ ದಮನ!
ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್ ನಾಯಕರು ಬ್ಯಾರಿಕೇಡ್‌ಗಳನ್ನು ಭೇದಿಸಿ ಪ್ರತಿಭಟನೆಯ ಹಕ್ಕಿನ ಬಗ್ಗೆ ಮಾತನಾಡುತ್ತಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ರಸ್ತೆಗೆ ಬ್ಯಾರಿಕೇಡ್‌ಗಳನ್ನು ಹಾಕಿ ಪ್ರತಿಭಟನಾಕಾರರನ್ನು ತಡೆಯುತ್ತಿದೆ. ವಿರೋಧ ಪಕ್ಷದಲ್ಲಿದ್ದಾಗ ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಕರೆಂದು ಬಿಂಬಿಸಿಕೊಳ್ಳುವುದು, ಅಧಿಕಾರ ಸಿಕ್ಕಾಗ ಅದೇ ಹಕ್ಕುಗಳನ್ನು ಹತ್ತಿಕ್ಕುವುದು ಕಾಂಗ್ರೆಸ್‌ನ ದ್ವಂದ್ವ ನಿಲುವಲ್ಲವೇ ಎಂದು ಎಐಎಸ್‌ಎ ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಪ್ರತಿಭಟನೆಗಾಗಿ ನಿಗದಿಪಡಿಸಿರುವ ಫ್ರೀಡಂ ಪಾರ್ಕ್‌ನಲ್ಲೂ ನಿರ್ಬಂಧಗಳಿರುವುದನ್ನು ಸಂಘಟನೆ ತೀವ್ರವಾಗಿ ಆಕ್ಷೇಪಿಸಿದೆ. ಕಳೆದ ಐದು ವರ್ಷಗಳಿಂದ ಬ್ಯಾರಿಕೇಡ್‌ಗಳಿಂದ ಮುಚ್ಚಿರುವ ಪ್ರದೇಶಗಳನ್ನು ತೆರವುಗೊಳಿಸಿ, ನಾಗರಿಕರು ಯಾವುದೇ ಬೆದರಿಕೆ ಅಥವಾ ಅಡ್ಡಿಯಿಲ್ಲದೆ ಪ್ರತಿಭಟಿಸುವ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದೆ.
ವಶಕ್ಕೆ ಪಡೆದ ಎಲ್ಲ ಪ್ರತಿಭಟನಾಕಾರರನ್ನು ತಕ್ಷಣ ಬಿಡುಗಡೆ ಮಾಡಬೇಕು, ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಬೇಕು ಮತ್ತು ಪ್ರತಿಭಟನೆಗೆ ಅವಕಾಶ ನೀಡಬೇಕು ಎಂಬುದು ಎಐಎಸ್‌ಎ ಕರ್ನಾಟಕದ ಆಗ್ರಹ. ಬಿಜೆಪಿಯ ದಮನಕಾರಿ ರಾಜಕಾರಣವನ್ನು ವಿರೋಧಿಸುವುದಾಗಿ ಹೇಳುವ ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ ಅದೇ ಮಾದರಿಯನ್ನು ಅನುಸರಿಸಿದರೆ ಬಿಜೆಪಿಗೂ ಕಾಂಗ್ರೆಸ್‌ಗೂ ವ್ಯತ್ಯಾಸವೇನು? ಪ್ರಜಾಸತ್ತಾತ್ಮಕ ಹಕ್ಕುಗಳು ವಿರೋಧ ಪಕ್ಷದಲ್ಲಿದ್ದಾಗ ಮಾತ್ರ ನೆನಪಾಗುವ ರಾಜಕೀಯ ಘೋಷಣೆಗಳಲ್ಲ. ಅಧಿಕಾರದಲ್ಲಿದ್ದಾಗಲೂ ಅವುಗಳನ್ನು ಗೌರವಿಸಬೇಕು.
ವಿದ್ಯಾರ್ಥಿ-ಯುವಕರ ಧ್ವನಿಯನ್ನು ಪೊಲೀಸ್ ಬಲದಿಂದ ಅಡಗಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರ ತನ್ನ ನಿಲುವಿಗೆ ಉತ್ತರ ನೀಡಬೇಕು. ಜನರ ಪ್ರತಿರೋಧ ಹೋರಾಟಕ್ಕೆ ಜಯವಾಗಲಿ ಎಂದು ಎಐಎಸ್‌ಎ ಕರ್ನಾಟಕ ಕರೆ ನೀಡಿದೆ.


