Homeಮುಖಪುಟ'ತಪ್ಪು ಮಾಡಿದ್ದಕ್ಕಾಗಿ ನಮಗೆ ಪಶ್ಚಾತಾಪವಿದೆ' : 2023ರ ಚುನಾವಣಾ ಆಯುಕ್ತರ ಕಾಯ್ದೆ ಬೆಂಬಲಿಸಿದ್ದಕ್ಕೆ ಜಗನ್ ವಿಷಾದ

‘ತಪ್ಪು ಮಾಡಿದ್ದಕ್ಕಾಗಿ ನಮಗೆ ಪಶ್ಚಾತಾಪವಿದೆ’ : 2023ರ ಚುನಾವಣಾ ಆಯುಕ್ತರ ಕಾಯ್ದೆ ಬೆಂಬಲಿಸಿದ್ದಕ್ಕೆ ಜಗನ್ ವಿಷಾದ

- Advertisement -
- Advertisement -

ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಭಾನುವಾರ (ಅಕ್ಟೋಬರ್ 18), ಚುನಾವಣಾ ಆಯುಕ್ತರ ನೇಮಕಾತಿ ಪ್ರಕ್ರಿಯೆಯನ್ನು ಬದಲಾಯಿಸಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿದ್ದ ಕಾಯ್ದೆಯನ್ನು ಬೆಂಬಲಿಸಿದ್ದಕ್ಕಾಗಿ ತಾವು ವಿಷಾದಿಸುವುದಾಗಿ ತಿಳಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷ (ವೈಎಸ್‌ಆರ್‌ಸಿಪಿ) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ) ನಡುವೆ ರಾಜಕೀಯ ಹಿಂಸಾಚಾರ ತೀವ್ರಗೊಂಡಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿ, ಅಲ್ಲಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯ ಚುನಾವಣಾ ಆಯೋಗವು ಪಕ್ಷಪಾತ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸುವಾಗ ಜಗನ್ ಈ ಹೇಳಿಕೆಗಳನ್ನು ನೀಡಿದ್ದಾರೆ.

ಚುನಾವಣಾ ಆಯುಕ್ತರ ನೇಮಕಾತಿಗಳು ‘ತಟಸ್ಥ’ವಾಗಿರಬೇಕು ಎಂದು ಜಗನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ರಾಜ್ಯ ಚುನಾವಣಾ ಆಯುಕ್ತರು ಮತ್ತು ಮುಖ್ಯ ಚುನಾವಣಾ ಆಯುಕ್ತರು ಇಬ್ಬರನ್ನೂ ಆಡಳಿತ ಪಕ್ಷಗಳೇ ನಾಮನಿರ್ದೇಶನ ಮಾಡಬಾರದು. ಹಿಂದೆ ಆಡಳಿತ ಪಕ್ಷವೇ ನೇಮಕಾತಿಗಳನ್ನು ಮಾಡುವ ಕೇಂದ್ರ ಸರ್ಕಾರದ ವ್ಯವಸ್ಥೆಯನ್ನು ನಾವು ಬೆಂಬಲಿಸಿದ್ದೆವು. ಆದರೆ ಇಂದು ನಾವು ಅದಕ್ಕಾಗಿ ವಿಷಾದಿಸುತ್ತೇವೆ. ಆ ತಪ್ಪು ಮಾಡಿದ್ದಕ್ಕಾಗಿ ನಮಗೆ ಪಶ್ಚಾತಾಪವಿದೆ. ಏಕೆಂದರೆ, ಒಬ್ಬ ವಿದ್ಯಾರ್ಥಿಯೇ ತನ್ನ ಪರೀಕ್ಷಕರನ್ನು ನೇಮಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ವೈಎಸ್‌ಆರ್‌ಸಿಪಿ ಸಂಸತ್ತಿನಲ್ಲಿ 2023ರ ಮಸೂದೆಯನ್ನು ಬೆಂಬಲಿಸಿತ್ತು. ಇದರ ಅನ್ವಯ, ಪ್ರಧಾನ ಮಂತ್ರಿಗಳ ಅಧ್ಯಕ್ಷತೆಯ ಸಮಿತಿಯ ಶಿಫಾರಸಿನ ಮೇರೆಗೆ ರಾಷ್ಟ್ರಪತಿಗಳು ಚುನಾವಣಾ ಆಯುಕ್ತರನ್ನು ನೇಮಿಸುತ್ತಾರೆ. ಈ ಸಮಿತಿಯು ಲೋಕಸಭೆಯ ವಿರೋಧ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯವರಿಂದ ನಾಮನಿರ್ದೇಶನಗೊಂಡ ಒಬ್ಬ ಕೇಂದ್ರ ಸಂಪುಟ ಸಚಿವರನ್ನು ಒಳಗೊಂಡಿರುತ್ತದೆ.

