ನವದೆಹಲಿಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕೃತ ನಿವಾಸದ ಬಳಿ ಇರುವ ಐತಿಹಾಸಿಕ ಮಸೀದಿಯೊಂದಕ್ಕೆ ಅಕ್ಟೋಬರ್ 19, ಸೋಮವಾರದಂದು ತೆರವು ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ. ಭೂಮಿ ಮತ್ತು ಅಭಿವೃದ್ಧಿ ಕಚೇರಿಯು (ಎಲ್&ಡಿಒ) ಈ ಆವರಣವನ್ನು ‘ಅನಧಿಕೃತ’ ಎಂದು ಘೋಷಿಸಿದ್ದು, ಆರು ದಿನಗಳ ಒಳಗಾಗಿ ಅದನ್ನು ಖಾಲಿ ಮಾಡುವಂತೆ ಆದೇಶಿಸಿದೆ ಎಂದು ವರದಿಗಳು ಹೇಳಿವೆ.
ನವದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ವೆಬ್ಸೈಟ್ನಲ್ಲಿ ಪಾರಂಪರಿಕ ಆಸ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ರೇಸ್ ಕೋರ್ಸ್ ಮಸೀದಿಯ ವಿದ್ಯುತ್ ಮತ್ತು ನೀರು ಸರಬರಾಜನ್ನು ಅಕ್ಟೋಬರ್ 7ರಂದು ಕಡಿತಗೊಳಿಸಲಾಗಿದ್ದು, ಪ್ರಾರ್ಥನಾ ಮಂದಿರಕ್ಕೆ ಭಕ್ತರ ಪ್ರವೇಶದ ಕುರಿತು ಕಳವಳ ಮೂಡಿಸಿದೆ. ಈ ಮಸೀದಿಯು ಸರ್ಕಾರಿ ಭೂಮಿಯಲ್ಲಿದೆ ಎಂದು ಎಲ್&ಡಿಒ ಪ್ರತಿಪಾದಿಸುತ್ತಿದೆ. ಈ ವಿವಾದದ ನಡುವೆ ಮಸೀದಿಯ ಪಾರಂಪರಿಕ ಆಸ್ತಿಯ ಮಾನ್ಯತೆಯೂ ಸಹ ತೀವ್ರ ಪರಿಶೀಲನೆಗೆ ಒಳಪಟ್ಟಿದೆ.
ಸಚಿವರ ತುರ್ತು ಮಧ್ಯಪ್ರವೇಶ ಕೋರಿದ ಓವೈಸಿ
ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ಅವರು ಈ ಪ್ರಕರಣಕ್ಕೆ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ‘ತುರ್ತು ಮಧ್ಯಸ್ಥಿಕೆ’ ಅಗತ್ಯವಿದೆ ಎಂದು ಹೇಳಿದ್ದಾರೆ.
“1977ರಿಂದಲೂ ಈ ಮಸೀದಿಯು ಗೆಜೆಟ್ನಲ್ಲಿ ದಾಖಲಾದ ವಕ್ಫ್ ಆಸ್ತಿಯಾಗಿದ್ದರೂ, ವಕ್ಫ್ ಮಂಡಳಿಯು ಧ್ವಂಸ ಆದೇಶವನ್ನು ಪ್ರಶ್ನಿಸಿಲ್ಲ ಅಥವಾ ಸಮಸ್ಯೆಯನ್ನು ಬಗೆಹರಿಸಲು ಯಾವುದೇ ಪ್ರಯತ್ನವನ್ನೂ ಮಾಡಿಲ್ಲ” ಎಂದು ಎಕ್ಸ್ ಪೋಸ್ಟ್ನಲ್ಲಿ ಓವೈಸಿ ತಿಳಿಸಿದ್ದಾರೆ.
“ಬಳಕೆಯ ಮೂಲಕ ವಕ್ಫ್’ (waqf by user) ಆಗಿರುವುದರಿಂದ, ವಕ್ಫ್ ತಿದ್ದುಪಡಿ ಕಾಯಿದೆ ಕೂಡ ಈ ಮಸೀದಿಯನ್ನು ರಕ್ಷಿಸುತ್ತದೆ. ಅಲ್ಲದೆ, ಈ ಹಿಂದೆ ನೋಂದಾಯಿಸಲಾದ ಇಂತಹ ಎಲ್ಲಾ ಆಸ್ತಿಗಳು ರಕ್ಷಣೆಯನ್ನು ಪಡೆಯುವುದನ್ನು ಮುಂದುವರಿಸುತ್ತವೆ. ಆದರೂ, ಯಾವುದೇ ಪ್ರಯತ್ನ ಮಾಡಲಾಗಿಲ್ಲ” ಎಂದು ಓವೈಸಿ ಬರೆದುಕೊಂಡಿದ್ದಾರೆ.
