ಕೋಲ್ಕತ್ತಾದ ಸಮುದಾಯ ದುರ್ಗಾ ಪೂಜಾ ಪೆಂಡಾಲ್ನಲ್ಲಿ ಶನಿವಾರ (ಅ.17) ಸಂಜೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸುಮಾರು 25 ಮಂದಿ ಗಾಯಗೊಂಡಿದ್ದು, ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಹಲವರು ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
ಉತ್ತರ ಕೋಲ್ಕತ್ತಾದ ಗಿರೀಶ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಶಾರದಾ ಪಾರ್ಕ್ನ ಚೋರ್ಬಗಾನ್ ಸಾರ್ವಜನಿಕ ದುರ್ಗೋತ್ಸವ ಸಮಿತಿಯ ಪೆಂಡಾಲ್ನಲ್ಲಿ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಪೊಲೀಸರು ಭಾನುವಾರ (ಅ.18) ಏಳು ಮಂದಿಯನ್ನು ಬಂಧಿಸಿದ್ದಾರೆ.
ಪೂಜಾ ಸಮಿತಿಯ ಕಾರ್ಯದರ್ಶಿ ರಾಜ್ ಕುಮಾರ್ ಸೆವ್ಡಾ ಅಲಿಯಾಸ್ ರಾಜಾ (48), ಉಪಾಧ್ಯಕ್ಷ ಶಾಂತನು ದುಬೆ (55) ಹಾಗೂ ಬಿದಿರಿನ ರಚನೆಯ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಬಿಪ್ಲಬ್ ಮುಖರ್ಜಿ ಅಲಿಯಾಸ್ ಜಾಯ್ (48), ಜನಸಂದಣಿ ನಿರ್ವಹಣೆ ಹಾಗೂ ವಿಐಪಿ ಪಾಸ್ಗಳನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿದ್ದ ಕೌಶಿಕ್ ಸಹಾ (53), ಜನಸಂದಣಿ ನಿರ್ವಹಣೆಯಲ್ಲಿ ತೊಡಗಿದ್ದ ಪಿಂಟು ಡೇ (51), ಖಾಸಗಿ ಭದ್ರತಾ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದ ಸುಮನ್ ಚಕ್ರವರ್ತಿ (30) ಮತ್ತು ರಾಜೇಶ್ ಪಾಲ್ (29) ಬಂಧಿತರು ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ newindianexpress.com ವರದಿ ಮಾಡಿದೆ.
ಪೊಲೀಸರು, ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ಗಳಾದ 105, 110 ಮತ್ತು 3(5) ರ ಅಡಿಯಲ್ಲಿ ಸಂಘಟಕರು ಹಾಗೂ ಇತರರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಶನಿವಾರ ಸಂಜೆ ಇದ್ದಕ್ಕಿದ್ದಂತೆ ಮಳೆ ಸುರಿದಿದ್ದರಿಂದ, ಪೆಂಡಾಲ್ನ ಹೊರಗೆ ಕಾಯುತ್ತಿದ್ದ ನೂರಾರು ಜನರು ಆಶ್ರಯ ಪಡೆಯಲು ಏಕಕಾಲದಲ್ಲಿ ಕಿರಿದಾದ ಪ್ರವೇಶ ದ್ವಾರದ ಮೂಲಕ ಪೆಂಡಾಲ್ ಒಳಗೆ ನುಗ್ಗಲು ಯತ್ನಿಸಿದ್ದು, ಈ ಸಂದರ್ಭದಲ್ಲಿ ಉಂಟಾದ ಭಾರಿ ನೂಕುನುಗ್ಗಲು ಕಾಲ್ತುಳಿತಕ್ಕೆ ಕಾರಣವಾಗಿದೆ. ಕೆಲವೆಡೆ ಪೆಂಡಾಲ್ ಭಾಗಶಃ ಕುಸಿದಿದೆ ಎಂದು ವರದಿಯಾಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಶನಿವಾರ ರಾತ್ರಿ ಘಟನಾ ಸ್ಥಳದ ಸಮೀಪವಿರುವ ಬೋಧನಾ ಆಸ್ಪತ್ರೆಯಲ್ಲಿ ಗಾಯಗೊಂಡವರನ್ನು ಭೇಟಿ ಮಾಡಿ, ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
ಮಧ್ಯರಾತ್ರಿಯ ಸುಮಾರಿಗೆ, ಈ ಘಟನೆಯ ತನಿಖೆ ನಡೆಸಲು ಕಲ್ಕತ್ತಾ ಹೈಕೋರ್ಟ್ನ ಹಾಲಿ ನ್ಯಾಯಾಧೀಶರೊಬ್ಬರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು (ಎಸ್ಐಟಿ) ರಚಿಸುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಜನಸಂದಣಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದು ಕಂಡುಬಂದರೆ, ‘ಚೋರ್ಬಗಾನ್ ಸಾರ್ವಜನಿಕ ದುರ್ಗೋತ್ಸವ ಸಮಿತಿ’ಯವರಾಗಲಿ ಅಥವಾ ಕೋಲ್ಕತ್ತಾ ಪೊಲೀಸರಾಗಲಿ, ಯಾರನ್ನೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಕೋಲ್ಕತ್ತಾ ಪೊಲೀಸ್ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮತ್ತು ಪಶ್ಚಿಮ ಬಂಗಾಳ ಪೊಲೀಸ್ನ ಅಪರಾಧ ತನಿಖಾ ಇಲಾಖೆಯ (ಸಿಐಡಿ) ಹಿರಿಯ ಅಧಿಕಾರಿಗಳು ಕೂಡ ಈ ಎಸ್ಐಟಿ ಭಾಗವಾಗಿರುತ್ತಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈ ತಂಡದ ನೇತೃತ್ವ ವಹಿಸಲು ಹಾಲಿ ನ್ಯಾಯಾಧೀಶರೊಬ್ಬರನ್ನು ನೇಮಿಸುವಂತೆ ಕೋರಿ, ಮುಖ್ಯ ನ್ಯಾಯಮೂರ್ತಿ ಆರ್. ವಿ. ಘುಗೆ ಅವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರ ನೀಡಲಿದ್ದು, ಮೃತರ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ ನೀಡುವುದಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ.