ಚುನಾವಣಾ ಆಯುಕ್ತರ ನಾಮನಿರ್ದೇಶನ ಪ್ರಕ್ರಿಯೆಯಲ್ಲಿ ಸುಧಾರಣೆಗಳನ್ನು ಕೋರಿದ ಜಗನ್, “ಈ ಹಿಂದೆ, ಆಯ್ಕೆ ಸಮಿತಿಯಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಇದ್ದರು. ಪ್ರಸ್ತುತ ವ್ಯವಸ್ಥೆಯು ಆಡಳಿತ ಪಕ್ಷಕ್ಕೆ ಎರಡು ಮತಗಳನ್ನು ಮತ್ತು ವಿರೋಧ ಪಕ್ಷಕ್ಕೆ ಒಂದು ಮತವನ್ನು ನೀಡುತ್ತದೆ. ಮುಖ್ಯ ನ್ಯಾಯಮೂರ್ತಿಗಳು ಈಗ ಈ ಸಮಿತಿಯ ಭಾಗವಾಗಿ ಉಳಿದಿಲ್ಲ. ಇದು ವ್ಯವಸ್ಥೆಯಲ್ಲಿರುವ ದೊಡ್ಡ ನ್ಯೂನತೆಯಾಗಿದೆ” ಎಂದು ಹೇಳಿದ್ದಾರೆ.

ಅದೇ ರೀತಿ, ರಾಜ್ಯ ಚುನಾವಣಾ ಆಯುಕ್ತರನ್ನು ಸಹ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಪ್ರಮುಖವಾಗಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ತಟಸ್ಥ ಪ್ರಕ್ರಿಯೆಯ ಮೂಲಕವೇ ನೇಮಕ ಮಾಡಬೇಕಾದ ಅಗತ್ಯವಿದೆ. “ಚುನಾವಣೆಗಳ ಮೇಲೆ ಸಾರ್ವಜನಿಕರಲ್ಲಿ ವಿಶ್ವಾಸವನ್ನು ಮರುಸ್ಥಾಪಿಸಲು ಇಂತಹ ಸುಧಾರಣೆಗಳು ಅತ್ಯಗತ್ಯ” ಎಂದಿದ್ದಾರೆ.