2023ರಿಂದ ದೆಹಲಿ ವಕ್ಫ್ ಮಂಡಳಿಯನ್ನು ರಚಿಸದಿರುವುದರಿಂದ, ಈ ವಿಷಯವನ್ನು ಬಗೆಹರಿಸುವುದು ಸಚಿವರ ಜವಾಬ್ದಾರಿಯಾಗಿದೆ ಎಂದು ಓವೈಸಿ ಹೇಳಿದ್ದಾರೆ. ಅಲ್ಲದೆ, ಮಂಡಳಿಯ ಸಿಇಒ ಈ ವಿಷಯದಲ್ಲಿ ಮಧ್ಯಪ್ರವೇಶಿಸಬಹುದಿತ್ತು, ಆದರೆ ‘ಅದೂ ಕೂಡ ಆಗಿಲ್ಲ” ಎಂದಿದ್ದಾರೆ.
ರೇಸ್ ಕೋರ್ಸ್ ಮಸೀದಿ ಮತ್ತು ಅದರ ಪಕ್ಕದಲ್ಲಿರುವ ಸ್ಮಶಾನವನ್ನು ರಕ್ಷಿಸಲು ಜಮಿಯತ್ ಉಲಮಾ-ಎ-ಹಿಂದ್ ಕೂಡ ರಿಜಿಜು ಅವರ ಮಧ್ಯಪ್ರವೇಶವನ್ನು ಕೋರಿದೆ.
ಸಂಸ್ಥೆಯ ನಿಯೋಗವನ್ನು ಪ್ರತಿನಿಧಿಸುವ ಮೊಹಮ್ಮದ್ ಹಕೀಮುದ್ದೀನ್ ಖಾಸ್ಮಿ ಅವರು ಮನವಿಯೊಂದನ್ನು ಸಲ್ಲಿಸಿದ್ದು, 1977ರ ದೆಹಲಿ ಗೆಜೆಟ್ನಲ್ಲಿ ಉಲ್ಲೇಖಿಸಲಾದ ಎನ್ಡಿಎಂಸಿ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಹಾಗೂ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ನಿರ್ವಹಿಸುವ ಪರಿಷ್ಕೃತ ಪಟ್ಟಿಯಲ್ಲಿ ಈ ಸ್ಥಳವು ಸೇರಿದೆ ಎಂದು ಆ ಮನವಿಯಲ್ಲಿ ತಿಳಿಸಲಾಗಿದೆ.
ಜಮಿಯತ್ ದೆಹಲಿ ವಕ್ಫ್ ಬೋರ್ಡ್ ಮತ್ತು ಎನ್ಡಿಎಂಸಿಯಿಂದ ವರದಿಗಳನ್ನು ಕೋರಿದ್ದು, ಕಾನೂನು ವಿವಾದ ಇತ್ಯರ್ಥವಾಗುವವರೆಗೂ ಯಾವುದೇ ರೀತಿಯ ಧ್ವಂಸ ಕ್ರಮಗಳನ್ನು ಕೈಗೊಳ್ಳದಂತೆ ಅಧಿಕಾರಿಗಳನ್ನು ಒತ್ತಾಯಿಸಿದೆ. ‘ದಿ ಟ್ರಿಬ್ಯೂನ್’ ವರದಿಯ ಪ್ರಕಾರ, ರಿಜಿಜು ಅವರು ಈ ಸಂಘಟನೆಯ ಮನವಿಯನ್ನು ಆಲಿಸಿದ್ದು, ಈ ವಿಷಯದಲ್ಲಿ “ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು” ಮಾಡುವುದಾಗಿ ಭರವಸೆ ನೀಡಿದ್ದಾರೆ.
