ವಿಚಾರಣೆಯ ಅವಧಿಯಲ್ಲಿ ಶಾಂತಿ ಕಾಪಾಡುವ ಸಲುವಾಗಿ ಒಬ್ಬರ ಜಾಮೀನಿನೊಂದಿಗೆ (ಶ್ಯೂರಿಟಿ) 10,000 ರೂ. ಮೌಲ್ಯದ ಬಾಂಡ್ (ಮುಚ್ಚಳಿಕೆ ಪತ್ರ) ಸಲ್ಲಿಸುವಂತೆ ದೆಹಲಿ ಪೊಲೀಸರು ತಮಗೆ ನೀಡಿದ್ದ ನೋಟಿಸ್ ಅನ್ನು ಪ್ರಶ್ನಿಸಿ ವಿದ್ಯಾರ್ಥಿ ಸಂಘಟನೆ ಆಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ (ಎಐಎಸ್‌ಎ) ನಾಯಕಿ ನೇಹಾ ಬೋರಾ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ನೇಹಾ ಅವರ ಕಾನೂನು ತಂಡದ ಪ್ರಕಾರ, ರಜಾಕಾಲದ ಪೀಠದ ಮುಂದೆ ತುರ್ತು ವಿಚಾರಣೆಯನ್ನು ಕೋರಲಾಗಿದೆ ಎಂದು livelaw.in ವರದಿ ಮಾಡಿದೆ.
ಶುಕ್ರವಾರ (ಅ.16) ಸಂಜೆ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ನಡೆದ ‘ಲೆಹ್ರಾ ದೋ ತಿರಂಗಾ’ ಮೆರವಣಿಗೆಗೆ ಮುನ್ನ ಬೋರಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಮರುದಿನ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಯಿತು. ಮಂಡಿ ಹೌಸ್‌ನಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಿಂದ ಆಕೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ದೆಹಲಿ ಪೊಲೀಸರ ಪ್ರಕಾರ, ದೆಹಲಿ ಪೊಲೀಸ್ ಕಾಯಿದೆಯ ಸೆಕ್ಷನ್ 65ರ ಅಡಿಯಲ್ಲಿನ ನಿಯಮಾವಳಿಗಳು ಪೂರ್ಣಗೊಳಿಸಿದ ನಂತರ ನೇಹಾ ಅವರನ್ನು ಬಿಡುಗಡೆ ಮಾಡಲಾಗಿದೆ.
ಶಾಂತಿಭಂಗವಾಗುವ ಆತಂಕವಿದೆ ಎಂದು ಉಲ್ಲೇಖಿಸಿದ ಪೊಲೀಸರು, ‘ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ’ಯ (ಬಿಎನ್‌ಎಸ್‌ಎಸ್) 126 ಮತ್ತು 170ನೇ ಸೆಕ್ಷನ್‌ಗಳ ಅಡಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ಪಡೆದಿದ್ದರು. ಭಾನುವಾರ (ಅ.18) ಸಂಜೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ (ಎಸ್‌ಇಎಂ) ಅವರನ್ನು ಬಿಡುಗಡೆ ಮಾಡಿದ್ದಾರೆ.
ಪೊಲೀಸರ ನೋಟಿಸ್ ಮೇಲ್ನೋಟಕ್ಕೆ ಅಸ್ಪಷ್ಟವಾಗಿದೆ, ತಪ್ಪು ಮಾಹಿತಿಯಿಂದ ಕೂಡಿದೆ ಮತ್ತು ಸಂವಿಧಾನದ ವಿಧಿ 19 (ವಾಕ್ ಸ್ವಾತಂತ್ರ್ಯ ಮತ್ತು ಶಾಂತಿಯುತವಾಗಿ ಸಭೆ ಸೇರುವ ಹಕ್ಕು) ಹಾಗೂ ವಿಧಿ 21 (ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಅನ್ನು ಉಲ್ಲಂಘಿಸುತ್ತದೆ ಎಂದು ನೇಹಾ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದಾರೆ.
ಪ್ರಸ್ತುತ ದೆಹಲಿ ಹೈಕೋರ್ಟ್‌ಗೆ ದಸರಾ ರಜೆ ಇರುವುದರಿಂದ ನ್ಯಾಯಾಲಯವು ಮುಚ್ಚಲ್ಪಟ್ಟಿದೆ (ಅಕ್ಟೋಬರ್ 26 ರಂದು ಪುನರಾರಂಭಗೊಳ್ಳಲಿದೆ). ಹೀಗಾಗಿ, ಈ ನೋಟಿಸ್‌ಗೆ ತಕ್ಷಣವೇ ತಡೆಯಾಜ್ಞೆ ನೀಡಬೇಕು ಮತ್ತು ಅದನ್ನು ಹಿಂಪಡೆಯಬೇಕು ಎಂದು ಕೋರಿ ರಜಾಕಾಲದ ಪೀಠದ ಮುಂದೆ ತುರ್ತು ವಿಚಾರಣೆ ನಡೆಸುವಂತೆ ನೇಹಾ ಪರ ವಕೀಲರು ವಿನಂತಿಸಿದ್ದಾರೆ.
ಅರ್ಹ ಮತದಾರರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿಸುವ ಅಪಾಯವಿದೆ ಎಂದು ಪ್ರತಿಪಾದಿಸುತ್ತಿರುವ ವಿರೋಧ ಪಕ್ಷಗಳು, ವಿದ್ಯಾರ್ಥಿ ಸಂಘಟನೆಗಳು ಮತ್ತು ನಾಗರಿಕ ಸಮಾಜ ಸಂಘಟನೆಗಳು ‘ಎಸ್‌ಐಆರ್’ ವಿರುದ್ಧ ಪ್ರತಿಭಟನೆ ನಡೆಸುತ್ತಿರುವಾಗ ಈ ಬಂಧನಗಳು ನಡೆದಿವೆ.