ವೈಎಸ್‌ಆರ್‌ಸಿಪಿ ಅಭ್ಯರ್ಥಿಗಳ ಮೇಲಿನ ದಾಳಿಗಳ ಬಗ್ಗೆ ಮಾತನಾಡಿದ ಜಗನ್, “ಆಡಳಿತ ಪಕ್ಷವು ಅಭ್ಯರ್ಥಿಗಳಿಗೆ ಜಾತಿ ಪ್ರಮಾಣಪತ್ರಗಳು, ಆಕ್ಷೇಪಣಾ ರಹಿತ ಪ್ರಮಾಣಪತ್ರಗಳು (ಎನ್‌ಒಸಿ) ಮತ್ತು ಇತರ ದಾಖಲೆಗಳನ್ನು ನಿರಾಕರಿಸುವ ಮೂಲಕ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಆಡಳಿತ ಪಕ್ಷವಾದ ಟಿಡಿಪಿ ಅನಾವಶ್ಯಕ ಮತ್ತು ಅನ್ಯಾಯದ ಮಾರ್ಗಗಳ ಮೂಲಕ ಚುನಾವಣೆಯಲ್ಲಿ ಗೆಲ್ಲಲು ಸರ್ಕಾರಿ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಪೊಲೀಸರು ಅಭ್ಯರ್ಥಿಗಳನ್ನು ‘ಬೈಂಡ್-ಓವರ್’ ಪ್ರಕ್ರಿಯೆಗಳ ನೆಪದಲ್ಲಿ ಠಾಣೆಗೆ ಕರೆಸುತ್ತಿದ್ದಾರೆ ಮತ್ತು ಅವರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ದೊಡ್ಡ ಮಟ್ಟದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸರ್ಕಾರಿ ಪ್ರಾಯೋಜಿತ ಹಿಂಸಾಚಾರವನ್ನು ನಡೆಸುವ ಮೂಲಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ‘ನರಾಸುರ ರಕ್ತಸಿಕ್ತ ಚರಿತ್ರೆ’ ಯನ್ನು ಬರೆಯುತ್ತಿದ್ದಾರೆ ಎಂದು ಜಗನ್ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಮಾಫಿಯಾ ಶೈಲಿಯ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಜಗನ್: “ಅವರು ಕೆಲವು ಅಧಿಕಾರಿಗಳ ನಡುವೆ ಒಂದು ಸಿಂಡಿಕೇಟ್ ಅನ್ನು ನಿರ್ಮಿಸಿದ್ದಾರೆ. ಡಿಐಜಿಯಿಂದ ಹಿಡಿದು ಡಿಎಸ್‌ಪಿ ಮತ್ತು ಸರ್ಕಲ್ ಇನ್ಸ್‌ಪೆಕ್ಟರ್‌ಗಳವರೆಗೆ ಹರಡಿರುವ ಈ ಜಾಲವು ಶಾಸಕರೊಂದಿಗೆ ಸೇರಿ ಕೆಲಸ ಮಾಡುತ್ತಿದೆ. ಇವರು ಮರಳು ಗಣಿಗಾರಿಕೆಯಿಂದ ಹಿಡಿದು ಮದ್ಯದ ವ್ಯವಹಾರದವರೆಗೆ ಎಲ್ಲವನ್ನೂ ನಿಯಂತ್ರಿಸುತ್ತಾರೆ ಮತ್ತು ಯಾರಿಗೆ ಎಷ್ಟು ಪಾಲು ಸಿಗಬೇಕು ಎಂಬುದನ್ನು ನಿರ್ಧರಿಸುತ್ತಾರೆ. ನಿಯಮಗಳ ಪ್ರಕಾರ ಎರಡು ವರ್ಷಗಳ ನಂತರ ವರ್ಗಾವಣೆ ಮಾಡಬೇಕಾಗಿದ್ದರೂ, ಚುನಾವಣೆಯ ಸಮಯದಲ್ಲಿಯೂ ಇದೇ ಅಧಿಕಾರಿಗಳನ್ನು ಮುಂದುವರಿಸಲಾಗುತ್ತಿದೆ. ಈ ಮೂಲಕ ರಾಜ್ಯದಲ್ಲಿ ಮಾಫಿಯಾದಂತಹ ವ್ಯವಸ್ಥೆಯನ್ನು ನಡೆಸಲಾಗುತ್ತಿದೆ” ಎಂದು ಕಿಡಿಕಾರಿದ್ದಾರೆ.