“ನಾನು ತೀವ್ರ ಸಂಕಷ್ಟದಲ್ಲಿದ್ದೇನೆ” : ಆರು ತಿಂಗಳಿನಿಂದ ಮಾಡುತ್ತಿರುವ ಮನವಿಗಳಿಗೆ ಯಾರೂ ಸ್ಪಂದಿಸಿಲ್ಲ ಎಂದ ಇಮಾಮ್
ಮಸೀದಿಯ ಇಮಾಮ್ ಮೊಹಮ್ಮದ್ ಹಾರೂನ್ ಅವರು ವಿಡಿಯೋ ಹೇಳಿಕೆಯೊಂದರಲ್ಲಿ, ಕಳೆದ ಆರು ತಿಂಗಳಿನಿಂದ ದೆಹಲಿ ವಕ್ಫ್ ಮಂಡಳಿಯ ಬಳಿ ಈ ವಿಷಯವನ್ನು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದರೂ, ಯಾವುದೇ ಫಲಿತಾಂಶ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ನೀರು ಮತ್ತು ವಿದ್ಯುತ್ ಸಂಪರ್ಕ ಕಡಿತದ ಕುರಿತು ಎನ್ಡಿಎಂಸಿಗೆ ಪತ್ರ ಬರೆದಿದ್ದನ್ನು ಹೊರತುಪಡಿಸಿ, ಈ ವಿಷಯವನ್ನು ಬಗೆಹರಿಸಲು ಮಂಡಳಿಯು ಯಾವುದೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
“ನಾನು ವಕ್ಫ್ ಮಂಡಳಿಯ ಸಿಇಒ ಅವರಿಗೆ ಪದೇ ಪದೇ ಮನವಿ ಮಾಡಿಕೊಂಡಿದ್ದರೂ, ನನ್ನ ದೂರಿನ ಕಡೆಗೆ ಯಾರೂ ಗಮನ ಹರಿಸಿಲ್ಲ. ಕುಡಿಯುವ ನೀರು ಕೂಡ ಖಾಲಿಯಾಗಿದೆ. ಮಸೀದಿಗೆ ಹೋಗುವ ದಾರಿಯನ್ನು ತಡೆದಿರುವುದರಿಂದ ಬೇರೆಲ್ಲಿಂದಲೂ ನೀರು ತರಲು ಸಾಧ್ಯವಾಗುತ್ತಿಲ್ಲ; ಇದರಿಂದ ಮಸೀದಿಗೆ ಬಂದು ಹೋಗಲು ತುಂಬಾ ತೊಂದರೆಯಾಗುತ್ತಿದೆ” ಎಂದು ಹಾರೂನ್ ಹೇಳಿದ್ದಾರೆ.
“ಈ ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹೋಗುವಂತೆ ನಾನು ವಕ್ಫ್ ಮಂಡಳಿಗೆ ಹೇಳಿದೆ. ನಂತರ, ನಾನೇ ನ್ಯಾಯಾಲಯಕ್ಕೆ ಹೋಗಲು ಅನುಮತಿ ಕೋರಿದೆ. ದುರದೃಷ್ಟವಶಾತ್, ವಕ್ಫ್ ಮಂಡಳಿಯು ನ್ಯಾಯಾಲಯಕ್ಕೂ ಹೋಗಲಿಲ್ಲ ಮತ್ತು ನನ್ನನ್ನು ಹೋಗಲು ಅನುಮತಿಸಲೂ ಇಲ್ಲ” ಎಂದು ಇಮಾಮ್ ಹೇಳಿಕೊಂಡಿದ್ದಾರೆ.
“ಈ ಮಸೀದಿಯು ಅಧಿಕೃತ ಪಾರಂಪರಿಕ ಆಸ್ತಿಯಾಗಿದ್ದು, 2021ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ರೇಸ್ ಕೋರ್ಸ್ ಮಸೀದಿಯನ್ನು ‘ಅನಧಿಕೃತ’ ಅಥವಾ ‘ಒತ್ತುವರಿ’ ಎಂದು ಗುರುತಿಸಲಾಗಿಲ್ಲ ಎಂದು ಹಾರೂನ್ ವಾದಿಸಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳನ್ನು ಇನ್ನೂ ಸ್ವತಂತ್ರವಾಗಿ ಪರಿಶೀಲಿಸಲಾಗಿಲ್ಲ ಎಂದು maktoobmedia.com ಹೇಳಿದೆ.
“ನಮ್ಮ ಹಿತೈಷಿಗಳಲ್ಲಿ ಹಾಗೂ ನ್ಯಾಯಪ್ರಿಯ ಜನರಲ್ಲಿ, ಈ ಮಸೀದಿಯನ್ನು ಉಳಿಸಲು ಪ್ರಯತ್ನಿಸುವಂತೆ ನಾನು ಮನವಿ ಮಾಡುತ್ತೇನೆ. ನಾನು ನನ್ನಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ, ಆದರೆ ಇಂತಹ ಪ್ರಕರಣಗಳನ್ನು ನಿರ್ವಹಿಸಲು ಕಾನೂನುಬದ್ಧ ಅಧಿಕಾರ ಹೊಂದಿರುವ ವಕ್ಫ್ ಮಂಡಳಿಯು ನನಗಾಗಲಿ ಅಥವಾ ಈ ಮಸೀದಿಗಾಗಲಿ ಬೆಂಬಲವಾಗಿ ನಿಲ್ಲದಿರುವುದು ನನಗೆ ತೀವ್ರ ನೋವುಂಟುಮಾಡಿದೆ” ಎಂದು ಇಮಾಮ್ ಹಾರೂನ್ ಅಳಲು ತೋಡಿಕೊಂಡಿದ್ದಾರೆ.
Courtsy : maktoobmedia.com


