ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಹೆಸರು ರದ್ದಾಗಿರುವ ಹಳೆಯ ಮತದಾರರನ್ನು ಮರಳಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಭಾರಿ ಆಡಳಿತಾತ್ಮಕ ಮತ್ತು ಕಾನೂನು ತೊಡಕು ಎದುರಾಗಿದೆ. ಎಸ್ಐಆರ್ ಪರಿಷ್ಕರಣೆಯಲ್ಲಿ ಹೆಸರು ಕೈಬಿಟ್ಟು ಹೋಗಿರುವವರನ್ನು ಮರಳಿ ಸೇರಿಸಲು ಪ್ರಸ್ತುತ ಬಳಸಲಾಗುತ್ತಿರುವ ‘ಫಾರ್ಮ್ 6’ ಅರ್ಜಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ಮಹಾರಾಷ್ಟ್ರ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಕೇಂದ್ರ ಚುನಾವಣಾ ಆಯೋಗಕ್ಕೆ ಅಧಿಕೃತ ಪ್ರಸ್ತಾಪ ಸಲ್ಲಿಸಿದೆ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಎಸ್ಐಆರ್ ಪ್ರಕ್ರಿಯೆಯ ನಂತರ ದೇಶಾದ್ಯಂತ ಲಕ್ಷಾಂತರ ಮತದಾರರ ಹೆಸರುಗಳು ಪಟ್ಟಿಯಿಂದ ತೆಗೆದುಹಾಕಲ್ಪಟ್ಟಿದ್ದವು. ಹೀಗೆ ಹೊರಗುಳಿದವರನ್ನು ಮರಳಿ ಸೇರ್ಪಡೆಗೊಳಿಸಲು ಕೇಂದ್ರ ಚುನಾವಣಾ ಆಯೋಗವು ‘ಫಾರ್ಮ್ 6’ ಅನ್ನು ಬಳಸುವಂತೆ ನಿರ್ದೇಶನ ನೀಡಿತ್ತು. ದೆಹಲಿ ಮತ್ತು ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ತಳಮಟ್ಟದ ಮತದಾರರ ನೋಂದಣಿ ಅಧಿಕಾರಿಗಳು ಹೆಸರು ರದ್ದಾದ ಜನರಿಗೆ ಈ ಫಾರ್ಮ್ ನೀಡುತ್ತಿದ್ದಾರೆ. ಆದರೆ, ವಾಸ್ತವವಾಗಿ ‘ಫಾರ್ಮ್ 6’ ಎಂಬುದು ಹೊಸ ಮತದಾರರ ನೋಂದಣಿಗೆ ಇರುವ ಅಧಿಕೃತ ಅರ್ಜಿಯಾಗಿದೆ. ಈ ಫಾರ್ಮ್ನಲ್ಲಿ ಅರ್ಜಿದಾರರು, “ನಾವು ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅರ್ಜಿ ಸಲ್ಲಿಸುತ್ತಿದ್ದೇವೆ ಹಾಗೂ ದೇಶದ ಯಾವುದೇ ಕ್ಷೇತ್ರದಲ್ಲಿ ನಮ್ಮ ಹೆಸರು ಸೇರ್ಪಡೆಯಾಗಿಲ್ಲ” ಎಂದು ಸ್ವಯಂ ಘೋಷಣೆ ಬರೆದುಕೊಡಬೇಕಾಗುತ್ತದೆ.
ಈ ಸ್ವಯಂ ಘೋಷಣೆಯಲ್ಲಿ ಪ್ರಮುಖ ಕಾನೂನು ಅಡಚಣೆ ಅಡಗಿದೆ. ಒಂದು ವೇಳೆ ಈ ಪ್ರಮಾಣಪತ್ರ ಸುಳ್ಳಾಗಿದ್ದರೆ 1950ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 31ರ ಪ್ರಕಾರ ಒಂದು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿಂದೆ ಹಲವು ವರ್ಷಗಳಿಂದ ಮತದಾನ ಮಾಡುತ್ತಿದ್ದು, ಈಗ ಎಸ್ಐಆರ್ ಪರಿಷ್ಕರಣೆಯಲ್ಲಿ ಹೆಸರು ರದ್ದಾಗಿರುವ ನಾಗರಿಕರು, “ನಾವು ಹೊಸ ಮತದಾರರು” ಎಂದು ಸುಳ್ಳು ಪ್ರಮಾಣಪತ್ರ ನೀಡಿದರೆ ನಾಳೆ ಕಾನೂನು ಕ್ರಮ ಎದುರಿಸಬೇಕಾಗಬಹುದು ಎಂಬ ಭೀತಿಯಿಂದ ಈ ಫಾರ್ಮ್ ತುಂಬಲು ನಿರಾಕರಿಸುತ್ತಿದ್ದಾರೆ. ಇದು ತಳಮಟ್ಟದ ಅಧಿಕಾರಿಗಳಿಗೆ ಮತದಾರರನ್ನು ಮರಳಿ ಪಟ್ಟಿಗೆ ಸೇರಿಸಲು ಭಾರಿ ದೊಡ್ಡ ಅಡಚಣೆಯಾಗಿ ಪರಿಣಮಿಸಿದೆ.