ಆಡಳಿತ ಪಕ್ಷದ ಸದಸ್ಯರ ವಿರುದ್ಧದ ಪೊಲೀಸ್ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡ ಜಗನ್, “ನೂರಾರು ಟಿಡಿಪಿ ಕಾರ್ಯಕರ್ತರು ಮಾರಕಾಸ್ತ್ರಗಳೊಂದಿಗೆ ನಾಮಪತ್ರ ಸಲ್ಲಿಕೆ ಕೇಂದ್ರಗಳ ಬಳಿ ಜಮಾಯಿಸಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಅಭ್ಯರ್ಥಿಗಳ ಜೊತೆ ಕೇವಲ ನಾಲ್ಕು ಜನರಿಗೆ ಮಾತ್ರ ಒಳಗೆ ಹೋಗಲು ಅನುಮತಿಯಿದೆ. ಆದರೂ ನೂರಾರು, ಸಾವಿರಾರು ಟಿಡಿಪಿ ಕಾರ್ಯಕರ್ತರು ಆಯುಧಗಳೊಂದಿಗೆ ಕೇಂದ್ರಗಳಲ್ಲಿ ಜಮಾಯಿಸುತ್ತಿದ್ದಾರೆ, ಆದರೆ ನಿಯಮಗಳನ್ನು ಪಾಲಿಸುವ ವೈಎಸ್‌ಆರ್‌ಸಿಪಿ ಅಭ್ಯರ್ಥಿಗಳನ್ನು ತಡೆಯಲಾಗುತ್ತಿದೆ. ನಮ್ಮ ಅಭ್ಯರ್ಥಿಗಳು ಕೇಂದ್ರಗಳನ್ನು ತಲುಪಿದಾಗ, ಅವರ ಮೇಲೆ ದಾಳಿ ನಡೆಸಿ ಪೊಲೀಸರ ಎದುರೇ ನಾಮಪತ್ರಗಳನ್ನು ಕಸಿದುಕೊಳ್ಳಲಾಗುತ್ತಿದೆ. ಪೊಲೀಸರು ಮಧ್ಯಪ್ರವೇಶಿಸುತ್ತಿಲ್ಲ; ಬದಲಿಗೆ ದಾಳಿಕೋರರಿಗೆ ಸಹಾಯ ಮಾಡುತ್ತಿದ್ದಾರೆ. ಟಿಡಿಪಿ ಕಾರ್ಯಕರ್ತರು ಚುನಾವಣಾಧಿಕಾರಿಗಳ ಕೊಠಡಿಗಳಿಗೂ ನುಗ್ಗಿ ಅಧಿಕಾರಿಗಳಿಂದ ಪತ್ರಗಳನ್ನು ಕಸಿದುಕೊಂಡಿದ್ದಾರೆ, ಆದರೆ ಪೊಲೀಸರು ಸುಮ್ಮನೆ ನಿಂತು ನೋಡುತ್ತಿದ್ದಾರೆ” ಎಂದು ಅವರು ಆರೋಪಿಸಿದ್ದಾರೆ.

“ಒಂದು ವೇಳೆ ಚುನಾವಣಾಧಿಕಾರಿಗಳು ನಾಮಪತ್ರಗಳನ್ನು ಸ್ವೀಕರಿಸಲು ನಿರಾಕರಿಸಿದರೆ ಮತ್ತು ಅದಕ್ಕೆ ಕಾರಣರಾದ ಜನರಿಗೆ ಪೊಲೀಸರೇ ರಕ್ಷಣೆ ನೀಡಿದರೆ, ರಾಜ್ಯ ಚುನಾವಣಾ ಆಯೋಗವು ಇದಕ್ಕೆ ಸ್ಪಂದಿಸದಿದ್ದರೆ ಮತ್ತು ಡಿಜಿಪಿ ಹಾಗೂ ಗೃಹ ಕಾರ್ಯದರ್ಶಿಗಳು ಮೌನವಾಗಿ ಉಳಿದರೆ, ಇಲ್ಲಿನ ಸಂವಿಧಾನದ ಸ್ಥಿತಿಯ ಬಗ್ಗೆ ಅದು ಏನನ್ನು ಹೇಳುತ್ತದೆ?” ಎಂದು ಜಗನ್ ಪ್ರಶ್ನಿಸಿದ್ದಾರೆ.

ನಾಮಪತ್ರ ಸಲ್ಲಿಕೆಯ ಮೊದಲ ದಿನದಂದು, ಪುಂಗನೂರಿನಲ್ಲಿ ವೈಎಸ್‌ಆರ್‌ಸಿಪಿ ಸಂಸದ ಮಿಥುನ್ ರೆಡ್ಡಿ ಅವರ ಬೆಂಗಾವಲು ವಾಹನದ ಮೇಲೆ ಟಿಡಿಪಿ ಸದಸ್ಯರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಮಿಥುನ್ ರೆಡ್ಡಿ ಮತ್ತು ಅಭ್ಯರ್ಥಿಗಳು ಮೂರು ಗಂಟೆಗಳ ಕಾಲ ಕಾಯ್ದ ಹೊರತಾಗಿಯೂ ಚುನಾವಣಾಧಿಕಾರಿಗಳು ನಾಮಪತ್ರಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಜಗನ್ ಆರೋಪಿಸಿದ್ದಾರೆ.

ವೈಎಸ್‌ಆರ್‌ಸಿಪಿಯ ಭದ್ರಕೋಟೆಯಾದ ಪುಲಿವೆಂದುಲಾದಲ್ಲಿ ಪೊಲೀಸರೇ ಟಿಡಿಪಿ ಗೂಂಡಾಗಳಂತೆ ವರ್ತಿಸಿದ್ದಾರೆ ಎಂದು ಜಗನ್ ಆರೋಪ ಮಾಡಿದ್ದಾರೆ. “ವೈಎಸ್‌ಆರ್‌ಸಿಪಿ ಸಂಸದ ವೈ.ಎಸ್. ಅವಿನಾಶ್ ರೆಡ್ಡಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದರೂ ಸಹ, ನಾಮಪತ್ರ ಸಲ್ಲಿಸಲು ಹೋದ ಅಭ್ಯರ್ಥಿಗಳನ್ನು ತಡೆಯಲಾಗಿದೆ. ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಲ್ಲದೆ, ಎಕೆ-47 ರೈಫಲ್‌ಗಳಿಂದ ಹಲವು ಸುತ್ತು ಗುಂಡು ಹಾರಿಸಿದ್ದಾರೆ” ಎಂದು ಜಗನ್ ಹೇಳಿದ್ದಾರೆ.

ಪಾರದರ್ಶಕ ಮತ್ತು ನ್ಯಾಯಸಮ್ಮತ ಚುನಾವಣೆಯಲ್ಲಿ ತಮಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಅಪನಂಬಿಕೆಯಿಂದ ಚಂದ್ರಬಾಬು ನಾಯ್ಡು ಅವರು ಹೀಗೆ ಮಾಡುತ್ತಿದ್ದಾರೆ. “ಸರ್ಕಾರವು ಜನರಿಗೆ ಸೇವೆ ಸಲ್ಲಿಸುವ ಮೂಲಕ ಅವರ ಮತಗಳನ್ನು ಕೇಳಬೇಕೇ ಹೊರತು, ಅವರನ್ನು ಹೆದರಿಸುವ ಅಥವಾ ವಂಚಿಸುವ ಮೂಲಕ ಅಲ್ಲ” ಎಂದು ಜಗನ್ ವಾಗ್ದಾಳಿ ನಡೆಸಿದ್ದಾರೆ.






































 

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

“ನನ್ನ ಮೇಲೆ 45 ಮಾನನಷ್ಟ ಕೇಸ್ ಇವೆ, ಆದರೆ ವೋಟ್ ಚೋರಿ ಆರೋಪಕ್ಕೆ ಕೇಸ್ ಹಾಕಲ್ಲ” ನರೇಂದ್ರ ಮೋದಿ ಹಾಗೂ ಚುನಾವಣಾ ಆಯೋಗದ ವಿರುದ್ಧ ರಾಹುಲ್ ವಾಗ್ದಾಳಿ

"ನನ್ನ ವಿರುದ್ಧ ದೇಶಾದ್ಯಂತ ಮಾನನಷ್ಟ ಪ್ರಕರಣಗಳು ಸೇರಿದಂತೆ 45ಕ್ಕೂ ಹೆಚ್ಚು ಕೇಸ್‌ಗಳಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಸಂಬಂಧಿಸಿದ ವಿಷಯಗಳ ಮೇಲೂ ಮೊಕದ್ದಮೆಗಳಿವೆ. ಆದರೆ,...

ದಲಿತ ವಿದ್ಯಾರ್ಥಿ ಸಾಹಿಲ್ ವಾಕೋಡೆ ಸಾವು : ಐಐಟಿ ಬಾಂಬೆ ಬಳಿಯ ಪ್ರತಿಭಟನಾ ಸ್ಥಳ ತೆರವು; ಪೋಷಕರನ್ನು ವಶಕ್ಕೆ ಪಡೆದ ಪೊಲೀಸರು

ಐಐಟಿ ಬಾಂಬೆ ಬಳಿಯ ಪ್ರತಿಭಟನಾ ಸ್ಥಳವನ್ನು ಪೊಲೀಸರು ಭಾನುವಾರ (ಅ.18) ಧ್ವಂಸಗೊಳಿಸಿದ್ದಾರೆ ಮತ್ತು ಅದೇ ಸಂಸ್ಥೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವಿದ್ಯಾರ್ಥಿ ಸಾಹಿಲ್ ವಾಕೋಡೆ ಅವರ ಪೋಷಕರು ಮತ್ತು ಹಲವಾರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದಾರೆ....