ಜನರ ಈ ಜೈಲು ಶಿಕ್ಷೆಯ ಆತಂಕವನ್ನು ನಿವಾರಿಸಲು ಮಹಾರಾಷ್ಟ್ರದ ಮುಖ್ಯ ಚುನಾವಣಾಧಿಕಾರಿ ಕಚೇರಿಯು ಪ್ರಮುಖ ಸಲಹೆಗಳನ್ನು ನೀಡಿದೆ. ‘ಫಾರ್ಮ್ 6’ ಶೀರ್ಷಿಕೆಯಲ್ಲಿರುವ “ಹೊಸ ಮತದಾರರು” ಎಂಬ ಪದಗಳನ್ನು ತೆಗೆದುಹಾಕುವುದು ಮತ್ತು ಈ ಹಿಂದೆ ಮತದಾರರಾಗಿದ್ದು ಪ್ರಸ್ತುತ ಹೆಸರಿಲ್ಲದವರಿಗೆ ಪ್ರತ್ಯೇಕ ಪರ್ಯಾಯ ಸ್ವಯಂ ಘೋಷಣಾ ಕಾಲಂ ಅಳವಡಿಸಲು ಕೋರಲಾಗಿದೆ. ಜತೆಗೆ, ಹೆಸರು ಕೈಬಿಟ್ಟು ಹೋಗಿರುವ ಮತದಾರರು ತಮ್ಮ ಹಳೆಯ ಮತದಾರರ ಗುರುತಿನ ಚೀಟಿ (EPIC) ಸಂಖ್ಯೆಯನ್ನು ನಮೂದಿಸಲು ಅವಕಾಶ ನೀಡಿದರೆ ಅಧಿಕಾರಿಗಳಿಗೆ ಹಳೆಯ ದಾಖಲೆ ಹುಡುಕುವುದು ಸುಲಭವಾಗುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ಸಲಹೆ ನೀಡಿದೆ. ಸಂವಿಧಾನಾತ್ಮಕ ನಿಯಮಗಳ ಪ್ರಕಾರ, ನಮೂನೆಯಲ್ಲಿ ಯಾವುದೇ ತಿದ್ದುಪಡಿ ಮಾಡಬೇಕಿದ್ದರೂ ಕೇಂದ್ರ ಸರ್ಕಾರವು 1960ರ ಮತದಾರರ ನೋಂದಣಿ ನಿಯಮಗಳಿಗೆ ತಿದ್ದುಪಡಿ ತರುವುದು ಕಡ್ಡಾಯವಾಗಿದೆ.
ಫಾರ್ಮ್ 6 ರಲ್ಲಾಗಿರುವ ಈ ಗೊಂದಲದ ವಿಚಾರವು ಈಗಾಗಲೇ ಸುಪ್ರೀಂ ಕೋರ್ಟ್ ಅಂಗಳ ತಲುಪಿದೆ. ಈ ಹಿಂದೆ ಜುಲೈನಲ್ಲಿ ಚುನಾವಣಾ ಆಯೋಗವು ಫಾರ್ಮ್ನಲ್ಲಿ ಮಾಡಿದ ಕೆಲವು ಆನ್ಲೈನ್ ಬದಲಾವಣೆಗಳನ್ನು ಚುನಾವಣಾ ಆಯುಕ್ತರಾಗಿದ್ದ ಸುಖ್ಬೀರ್ ಸಿಂಗ್ ಸಂಧು ಅವರು ಅನಧಿಕೃತ ಹಾಗೂ ಕಾನೂನುಬಾಹಿರ ಎಂದು ಕರೆದಿದ್ದರು. ಇತ್ತೀಚೆಗೆ ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರಿದ್ದ ಪೀಠ, ‘ಫಾರ್ಮ್ 6’ ನ ಯಾವುದೇ ಮಾರ್ಪಡಿಸಿದ ರೂಪಕ್ಕೆ ಕೋರ್ಟ್ ಅನುಮೋದನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ದೆಹಲಿಯಲ್ಲಿ ಹೆಸರು ಮರು-ಸೇರ್ಪಡೆಗೆ ಎದುರಾಗಿರುವ ಗೊಂದಲದ ಕುರಿತು ಸೂಕ್ತ ಆದೇಶ ಹೊರಡಿಸುವುದಾಗಿ ಹೇಳಿರುವ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ಅಕ್ಟೋಬರ್ 27ಕ್ಕೆ ನಿಗದಿಪಡಿಸಿದೆ.