ಫ್ರಾನ್ಸ್‌ನಲ್ಲಿ ಭುಗಿಲೆದ್ದ ಜನಾಕ್ರೋಶ: ಬೆಲೆ ಏರಿಕೆ ಹಾಗೂ ಸಾರ್ವಜನಿಕ ಸೇವೆಗಳ ಕಡಿತ ವಿರೋಧಿಸಿ ಬೃಹತ್ ಪ್ರತಿಭಟನೆ; ಹಿಂಸಾಚಾರದಲ್ಲಿ 1,800ಕ್ಕೂ ಅಧಿಕ ಮಂದಿ ವಶ!

ಜೀವನ ವೆಚ್ಚದ ಭಾರಿ ಏರಿಕೆ, ಕುಸಿದುಬೀಳುತ್ತಿರುವ ಶಾಲಾ-ಕಾಲೇಜುಗಳ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳ ಕಡಿತವನ್ನು ಖಂಡಿಸಿ ಫ್ರಾನ್ಸ್‌ನಾದ್ಯಂತ ಶನಿವಾರ ಲಕ್ಷಾಂತರ ಜನರು ರಸ್ತೆಗಿಳಿದು ನಡೆಸಿದ ಬೃಹತ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ವಿದ್ಯಾರ್ಥಿ...

ಪ.ಬಂಗಾಳ : ದುರ್ಗಾ ಪೂಜೆಗಳಲ್ಲಿ ಎಡಪಕ್ಷಗಳ ಪುಸ್ತಕ ಮಳಿಗೆಗಳ ಮೇಲೆ ದಾಳಿ

ಶನಿವಾರ (ಅಕ್ಟೋಬರ್ 17) ಸಂಜೆ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಶನ್‌ನ (ಕೆಎಂಸಿ) ತಂಡವೊಂದು ನಾಲ್ಕು ದಿನಗಳ ಹಿಂದೆ ಜಾದವ್‌ಪುರದಲ್ಲಿ ಸ್ಥಾಪಿಸಲಾಗಿದ್ದ ಪುಸ್ತಕ ಮಳಿಗೆಯನ್ನು ಧ್ವಂಸಗೊಳಿಸಲು ಆಗಮಿಸಿದಾಗ, ಕೇಂದ್ರ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಆ...

ಎಸ್‌ಐಆರ್ ಗೊಂದಲ: ರದ್ದಾಗಿರುವ ಮತದಾರರನ್ನು ಮರಳಿ ಸೇರಿಸಲು ‘ಫಾರ್ಮ್ 6’ ತಿದ್ದುಪಡಿಗೆ ಮಹಾರಾಷ್ಟ್ರ ಪ್ರಸ್ತಾಪ; ಜೈಲು ಶಿಕ್ಷೆಯ ಭೀತಿಯಲ್ಲಿ ಜನರು!

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಹೆಸರು ರದ್ದಾಗಿರುವ ಹಳೆಯ ಮತದಾರರನ್ನು ಮರಳಿ ಪಟ್ಟಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆಯಲ್ಲಿ ಭಾರಿ ಆಡಳಿತಾತ್ಮಕ ಮತ್ತು ಕಾನೂನು ತೊಡಕು ಎದುರಾಗಿದೆ. ಎಸ್‌ಐಆರ್ ಪರಿಷ್ಕರಣೆಯಲ್ಲಿ...

ಗ್ಯಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ : ಬೆಂಗಳೂರಿನ ಟೌನ್‌ಹಾಲ್ ಬಳಿ ಪ್ರತಿಭಟಿಸಿದವರ ಬಂಧನ, ಬಿಡುಗಡೆ

ಶನಿವಾರ (ಅಕ್ಟೋಬರ್ 17) ಬೆಂಗಳೂರಿನ ಟೌನ್ ಹಾಲ್ ಬಳಿ ಮತದಾರರ ಪಟ್ಟಿಗಳ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್‌ಐಆರ್) ಪ್ರಕ್ರಿಯೆಯ ವಿರುದ್ಧ ಪ್ರತಿಭಟನೆ ನಡೆಸಿದ ಹಾಗೂ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ...

ಆಂಧ್ರದಲ್ಲಿ ಮುಂದುವರಿದ ಟಿಡಿಪಿ-ವೈಎಸ್‌ಆರ್‌ಸಿಪಿ ಸಂಘರ್ಷ : ಪರಿಸ್ಥಿತಿ ಹತೋಟಿಗೆ ತರಲು ಗಾಳಿಯಲ್ಲಿ ಗುಂಡು ಹಾರಿಸಿದ ಕಡಪಾ ಪೊಲೀಸರು

ಸ್ಥಳೀಯ ಸಂಸ್ಥೆಗಳ ಚುನಾವಣೆಯ ನಾಮಪತ್ರ ಸಲ್ಲಿಕೆಯ ಎರಡನೇ ದಿನವಾದ ಶನಿವಾರ (ಅಕ್ಟೋಬರ್ 17) ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಘರ್ಷಗಳು ಮುಂದುವರಿದಿವೆ. ವೈಎಸ್ಆರ್ ಕಾಂಗ್ರೆಸ್ ಪಕ್ಷದ (ವೈಎಸ್ಆರ್‌ಸಿಪಿ) ಭದ್ರಕೋಟೆಯಾಗಿರುವ ವೈಎಸ್ಆರ್ ಕಡಪ ಜಿಲ್ಲೆಯ ಪುಲಿವೆಂದುಲದಲ್ಲಿ...

ಮಧ್ಯಪ್ರದೇಶ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ; 14 ಸಾವು, ಹಲವರಿಗೆ ಗಂಭೀರ ಗಾಯ

ಗ್ವಾಲಿಯರ್: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಶೀತಲಾ ಮಾತಾ ದೇವಸ್ಥಾನದ ಬಳಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿದ್ದ ಭಕ್ತಾದಿಗಳ ಮೇಲೆ ಅತಿವೇಗವಾಗಿ ಬಂದ ಲಾರಿಯೊಂದು ನುಗ್ಗಿದ ಪರಿಣಾಮ ಕನಿಷ್ಠ 14 ಜನರು ದಾರುಣವಾಗಿ ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿರುವ...

ಕೋಲ್ಕತ್ತಾ ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 19ಕ್ಕೆ ಏರಿಕೆ; ಏಳು ಮಂದಿಯ ಬಂಧನ

ಕೋಲ್ಕತ್ತಾದ ಸಮುದಾಯ ದುರ್ಗಾ ಪೂಜಾ ಪೆಂಡಾಲ್‌ನಲ್ಲಿ ಶನಿವಾರ (ಅ.17) ಸಂಜೆ ಸಂಭವಿಸಿದ ಕಾಲ್ತುಳಿತ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ. ಸುಮಾರು 25 ಮಂದಿ ಗಾಯಗೊಂಡಿದ್ದು, ಕೋಲ್ಕತ್ತಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ...

ಯುಎಪಿಎ ಕಾಯಿದೆಯಡಿ ಆರೋಪ ಹೊರಿಸಿದ ಮಾತ್ರಕ್ಕೆ ವಿದೇಶ ಪ್ರಯಾಣದ ಹಕ್ಕು ಕಸಿಯಲಾಗದು: ನತಾಶಾ ನರ್ವಾಲ್‌ಗೆ ದೆಹಲಿ ಹೈಕೋರ್ಟ್ ಅಭಯ

ಒಬ್ಬ ವ್ಯಕ್ತಿಯ ವಿರುದ್ಧ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ’ (UAPA) ಯಂತಹ ಕಠಿಣ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂಬ ಒಂದೇ ಕಾರಣಕ್ಕೆ, ಅವರ ವಿದೇಶ ಪ್ರಯಾಣದ ಮೂಲಭೂತ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು...